ಕಾಣಿಯೂರು ಕಾಲೇಜಿನಲ್ಲಿ ದುಶ್ಚಟಗಳ ವಿರುದ್ಧ ಜಾಗೃತಿ- ಸ್ವಾಸ್ಥ್ಯ ಸಂಕಲ್ಪ ಮಾಸಾಚರಣೆ

0

ದುಶ್ಟಟ ಮುಕ್ತ ಬದುಕಿನಿಂದ ನೆಮ್ಮದಿ- ಜಯರಾಮ ಕೆ

ಕಾಣಿಯೂರು: ವಿದ್ಯಾರ್ಥಿ ಜೀವನದ ದೆಸೆಯಿಂದಲೇ ಉತ್ತಮ ಕ್ರಿಯಾಶೀಲ ಹವ್ಯಾಸಗಳನ್ನು ರೂಢಿಸಿಕೊಂಡು ಉತ್ತಮ ಸಮಾಜ ಕಟ್ಟುವ ಕಾರ್ಯಕ್ರಮಕ್ಕೆ ದೃಢ ಸಂಕಲ್ಪಕೈಗೊಳ್ಳಬೇಕು ಎಂದು ಕಾಣಿಯೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಜಯಂತಿ ಅವರು ಹೇಳಿದರು.

ಅವರು ಶ್ರೀ ಕ್ಷೇತ್ರ ಧ. ಗ್ರಾ. ಯೋಜನೆ ಬಿ. ಸಿ ಟ್ರಸ್ಟ್ ಕಡಬ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ತಾಲೂಕು ಇವುಗಳ ಆಶ್ರಯದಲ್ಲಿ ಕಾಣಿಯೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ – ವಿದ್ಯಾರ್ಥಿನಿಯರಿಗಾಗಿ ತಾಲೂಕು ಮಟ್ಟದ ಸ್ವಾಸ್ಥ್ಯ ಸಂಕಲ್ಪ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಡಬ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಅಧ್ಯಕ್ಷರು, ನ್ಯಾಯವಾದಿ ಆಗಿರುವ ಮಹೇಶ್ ಕೆ ಸವಣೂರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಡ್ರಗ್ಸ್ ಮಾರಾಟ, ಮದ್ಯ ಸೇವನೆ ಕುರಿತಂತೆ ಹೆಚ್ಚಿನ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಇವುಗಳನ್ನು ತಡೆಯಲು ಎಲ್ಲರ ಸಹಕಾರವೂ ಅಗತ್ಯ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿದ್ದ ಪುತ್ತೂರಿನ ಹಿರಿಯ ನ್ಯಾಯವಾದಿ ಜಯಾನಂದರವರು ಮಾತನಾಡಿ, ಮನುಷ್ಯ ಜನ್ಮ ಶ್ರೇಷ್ಠ ಹಾಗೂ ಸಾರ್ಥಕ. ರೋಗಕ್ಕಿಂತ ಮಿಗಿಲಾದ ಶತ್ರು ಮತ್ತೊಂದಿಲ್ಲ. ದುಶ್ಟಟ ಮುಕ್ತ ಬದುಕಿನಿಂದ ನೆಮ್ಮದಿ ಸಾಧ್ಯವಿದೆ. ದುಶ್ಚಟಗಳ ವಿರುದ್ದ ಜಾಗೃತಿಯಾದರೆ ಇಡೀ ಬದುಕು ಪರಿಪೂರ್ಣವಾಗಲು ಸಾಧ್ಯವಿದೆ. ವಿದ್ಯಾರ್ಥಿ ಜೀವನ ಎಂದರೆ ಅತ್ಯಂತ ಮಹತ್ವದ್ದು. ಇಲ್ಲಿ ಯಾವುದೇ ಮಾದಕ ವಸ್ತುಗಳ ಕಡೆಗೆ ಆಕರ್ಷಿತರಾಗದಂತೆ ಎಚ್ಚರ ವಹಿಸಬೇಕು. ಇಂದು ಮೊಬೈಲ್ ಬಳಕೆ ಕೂಡಾ ವಿದ್ಯಾರ್ಥಿ ಬದುಕಿನಲ್ಲಿ ದಾರಿ ತಪ್ಪಿಸುವ ಕೆಲಸ ನಡೆಯುತ್ತದೆ ಎಂದರು.

ಕಾಣಿಯೂರು ಗ್ರಾ.ಪಂ.ಸದಸ್ಯ ರಾಮಣ್ಣ ಗೌಡ ಮುಗರಂಜ, ಸವಣೂರು ವಲಯದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸದಸ್ಯ ಲೋಕನಾಥ ವಜ್ರಗಿರಿ, ಸವಣೂರು ವಲಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಮಾಜಿ ಅಧ್ಯಕ್ಷ ವೇಣುಗೋಪಾಲ ಕಳುವಾಜೆ, ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಓಡಬಾಯಿ ಉಪಸ್ಥಿತರಿದ್ದರು. ವಲಯ ಮೇಲ್ವಿಚಾರಕಿ ವೀಣಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಉಪನ್ಯಾಸಕ ಜಗದೀಶ್ ವಂದಿಸಿದರು. ಈ ಸಂದರ್ಭದಲ್ಲಿ ನ್ಯಾಯವಾದಿ ಮಹೇಶ್ ಕೆ ಸವಣೂರು ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಸೇವಾಪ್ರತಿನಿಧಿಗಳಾದ ಕಾವ್ಯ ಕಾಣಿಯೂರು, ಕಾವ್ಯ ಚಾರ್ವಾಕ ಸಹಕರಿಸಿದರು.

LEAVE A REPLY

Please enter your comment!
Please enter your name here