ಕರ್ವೇಲು: ಹದಗೆಟ್ಟ ರಸ್ತೆಯಲ್ಲಿ ರಿಕ್ಷಾ ಪಲ್ಟಿ-ಸ್ಥಳೀಯರಿಂದ ರಸ್ತೆ ತಡೆದು ಆಕ್ರೋಶ

0

ಉಪ್ಪಿನಂಗಡಿ: ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ 34 ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯ ಕರ್ವೇಲು ಎಂಬಲ್ಲಿ ಮಾಡತ್ತಾರು ಹೋಗುವ ಮಣ್ಣಿನ ರಸ್ತೆಯು ಸಂಪೂರ್ಣ ಕೆಸರುಮಯವಾಗಿ ಹದಗೆಟ್ಟು ಹೋಗಿದ್ದು, ಈ ರಸ್ತೆಯಲ್ಲಿ ಆ.8ರಂದು ಅಟೋ ರಿಕ್ಷಾವೊಂದು ಪಲ್ಟಿಯಾಯಿತು. ಇದರಿಂದ ಆಕ್ರೋಶಿತರಾದ ಸ್ಥಳೀಯರು ರಸ್ತೆ ತಡೆ ನಡೆಸಿ ಗ್ರಾ.ಪಂ. ಅನ್ನು ತೀವೃವಾಗಿ ತರಾಟೆಗೆತ್ತಿಕೊಂಡ ಘಟನೆಯೂ ನಡೆಯಿತು.


ಮಾಡತ್ತಾರು ಹೋಗುವ ಮಣ್ಣಿನ ರಸ್ತೆಗೆ ಕರ್ವೇಲು ಬಳಿ ಚರಂಡಿ ವ್ಯವಸ್ಥೆಯನ್ನು ಗ್ರಾ.ಪಂ. ಕಲ್ಪಿಸದಿರುವುದರಿಂದ ಈ ರಸ್ತೆಯು ಹೊಂಡ- ಗುಂಡಿಗಳಿಂದ ಕೂಡಿತ್ತಲ್ಲದೇ, ಸಂಪೂರ್ಣ ಕೆಸರುಮಯವಾಗಿ ನಡೆದಾದಲೂ ಕಷ್ಟ ಪಡುವ ಸ್ಥಿತಿ ಎದುರಾಗಿತ್ತು.ಇದರಿಂದ ಶಾಲಾ ಮಕ್ಕಳನ್ನು ಬಿಟ್ಟು ತೆರಳುತ್ತಿದ್ದ ಇಸಾಕ್ ಎಂಬವರ ಅಟೋ ರಿಕ್ಷಾವು ಈ ರಸ್ತೆಯಲ್ಲಿ ಸ್ಕಿಡ್ ಆಗಿ ಮಗುಚಿ ಬಿದ್ದಿದೆ. ಇದರಿಂದ ಆಕ್ರೋಶಿತರಾದ ಸ್ಥಳೀಯರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಸ್ಥಳಕ್ಕೆ 34 ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷೆ ಸುಜಾತ ಆರ್. ರೈ, ಸದಸ್ಯರಾದ ರಮೇಶ್ ಸುಭಾಶ್‌ನಗರ, ಪ್ರಶಾಂತ್ ಎನ್. ಹಾಗೂ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸತೀಶ್ ಬಂಗೇರ ಡಿ. ಅವರು ತೆರಳಿದಾಗ ಪ್ರತಿಭಟನಕಾರರು ಅವರ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿ ಚರಂಡಿ ವ್ಯವಸ್ಥೆ ಕಲ್ಪಿಸಿ ಎಂದು ಮನವಿ ಮಾಡಿದರೂ ಗ್ರಾ.ಪಂ. ಯಾವುದೇ ಸ್ಪಂದನೆ ನೀಡಿಲ್ಲ ಎಂದು ಗ್ರಾ.ಪಂ. ಅನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ನಾಳೆನೇ ಅಲ್ಲಿ ಚರಂಡಿ ವ್ಯವಸ್ಥೆ ಮಾಡಿ ತಾತ್ಕಾಲಿಕ ದುರಸ್ತಿ ಮಾಡುವುದಾಗಿ ಗ್ರಾ.ಪಂ.ನಿಂದ ಭರವಸೆ ಸಿಕ್ಕಿದ ಬಳಿಕ ಪ್ರತಿಭಟನೆ ಹಿಂಪಡೆದರು.


ಪ್ರತಿಭಟನೆಯಲ್ಲಿ ಸ್ಥಳೀಯರಾದ ಶರೀಫ್ ಕವೇಲು, ಅಬ್ದುರ್ರಹ್ಮಾನ್, ಆಚು ಪಾಳ್ಯ, ಹ್ಯಾರೀಸ್, ವಾಸು ಪೂಜಾರಿ, ಜಗದೀಶ್, ರಜಾಕ್, ಸತ್ತಾರ್ ಬರಮೇಲು ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here