ಎಸ್‌ಪಿ.ಯತೀಶ್ ಎನ್.,ನಗರ ಠಾಣೆಯ ಹೆಚ್.ಸಿ.ಅದ್ರಾಮ ಎನ್ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ

0

ಪುತ್ತೂರು:ದ.ಕ.ಜಿಲ್ಲೆಯ ಪೊಲೀಸ್ ಅಧೀಕ್ಷಕ ಯತೀಶ್ ಎನ್.ಹಾಗೂ ಪುತ್ತೂರು ನಗರ ಪೊಲೀಸ್ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಅದ್ರಾಮ ಎನ್.ಸೇರಿದಂತೆ ರಾಜ್ಯದ 126 ಪೊಲೀಸ್ ಅಧಿಕಾರಿ, ಸಿಬ್ಬಂದಿಗಳನ್ನು 2023ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ ಮಾಡಲಾಗಿದೆ.

ಯತೀಶ್ ಎನ್: 2016ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಯತೀಶ್ ಎನ್.ಅವರು ಶಿವಮೊಗ್ಗದಲ್ಲಿ ಎಎಸ್‌ಪಿಯಾಗಿ ಬಳಿಕ ಗದಗ,ಮಂಡ್ಯದಲ್ಲಿ ಎಸ್‌ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು.ಇತ್ತೀಚೆಗಷ್ಟೆ ಮಂಡ್ಯದಿಂದ ವರ್ಗಾವಣೆಗೊಂಡು ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಇವರು ಬೆಂಗಳೂರು ನಿವಾಸಿಯಾಗಿದ್ದಾರೆ.ತನ್ನ ಕರ್ತವ್ಯದ ಅವಧಿಯಲ್ಲಿ ಮಾಡಿರುವ ಸಾಧನೆಯನ್ನು ಪುರಸ್ಕರಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಅದ್ರಾಮ ಎನ್: ಪ್ರಸ್ತುತ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹೆಡ್‌ಕಾನ್‌ಸ್ಟೇಬಲ್ ಆಗಿರುವ ಅದ್ರಾಮ ಎನ್.ಅವರು ಈ ಹಿಂದೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹೆಡ್‌ಕಾನ್‌ಸ್ಟೇಬಲ್ ಆಗಿದ್ದರು.ಪುಣಚ ಗ್ರಾಮದ ಪರಿಯಾಲ್ತಡ್ಕ ನಿವಾಸಿಯಾಗಿರುವ ಅದ್ರಾಮ ಎನ್.ರವರು ಇಸುಬು ಬ್ಯಾರಿ ಮತ್ತು ಬೀಫಾತುಮ್ಮಾ ದಂಪತಿ ಪುತ್ರ. ಅಜ್ಜಿನಡ್ಕ ಹಿ.ಪ್ರಾ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಪುಣಚ ಶ್ರೀ ದೇವಿ ಪ್ರೌಢಶಾಲೆಯಲ್ಲಿ ಪ್ರೌಢ ಹಾಗೂ ವಿವೇಕಾನಂದ ಪ.ಪೂ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದಿದ್ದರು.2005ರಲ್ಲಿ ಕಾನ್‌ಸ್ಟೇಬಲ್ ಆಗಿ ಪೊಲೀಸ್ ಇಲಾಖೆಗೆ ನೇಮಕಗೊಂಡು ಮಂಗಳೂರಿನ ಉರ್ವ ಠಾಣೆಯಲ್ಲಿ ಕರ್ತವ್ಯ ಪ್ರಾರಂಭಿಸಿದ್ದರು.ನಂತರ ಬಂಟ್ವಾಳ ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ 2017ರಲ್ಲಿ ಹೆಡ್ ಕಾನ್‌ಸ್ಟೇಬಲ್ ಆಗಿ ಪದೋನ್ನತಿ ಪಡೆದು ಪುತ್ತೂರು ಗ್ರಾಮಾಂತರ ಠಾಣೆಗೆ ವರ್ಗಾವಣೆಗೊಂಡಿದ್ದರು.ಅಲ್ಲಿಂದ ವರ್ಗಾವಣೆಗೊಂಡು ಪ್ರಸ್ತುತ ಪುತ್ತೂರು ನಗರ ಠಾಣೆಯಲ್ಲಿ ಹೆಡ್ ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಬಿ.ಸಿ.ರೋಡ್‌ನಲ್ಲಿ ನಡೆದ ಆರ್.ಎಸ್.ಎಸ್ ಮುಖಂಡ ಶರತ್ ಮಡಿವಾಳ ಕೊಲೆ, ನಾಸೀರ್ ಸಜಿಪ, ಪಿ.ಎಫ್.ಐ ಮುಖಂಡ ಅಶ್ರಫ್ ಕಲಾಯಿ, ಈಶ್ವರಮಂಗಲದಲ್ಲಿ ನಡೆದ ಮೈಸೂರಿನ ಫೊಟೋಗ್ರಾಫರ್ ಜಗದೀಶ್ ರೈ ಕೊಲೆ ಪ್ರಕರಣ, ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಇವರೂ ಪ್ರಮುಖ ಪಾತ್ರವಹಿಸಿದ್ದರು.ಅಲ್ಲದೆ ಬಡಗನ್ನೂರು ಗ್ರಾ.ಪಂ.ಮಾಜಿ ಸದಸ್ಯ ಗುರುಪ್ರಸಾದ್ ರೈ ಅವರ ಮನೆ ದರೋಡೆ, ಬಾಗಲಕೋಟೆಯ ಹನುಮಂತ ಅವರ ಅಪಹರಣ-ಕೊಲೆ, ಅಜ್ಜಿನಡ್ಕ ಕರ್ಣಾಟಕ ಬ್ಯಾಂಕ್ ಕಳ್ಳತನ, ಬಂಟ್ವಾಳ ಗ್ರಾಮಾಂತರದಲ್ಲಿ ಮನೆ ದರೋಡೆ,ಉಪ್ಪಿನಂಗಡಿ, ವಿಟ್ಲ, ಪುತ್ತೂರು, ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದ ವಿವಿಧ ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳ ಪತ್ತೆ ಹಚ್ಚುವಲ್ಲಿ ಇವರು ಪ್ರಮುಖ ಪಾತ್ರವಹಿಸಿದ್ದರು.ಇದೆಲ್ಲವನ್ನು ಗಮನಿಸಿ ಅವರನ್ನು ಇದೀಗ ಸಿಎಂ ಪದಕ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.ಅದ್ರಾಮ ಎನ್.ಅವರು ಪತ್ನಿ ಆಯಿಷಾ, ಪುತ್ರಿಯರಾದ ಅಪ್ನಾ ಫಾತಿಮಾ, ಸಝ್ಮಾ ಫಾತಿಮಾ ಹಾಗೂ ಪುತ್ರ ಮಹಮ್ಮದ್ ಅಫ್ರಾಝ್ ರೊಂದಿಗೆ ಪುಣಚದ ಪರಿಯಾಲ್ತಡ್ಕದಲ್ಲಿ ವಾಸ್ತವ್ಯವಿದ್ದಾರೆ.

LEAVE A REPLY

Please enter your comment!
Please enter your name here