ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿಗಳ ಆಯ್ಕೆ-ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು,ಪ್ರ.ಕಾರ್ಯದರ್ಶಿಗಳಾಗಿ ಉಮೇಶ್ ಗೌಡ ಕೋಡಿಬೈಲು,ಪ್ರಶಾಂತ್ ನೆಕ್ಕಿಲಾಡಿ:ನಗರ ಮಂಡಲ ಅಧ್ಯಕ್ಷ ಶಿವಕುಮಾರ್, ಪ್ರ.ಕಾರ್ಯದರ್ಶಿಗಳಾಗಿ ನಾಗೇಶ್ ಪ್ರಭು,ಅನಿಲ್ ತೆಂಕಿಲ, ಜಿಲ್ಲಾ ಉಪಾಧ್ಯಕ್ಷರಾಗಿ ಪ್ರಸನ್ನ ಕುಮಾರ್ ಮಾರ್ತ

0

ಪುತ್ತೂರು:ಪುತ್ತೂರು ಗ್ರಾಮಾಂತರ ಮಂಡಲ ಮತ್ತು ನಗರ ಮಂಡಲ ಬಿಜೆಪಿಗೆ ಕೊನೆಗೂ ಪದಾಧಿಕಾರಿಗಳ ನೇಮಕವಾಗುವ ಮೂಲಕ ಗೊಂದಲ,ಕುತೂಹಲಕ್ಕೆ ತೆರೆ ಎಳೆಯಲಾಗಿದೆ.ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷರಾಗಿ ದಯಾನಂದ ಶೆಟ್ಟಿ ಉಜಿರೆಮಾರು, ಪ್ರಧಾನ ಕಾರ್ಯದರ್ಶಿಗಳಾಗಿ ಉಮೇಶ್ ಗೌಡ ಕೋಡಿಬೈಲು ಮತ್ತು ಪ್ರಶಾಂತ್ ನೆಕ್ಕಿಲಾಡಿ ಅವರನ್ನು ಆಯ್ಕೆ ಮಾಡಲಾಗಿದೆ.ಪುತ್ತೂರು ನಗರ ಮಂಡಲದ ಅಧ್ಯಕ್ಷರಾಗಿ ಶಿವಕುಮಾರ್ ಕಲ್ಲಿಮಾರು, ಪ್ರಧಾನ ಕಾರ್ಯದರ್ಶಿಗಳಾಗಿ ನಾಗೇಶ್ ಪ್ರಭು ಮತ್ತು ಅನಿಲ್ ತೆಂಕಿಲ ಅವರನ್ನು ನಿಯುಕ್ತಿಗೊಳಿಸಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಆ.14ರಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪಕ್ಷದ ಪ್ರಮುಖರ ಸಭೆ ನಡೆದು ಪದಾಧಿಕಾರಿಗಳ ಘೋಷಣೆ ಮಾಡಲಾಗಿದೆ.ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ಪ್ರಸನ್ನ ಕುಮಾರ್ ಮಾರ್ತ ಅವರನ್ನು ನೇಮಕ ಮಾಡಲಾಗಿದೆ.

ದಯಾನಂದ ಶೆಟ್ಟಿ ಉಜಿರೆಮಾರ್: ಪುಣಚ ಬಿಜೆಪಿ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿರುವ ದಯಾನಂದ ಶಟ್ಟಿ ಉಜಿರೆಮಾರ್ ಅವರನ್ನು ಇದೀಗ ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
ದಯಾನಂದ ಶೆಟ್ಟಿ ಉಜಿರೆಮಾರ್‌ರವರು ವಿಟ್ಲ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಮಾಜಿ ಉಪಾಧ್ಯಕ್ಷರಾಗಿದ್ದು ಪ್ರಸ್ತುತ ನಿರ್ದೇಶಕರಾಗಿದ್ದಾರೆ.ಕಳೆದ ಹದಿನೈದು ವರುಷಗಳಿಂದ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾಗಿ ಸೇವೆಸಲ್ಲಿಸಿರುವ ಅವರು ಚಂದಳಿಕೆ ಯುವಕೇಸರಿ ಫ್ರ‍್ರೆಂಡ್ಸ್ ಕ್ಲಬ್, ಶ್ರೀರಾಮ ಫ್ರೆಂಡ್ಸ್ ಕ್ಲಬ್ ವಿಟ್ಲ, ಕುಂಡಡ್ಕ ಶ್ರೀ ವಿಷ್ಣುಮೂರ್ತಿ ಯುವಕ ಮಂಡಲದ ಗೌರವಾಧ್ಯಕ್ಷರಾಗಿದ್ದಾರೆ.ಕಳೆದ ಹಲವಾರು ವರುಷಗಳಿಂದ ಬಜರಂಗದಳದ ಸಕ್ರಿಯ ಕಾರ್ಯಕರ್ತನಾಗಿ ವಿವಿಧ ಹುದ್ದೆಗಳಲ್ಲಿ ತನ್ನ ಜವಾಬ್ದಾರಿಯನ್ನು ನಿರ್ವಹಿಸಿದ್ದರು.ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತನಾಗಿ ಸುದೀರ್ಘ ಸೇವೆ ಸಲ್ಲಿಸಿರುವ ದಯಾನಂದ ಶೆಟ್ಟಿ ಉಜಿರೆಮಾರ್‌ರವರು ಕಳೆದ ಹಲವಾರು ವರುಷಗಳಿಂದ ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದರು ಮಾತ್ರವಲ್ಲದೆ, ಹಲವಾರು ಧಾರ್ಮಿಕ ಸಾಮಾಜಿಕ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.

ಪ್ರಶಾಂತ್ ನೆಕ್ಕಿಲಾಡಿ: ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿರುವ ಪ್ರಶಾಂತ್ ನೆಕ್ಕಿಲಾಡಿಯವರು 34 ನೆಕ್ಕಿಲಾಡಿಯ ಶಿವಾಜಿನಗರ ನಿವಾಸಿಯಾಗಿದ್ದು, ಬಿಜೆಪಿ ಕಾರ್ಯಕರ್ತ ಹಾಗೂ ಸಂಘಪರಿವಾರದ ಸ್ವಯಂಸೇವಕನಾಗಿದ್ದಾರೆ.13 ವರ್ಷಗಳಿಂದ 34 ನೆಕ್ಕಿಲಾಡಿ ಗ್ರಾ.ಪಂ.ಸದಸ್ಯರಾಗಿರುವ ಇವರು, ಕಳೆದ ಅವಧಿಯಲ್ಲಿ ಎರಡೂವರೆ ವರ್ಷಗಳ ಕಾಲ ಗ್ರಾ.ಪಂ.ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.ನೆಕ್ಕಿಲಾಡಿಯ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರಾಗಿ, ಗ್ರಾಮ ಸಮಿತಿ ಕಾರ್ಯದರ್ಶಿಯಾಗಿಯೂ ಇವರು ಕಾರ್ಯನಿರ್ವಹಿಸಿದ್ದಾರೆ.ಕಳೆದ ಆರು ವರ್ಷಗಳಿಂದ ಆದರ್ಶನಗರದ ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಈ ಬಾರಿ 34 ನೆಕ್ಕಿಲಾಡಿಯ ಮೊಸರು ಕುಡಿಕೆ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಕಳೆದ ವಿಧಾನ ಸಭಾ ಚುನಾವಣೆ ಸಂದರ್ಭ ಅವರು ಪುತ್ತಿಲ ಪರಿವಾರದೊಂದಿಗೆ ಗುರುತಿಸಿಕೊಂಡಿದ್ದರಲ್ಲದೆ ಪುತ್ತಿಲ ಪರಿವಾರದ ತಾಲೂಕು ಉಪಾಧ್ಯಕ್ಷರೂ ಆಗಿದ್ದರು.ಪುತ್ತಿಲ ಪರಿವಾರದಿಂದ ನಡೆದ ಶ್ರೀನಿವಾಸ ಕಲ್ಯಾಣದ ಕಾರ್ಯಕ್ರಮದ ಸ್ವಾಗತ ಸಮಿತಿಯ ಸಂಚಾಲಕರಾಗಿಯೂ ಕಾರ್ಯನಿರ್ವಹಿಸಿದ್ದ ಇವರು ನೆಕ್ಕಿಲಾಡಿ ಮೋಕ್ಷಧಾಮ ಹಿಂದೂ ರುದ್ರಭೂಮಿಯ ಅಧ್ಯಕ್ಷರೂ ಆಗಿದ್ದಾರೆ.ತಾಲೂಕು ಯುವಗಾಣಿಗ ಸಂಘದ ಕಾರ್ಯದರ್ಶಿಯಾಗಿ, ನೆಕ್ಕಿಲಾಡಿಯ ಶ್ರೀ ಗುರುರಾಘವೇಂದ್ರ ಮಠದ ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.ನೆಕ್ಕಿಲಾಡಿ ವಿಶ್ವಮಿತ್ರ ಯುವಕ ಮಂಡಲದ ಸದಸ್ಯರಾಗಿರುವ ಇವರು ತಂದೆ ಶ್ರೀನಿವಾಸ ಯು, ತಾಯಿ ಚಂದ್ರಾವತಿ, ಪತ್ನಿ ಜ್ಯೋತಿ ಪಿ.ಎನ್, ಪುತ್ರರಾದ ಇಹಾನ್ ಮತ್ತು ತೃಷಾನ್ ಅವರೊಂದಿಗೆ ಸುಖೀ ಜೀವನ ನಡೆಸುತ್ತಿದ್ದಾರೆ.

ಉಮೇಶ್ ಗೌಡ ಕೋಡಿಬೈಲು: ಗ್ರಾಮಾಂತರ ಮಂಡಲದ ಇನ್ನೋರ್ವ ಪ್ರಧಾನ ಕಾರ್ಯದರ್ಶಿ ಉಮೇಶ್ ಗೌಡ ಕೋಡಿಬೈಲು ಅವರು ವೀರಮಂಗಲ ಕೋಡಿಬೈಲು ಪುಟ್ಟಣ್ಣ ಗೌಡ ಮತ್ತು ಲಕ್ಷ್ಮೀ ಅವರ ಪುತ್ರ. 2001ರಿಂದ 2013ರ ತನಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಡಲ ಜವಾಬ್ದಾರಿ ನಿರ್ವಹಿಸಿದ್ದು, ಹಿಂದು ಜಾಗರಣ ವೇದಿಕೆಯಲ್ಲಿ ಒಂದು ಅವಧಿಯಲ್ಲಿ ಸಹ ಸಂಚಾಲಕರಾಗಿದ್ದರು.ಪಕ್ಷದಲ್ಲಿ ಶಾಂತಿಗೋಡು ಗ್ರಾಮ ಸಮಿತಿಯಲ್ಲಿ ಶಕ್ತಿ ಕೇಂದ್ರದ ಕಾಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಇವರು ಇದೀಗ ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡಿದ್ದಾರೆ.ಈ ಹಿಂದೆ ಇವರು ಪುತ್ತಿಲ ಪರಿವಾರದ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸಿದ್ದರು.ಇವರು ಪತ್ನಿ ಪವಿತ್ರಾ, ಪುತ್ರರಾದ ಅಭಿನವ್ ಮತ್ತು ರಿಷಿಕ್ ಅವರೊಂದಿಗೆ ಸುಖೀ ಸಂಸಾರ ನಡೆಸುತ್ತಿದ್ದಾರೆ.

ಶಿವಕುಮಾರ್ ಕಲ್ಲಿಮಾರು: ನಗರ ಮಂಡಲದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶಿವಕುಮಾರ್ ಕಲ್ಲಿಮಾರು ಅವರು ಪಿ.ಭೀಮಾ ಭಟ್-ಹೈಮಾವತಿಯವರ ಪುತ್ರ.ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿರುವ ಇವರು ಪರ್ಲಡ್ಕ ಬೂತ್ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.ಇವರು ಪತ್ನಿ ಪರಮೇಶ್ವರಿ, ಪುತ್ರಿ ಶ್ರೀಗೌರಿ ಮತ್ತು ಸೇನೆಯಲ್ಲಿ ಕ್ಯಾಪ್ಟನ್ ಆಗಿರುವ ಅಳಿಯ ಮಧುರಾಜ್ ಅವರೊಂದಿಗೆ ಸುಖೀಜೀವನ ನಡೆಸುತ್ತಿದ್ದಾರೆ.

ಅನಿಲ್ ತೆಂಕಿಲ: ತೆಂಕಿಲ ದಿ.ಕೆ.ಆನಂದ ಗೌಡ-ಕೆ.ವಿಮಲ ಅವರ ಪುತ್ರ ಅನಿಲ್ ತೆಂಕಿಲ ಅವರು ನಗರ ಮಂಡಲದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.ವಿವಿಧ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಇವರು ವಿಶ್ವಹಿಂದು ಪರಿಷತ್‌ನ ಪ್ರಖಂಡ ಅಧ್ಯಕ್ಷರಾಗಿ ಆರು ವರ್ಷ ಸೇವೆ ಸಲ್ಲಿಸಿದ್ದಾರೆ.ಬಿಜೆಪಿ ಪಕ್ಷದಲ್ಲಿ ಬೂತ್ ಮತ್ತು ವಾರ್ಡ್ ಅಧ್ಯಕ್ಷರಾಗಿ ಸುಮಾರು 20 ವರ್ಷ ಸೇವೆ ಸಲ್ಲಿಸಿದ್ದ ಇವರು ತೆಂಕಿಲ ಶ್ರೀ ಮಹಾಲಿಂಗೇಶ್ವರ ದೇವರ ಉತ್ಸವ ಸಮಿತಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.ಇವರು ಲೋಕಸಭಾ ಚುನಾವಣೆ ಸಂದರ್ಭ ಚುನಾವಣಾ ಕಚೇರಿಯ ಉಸ್ತುವಾರಿಯಾಗಿಯೂ ಜವಾಬ್ದಾರಿ ನಿರ್ವಹಿಸಿದ್ದರು.ಈ ಹಿಂದೆ ಇವರು ಪುತ್ತಿಲ ಪರಿವಾರದ ನಗರ ಘಟಕದ ಅಧ್ಯಕ್ಷರಾಗಿದ್ದರು.ಇವರು ಪತ್ನಿ ಕವಿತಾ ಕೆ, ಪುತ್ರ ಅನುದೀಪ್ ಕೆ.ಜೆ, ಪುತ್ರಿ ಅನಘ ಕೆ.ಎ.ಅವರೊಂದಿಗೆ ಸುಖೀ ಸಂಸಾರ ನಡೆಸುತ್ತಿದ್ದಾರೆ.

ನಾಗೇಶ್ ಪ್ರಭು: ನಗರ ಮಂಡಲದ ಇನ್ನೋರ್ವ ಪ್ರಧಾನ ಕಾರ್ಯದರ್ಶಿಯಾಗಿರುವ ನಾಗೇಶ್ ಪ್ರಭು ಅವರು ಪುತ್ತೂರು ಅರುಣಾ ಕಲಾಮಂದಿರದ ಎದುರು ಪ್ರಭು ಬಿಲ್ಡಿಂಗ್‌ನ ಮಾಲಕರಾಗಿದ್ದಾರೆ.ಪರಿವಾರ ಸಂಘಟನೆಯಲ್ಲಿ ಸಾಮಾನ್ಯ ಕಾರ್ಯಕರ್ತರಾಗಿದ್ದು, ಯಾವುದೇ ಜವಾಬ್ದಾರಿಯನ್ನು ಹೊಂದಿಲ್ಲದಿದ್ದರೂ ಪಕ್ಷಕ್ಕಾಗಿ ಅಹರ್ನಿಶಿ ಕೆಲಸ ಮಾಡುತ್ತಿರುವವರು.ಇವರು ದಿ.ಹೆಚ್ ದೇವದಾಸ್ ಪ್ರಭು ಮತ್ತು ನಿರ್ಮಲಾ ಡಿ ಪ್ರಭು ಅವರ ಪುತ್ರ.ಇವರು ಪತ್ನಿ ಸವಿತಾ, ಪುತ್ರಿ ಪ್ರಿಯಾಂಕ ಪ್ರಭುರವರೊಂದಿಗೆ ಸುಖೀ ಜೀವನ ನಡೆಸುತ್ತಿದ್ದಾರೆ.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿ ಪ್ರಸನ್ನ ಕುಮಾರ್ ಮಾರ್ತ ನೇಮಕ: ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿ ಇಳಂತಾಜೆಯ ಪ್ರಸನ್ನ ಕುಮಾರ್ ಮಾರ್ತ ಅವರನ್ನು ನೇಮಕ ಮಾಡಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಘೋಷಣೆ ಮಾಡಿದ್ದಾರೆ.
ವಿದ್ಯಾರ್ಥಿ ಜೀವನದಲ್ಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತನಾಗಿದ್ದು, 1991-92ರಲ್ಲಿ ಎಬಿವಿಪಿಯಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸಿ, ಗ್ರಾ.ಪಂ ಚುನಾವಣೆಯಲ್ಲಿ ಉಸ್ತುವಾರಿ, ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಎರಡು ಅವಧಿ ಪೂರೈಸಿ, ಜಿ.ಪಂ.ಚುನಾವಣೆಯಲ್ಲೂ ಉಸ್ತುವಾರಿ ವಹಿಸಿದ್ದ ಇವರು ಹೊಸದಿಗಂತ ಪತ್ರಿಕೆಯಲ್ಲೂ 3 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಇವರು ನಿವೃತ್ತ ವಲಯ ಅರಣ್ಯಾಧಿಕಾರಿ ಇಳಂತಾಜೆ ದಿ.ಬಾಲಕೃಷ್ಣ ಮಾರ್ತ-ಬಳ್ಳಮಜಲು ಗುತ್ತು ಬೋಳೋಡಿ ವೇದಾವತಿ ಮಾರ್ತ ಇವರ ಪುತ್ರ. ಇವರು ಪತ್ನಿ ಸವಿತಾ ಮಾರ್ತ, ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಪುತ್ರ ಪ್ರಣಮ್ ಮಾರ್ತ ಅವರೊಂದಿಗೆ ಸುಖೀ ಜೀವನ ನಡೆಸುತ್ತಿದ್ದಾರೆ.ಇವರು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ತಾಲೂಕು ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದ್ದರು.

ಅರುಣ್ ಪುತ್ತಿಲರಿಗೆ ರಾಜ್ಯಮಟ್ಟದಲ್ಲಿ ಅವಕಾಶ?
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪುತ್ತೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅರುಣ್ ಕುಮಾರ್ ಪುತ್ತಿಲ ಅವರಿಗೆ ಅವಕಾಶ ದೊರೆಯದೇ ಇದ್ದುದರಿಂದ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿರೋಚಿತ ಸೋಲು ಕಂಡಿದ್ದರು.ಆ ಬಳಿಕ ಬಿಜೆಪಿ ಮತ್ತು ಪುತ್ತಿಲ ಅವರ ನಡುವಿನ ರಾಜಕೀಯ ಸಂಬಂಧ ದೂರವಾಗುತ್ತಾ ಹೋಗಿತ್ತು.ನಂತರದ ಬೆಳವಣಿಗೆಯಲ್ಲಿ ಪುತ್ತಿಲ ಅವರ ನೇತೃತ್ವದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸ್ಥಾಪನೆಯಾಗಿ ಸಕ್ರಿಯ ಚಟುವಟಿಕೆ ನಿರತವಾಗಿತ್ತು.ನಂತರ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ಅರುಣ್ ಕುಮಾರ್ ಪುತ್ತಿಲ, ಪರಿವಾರ ಬಿಜೆಪಿಯೊಂದಿಗೆ ವಿಲೀನವಾಗುವ ನಿಟ್ಟಿನಲ್ಲಿ ಹಲವು ಸುತ್ತಿನ ಮಾತುಕತೆಗಳು ನಡೆದಿತ್ತು.

ಅರುಣ್ ಕುಮಾರ್ ಪುತ್ತಿಲ ಅವರಿಗೆ ಪುತ್ತೂರು ಬಿಜೆಪಿ ಅಧ್ಯಕ್ಷ ಸ್ಥಾನ ನೀಡುವುದಾದರೆ ಮಾತ್ರ ಅವರು ಪಕ್ಷಕ್ಕೆ ಸೇರ್ಪಡೆಯಾಗುವುದು ಎಂದು ಒಂದು ಹಂತದಲ್ಲಿ ಷರತ್ತು ವಿಧಿಸಲಾಗಿತ್ತು.ಇದಕ್ಕೆ ಪಕ್ಷದಿಂದಲೂ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿತ್ತು.ಪರಿಣಾಮವಾಗಿ, ಜಿಲ್ಲೆಯ ಇತರ ಎಲ್ಲ ಮಂಡಲಗಳಿಗೆ ಪದಾಧಿಕಾರಿಗಳ ಆಯ್ಕೆಯಾದರೂ ಪುತ್ತೂರು ಬಿಜೆಪಿ ಅಧ್ಯಕ್ಷ,ಪದಾಧಿಕಾರಿಗಳ ಆಯ್ಕೆ ಬಾಕಿಯುಳಿದಿತ್ತು.ಇದು ಪುತ್ತಿಲ ಅವರೇ ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ ಎನ್ನುವುದನ್ನು ಪುಷ್ಟೀಕರಿಸಿತ್ತು.ಈ ನಡುವೆ ಅರುಣ್ ಕುಮಾರ್ ಪುತ್ತಿಲ, ಪರಿವಾರ ಬಿಜೆಪಿಯೊಂದಿಗೆ ವಿಲೀನವಾಗಿ ಕಳೆದ ಲೋಕಸಭಾ ಚುನಾವಣೆ ಸಂದರ್ಭ ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ್ದರು.ಇದೀಗ ಪುತ್ತೂರು ಗ್ರಾಮಾಂತರ ಮತ್ತು ನಗರ ಮಂಡಲ ಪದಾಧಿಕಾರಿಗಳ ಆಯ್ಕೆಯಾಗಿದ್ದು ಇದರಲ್ಲಿ ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿದ್ದ ಮೂವರು ಪ್ರಮುಖರಿಗೆ ಹುದ್ದೆ ನೀಡಲಾಗಿದೆ.ಅರುಣ್ ಕುಮಾರ್ ಪುತ್ತಿಲ ಅವರಿಗೆ ಮುಂದೆ ರಾಜ್ಯ ಮಟ್ಟದಲ್ಲಿ ಅವಕಾಶ ದೊರೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಪುತ್ತಿಲ ಪರಿವಾರಕ್ಕೆ ಹೆಚ್ಚಿನ ಅವಕಾಶ
ನೂತನ ಪದಾಧಿಕಾರಿಗಳ ಆಯ್ಕೆಯಲ್ಲಿ ಪುತ್ತಿಲ ಪರಿವಾರದ ನಾಲ್ವರಿಗೆ ಅವಕಾಶ ಲಭಿಸಿದೆ.ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರಸನ್ನ ಕುಮಾರ್ ಮಾರ್ತ ಅವರು ಪುತ್ತಿಲ ಪರಿವಾರದ ತಾಲೂಕು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರು.ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿರುವ ಉಮೇಶ್ ಗೌಡ ಕೋಡಿಬೈಲು,ಪ್ರಶಾಂತ್ ನೆಕ್ಕಿಲಾಡಿ,ನಗರ ಮಂಡಲದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಅನಿಲ್ ತೆಂಕಿಲ ಇವರೂ ಪುತ್ತಿಲ ಪರಿವಾರದಲ್ಲಿ ಸಕ್ರಿಯರಾಗಿದ್ದವರು.

ನನ್ನನ್ನು ಯಾವುದೇ ಜವಾಬ್ದಾರಿಗೆ ಪರಿಗಣಿಸಬೇಡಿ-ಸಹಜ್ ರೈ ಪತ್ರ:ಜಿಲ್ಲಾಧ್ಯಕ್ಷರಿಂದ ಮೆಚ್ಚುಗೆ
ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷತೆಗೆ ಹಲವರ ಹೆಸರು ಕೇಳಿ ಬರುತ್ತಿತ್ತು. ಯುವ ಉದ್ಯಮಿ ಸಹಜ್ ರೈ ಬಳಜ್ಜ ಅವರ ಹೆಸರೂ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷತೆಗೆ ಕೇಳಿ ಬರುತ್ತಿತ್ತು.ಆದರೆ,ನನ್ನ ಹೆಸರನ್ನು ಮಂಡಲ ಅಥವಾ ಯಾವುದೇ ಜವಾಬ್ದಾರಿಗೆ ಪರಿಗಣಿಸದಂತೆ ಸಹಜ್ ರೈಯವರು ಜಿಲ್ಲಾಧ್ಯಕ್ಷರಿಗೆ ಪತ್ರ ಬರೆದಿದ್ದರು.ಈ ವಿಚಾರವನ್ನು ಜಿಲ್ಲಾಧ್ಯಕ್ಷರು ಬಿಜೆಪಿ ಸಭೆಯಲ್ಲಿ ಪ್ರಸ್ತಾಪಿಸಿ,ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ವರದಿಯಾಗಿದೆ.

ನಾನು ನನ್ನ ಉದ್ಯಮದ ಕಡೆಗೆ ಹೆಚ್ಚು ತೊಡಗಿಸಿಕೊಳ್ಳುವ ಹಿನ್ನೆಲೆಯಲ್ಲಿ ನನಗೆ ಪಕ್ಷದ ಕೆಲಸಕ್ಕೆ ಸಮಯ ಕೊಡಲು ಕಷ್ಟವಾಗುತ್ತದೆ.ನನ್ನ ಹೆಸರನ್ನು ಮಂಡಲ ಅಥವಾ ಯಾವುದೇ ಜವಾಬ್ದಾರಿಗೆ ಪರಿಗಣಿಸಬಾರದಾಗಿ ಕೇಳಿಕೊಳ್ಳುತ್ತೇನೆ.ನಾನು ನನ್ನ ಕೈಯಿಂದಾಗುವಷ್ಟರ ಮಟ್ಟಿಗೆ ಪಕ್ಷದ ಚಟುವಟಿಕೆಯಲ್ಲಿ ಓರ್ವ ಕಾರ್ಯಕರ್ತನಾಗಿ ತೊಡಗಿಸಿಕೊಳ್ಳುವುದಾಗಿ ಸಹಜ್ ರೈಯವರು ಜೂ.20ರಂದು ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರಿಗೆ ಪತ್ರ ಬರೆದಿದ್ದರು.ಆ.14ರಂದು ನಡೆದ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಸಹಜ್ ರೈಯವರ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ.ಸಹಜ್ ರೈಯವರು ಪ್ರಸ್ತುತ ಬಿಜೆಪಿ ಯುವಮೋರ್ಚಾದ ಜಿಲ್ಲಾ ಉಪಾಧ್ಯಕ್ಷರಾಗಿದ್ದಾರೆ.

LEAVE A REPLY

Please enter your comment!
Please enter your name here