ಉಪ್ಪಿನಂಗಡಿ: ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ಬ್ಯಾಂಕ್ ಆಫ್ ಬರೋಡ ಉಪ್ಪಿನಂಗಡಿ ಶಾಖೆ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಹಾಗೂ ದಿವ್ಯ ಜ್ಯೋತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಉಪ್ಪಿನಂಗಡಿ ಇದರ ಜಂಟಿ ಆಶ್ರಯದಲ್ಲಿ ಎರಡು ತಿಂಗಳ ಕಾಲ ನಡೆದ ಹೊಲಿಗೆ ತರಬೇತಿ ಕಾರ್ಯಗಾರದ ಸಮಾರೋಪ ಸಮಾರಂಭ ಉಪ್ಪಿನಂಗಡಿ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು.
ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ್ ಶೆಟ್ಟಿ ಮಾತನಾಡಿ, ಸ್ವಉದ್ಯೋಗದ ಮೂಲಕ ಮಹಿಳೆಯರು ಅಭಿವೃದ್ಧಿಯನ್ನು ಸಾಧಿಸಿ ಸ್ವಾವಲಂಭಿಗಳಾಗಬೇಕು ಎಂದರು.ವಿಕಾಸ ಟ್ರಸ್ಟ್ ನ ಕಾರ್ಯಕ್ರಮ ವ್ಯವಸ್ಥಾಪಕ ಜೀವನ್ ಕೊಲ್ಯ ಮಾತನಾಡಿ, ಸ್ವ-ಉದ್ಯೋಗದ ನಿಯಮಗಳು, ಸ್ವ-ಉದ್ಯೋಗಕ್ಕೆ ಸಿಗುವ ಬ್ಯಾಂಕ್ ಸೌಲಭ್ಯಗಳು ಹಾಗೂ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
ಬ್ಯಾಂಕ್ ಆಫ್ ಬರೋಡಾದ ಶಾಖಾ ವ್ಯವಸ್ಥಾಪಕ ವೆಂಕಟರಮಣ, ಬ್ಯಾಂಕಿನಿಂದ ಸಿಗುವ ಸೌಲಭ್ಯಗಳ ಬಗ್ಗೆ ತಿಳಿಸಿದರು. ವೇದಿಕೆಯಲ್ಲಿ ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಲಲಿತಾ, ಉಪಾಧ್ಯಕ್ಷೆ ವಿದ್ಯಾ ಲಕ್ಷ್ಮಿ ಪ್ರಭು, ಗ್ರಾಮ ಪಂಚಾಯತ್ ಕಾರ್ಯದರ್ಶಿ ಗೀತಾ ಶೇಖರ್, ತಾಲೂಕು ಅಭಿಯಾನ ನಿರ್ವಹಣೆ ಘಟಕದ ನಳಿನಿ, ದಿವ್ಯ ಜ್ಯೋತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಅಧ್ಯಕ್ಷೆ ನೀಲಾವತಿ ಉಪಸ್ಥಿತರಿದ್ದರು.
ಸಂಜೀವಿನಿಯ ಮುಖ್ಯ ಪುಸ್ತಕ ಬರಹಗಾರರಾದ ಚೈತ್ರ ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿ ಪ್ರೇಮಲತಾ ವಂದಿಸಿದರು. ಪಶುಸಖಿ ಜಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.