ಪುತ್ತೂರು: ಇಂದು ನಾವೆಲ್ಲರೂ ದೇಶದ ಗಡಿರೇಖೆಯನ್ನು ನೋಡುತ್ತಿದ್ದೇವೆಯೆಂದರೆ ಅಥವಾ ದೇಶದ ಗಡಿರೇಖೆ ಇನ್ನೂ ಇದೆಯೆಂದರೇ, ಅದಕ್ಕೆಲ್ಲಾ ಕಾರಣವೇ ನಮ್ಮನ್ನು ಕಾಯುತ್ತೀರೋ ವೀರ ಜವನರು ಹಾಗೂ ಅವರಲ್ಲಿರೋ ದೇಶ ಪ್ರೇಮವೇ ಕಾರಣ.
ರಾಜಕೀಯ ಅಥವಾ ಇನ್ನಾವುದೇ ಕ್ಷೇತ್ರವನ್ನು ನಾವು ನೋಡಿದರೆ ದೋಚಿ ತಿನ್ನುವಂತ ವ್ಯಕ್ತಿಗಳೇ ಕಾಣುತ್ತಾರೆ ಹೊರತು ಶುದ್ಧ ಹಸ್ತದವರು ತುಂಬಾನೇ ವಿರಳವೆಂದು ಅಂಬಿಕಾ ವಿದ್ಯಾಸಂಸ್ಥೆಯ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಅಭಿಪ್ರಾಯ ವ್ಯಕ್ತಪಡಿಸಿದರು.
ಆ.17 ರಂದು ಇಲ್ಲಿನ ಸೈನಿಕ ಭವನದಲ್ಲಿ ರಾಷ್ಟ್ರ ಭಕ್ತ ನಾಗರಿಕ ವೇದಿಕೆ(ರಿ)ಸುರತ್ಕಲ್ ಇದರ ಆಶ್ರಯದಲ್ಲಿ ಅರ್ಹ ಸೈನಿಕ ಕುಟುಂಬಗಳಿಗೆ ಸೈನಿಕ ಕಲ್ಯಾಣ ನಿಧಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು , ನಿಜವಾದ ಸೇವೆಯೆಂದರೇ , ಮನೆ -ಮನೆಮಂದಿಯನ್ನು ಬಿಟ್ಟು , ಜೀವವನ್ನು ತೊರೆದು, ಬಿಸಿಲು,ಮಳೆ,ಗಾಳಿಯನ್ನು ಲೆಕ್ಕಿಸದೆ, ಮೈನಸ್ ಡಿಗ್ರಿ ಸೆಲ್ಸಿಯಸ್ ನಲ್ಲೂ ದೇಶ ರಕ್ಷಣೆ ಕಾರ್ಯದಲ್ಲಿ ನಿರತರಾಗಿರೋ ಸೈನಿಕರ ಕಾರ್ಯಕ್ಕೆ ಸೇವೆಯೆಂಬ ನಿಜವಾದ ಅರ್ಥ ನೀಡಬಹುದು ಅಥವಾ ಹೇಳಬಹುದೆಂದರು.
ಭ್ರಷ್ಟಾಚಾರ ತಾಂಡವಾಡುತ್ತಿರುವಂತ ಈ ನಾಡಿನಲ್ಲಿ ಅತ್ಯಂತ ಪವಿತ್ರ ಶುದ್ಧ ಹಸ್ತ ಹೊಂದಿರುವವರು ಮಾತ್ರ ನಮ್ಮ ಸೈನಿಕರೆಂದು ಘಂಟ ಘೋಷವಾಗಿ ಸಾರಿದರು.
ರಾಷ್ಟಭಕ್ತ ನಾಗರಿಕ ವೇದಿಕೆ ರೂವಾರಿ ಸತ್ಯಜಿತ್ ಸುರತ್ಕಲ್ ತಂಡದ ಕಾರ್ಯವೈಖರಿಯನ್ನು ಕೊಂಡಾಡಿದ ಅವರು, ತಂಡದ ಅದ್ಭುತ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಿ, ಇನ್ನಷ್ಟು ಬೆಂಬಲದ ಜೊತೆಗೆ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗೋಣವೆಂದು ಹೇಳಿ ಹಾರೈಸಿದರು.
ಮಂಗಳೂರಿನ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ ಬೋಳ ಮಾತನಾಡಿ, ನನ್ನ ಹಿಂದೆ ಕೃತಜ್ಞತಾ ರಾಷ್ಟ್ರವೊಂದು ಇದೆಯೆಂಬುದೇ ವೀರ ಯೋಧರಿಗೆ ಪ್ರಮುಖ ಪ್ರೇರಣೆಯಾಗಿದೆ. ಕಳೆದ ಹತ್ತು ವರುಷಗಳಿಂದ ವೀರ ಯೋಧರ ತ್ಯಾಗ,ಬಲಿದಾನದ ವೇಳೆ ಸಂಘಟನೆಯು ಕುಟುಂಬ ವರ್ಗದ ಕಣ್ಣೀರು ಒರೆಸೋ ಮೂಲಕ ಧೈರ್ಯ ತುಂಬುವ ಕಾರ್ಯಮಾಡುತ್ತಾ ಬಂದಿರುವುದಕ್ಕೆ ದೊಡ್ಡ ಸೆಲ್ಯೂಟ್. ಈ ಹತ್ತು ವರುಷಗಳಲ್ಲಿ ಸುಮಾರು 30 ಲಕ್ಷಕ್ಕೂ ಮಿಕ್ಕಿ ಸೈನಿಕ ನಿಧಿ ವಿತರಿಸಿರುವಂಥ ತಂಡದ ಕಾರ್ಯವೂ ಶ್ಲಾಘನೀಯವೆಂದರು.
ರಾಷ್ಟ್ರ ಭಕ್ತ ನಾಗರಿಕ ವೇದಿಕೆ ಸುರತ್ಕಲ್ ಇದರ ಸ್ಥಾಪಕಾಧ್ಯಕ್ಷ ಸತ್ಯಜಿತ್ ಸುರತ್ಕಲ್ ವಿಷಯ ಪ್ರಸ್ತಾಪಿಸಿ, ವೀರ ಯೋಧರಿಗೆ ಸಮಾಜದಲ್ಲಿ ಉನ್ನತ್ತ ಗೌರವ ನೀಡುವ ನಿಟ್ಟಿನಲ್ಲಿ ಈ ಸಂಘಟನೆಯನ್ನು ಸ್ಥಾಪಿಸಲಾಗಿದ್ದು, ವಿವಿಧ ರೀತಿಯ ಕಾರ್ಯಕ್ರಮ ಆಯೋಜನೆ ಮೂಲಕ ಯೋಧರ ಕುಟುಂಬಕ್ಕೆ ಸಹಾಯವಾಗುವುದು ಇದರ ಮೂಲ ಉದ್ದೇಶವಾಗಿದ್ದು, ಎಲ್ಲರ ಸಹಕಾರ, ಬೆಂಬಲ ಯಾಚಿಸಿ, ವಂದಿಸಿದರು.
ಬಳಿಕ ಎರಡನೆಯ ವಿಶ್ವ ಯುದ್ಧದ ಸಮಯದಲ್ಲಿ ವೀರ ಮರಣವನ್ನಪ್ಪಿದ ಯೋಧ ಮುನ್ನಾಪ್ಪ ಇವರ ಪತ್ನಿ ಸ್ವರ್ಣಲತಾ ಚಂದಳಿಕೆ, ಹವಾಲ್ದಾರ್ ಯೋಹನ್ನಮ್ ರವರ ಪತ್ನಿ ಅನ್ನಮ್ಮ ಕಡಬ ಹಾಗೂ ಇನ್ನೋರ್ವ ಹವಾಲ್ದಾರ್ ಪರಮೇಶ್ವರ್ ಇವರ ಪತ್ನಿ ಪುಷ್ಪಲತಾ ಇವರುಗಳಿಗೆ ಸೈನಿಕ ಕಲ್ಯಾಣ ನಿಧಿಯಿಂದ ಧನ ವಿತರಣೆ ನೆರವೇರಿತು. ವೇದಿಕೆಯಲ್ಲಿ ಸಾಮಾಜಿಕ ಕಾರ್ಯಕರ್ತ ರಾಜಾರಾಮ್ ಭಟ್ ಮತ್ತು ಅಣ್ಣಪ್ಪ ದೇವಾಡಿಗ ಇದ್ದರು. ಪುತ್ತೂರು ಮಾಜಿ ಸೈನಿಕರ ಸಂಘದ ಅಧ್ಯಕ್ಷ ನಾರಾಯಣ ಭಟ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಸಂತೋಷ್ ಕುಮಾರ್ ರೈ ಕೈಕಾರ, ಉದ್ಯಮಿ ಧನಂಜಯ ಪಟ್ಲ ಕಲ್ಲೇಗ, ಸಂಘಟನೆಯ ಸ್ಥಾಪಕ ಸದಸ್ಯ ರೋಹಿತ್, ಸಜಿತ್ ರಾಜ್ ಬೊಕ್ಕಪಟ್ನ, ಅವಿನಾಶ್ ಪುಣಚ, ಕಿಶೋರ್ ಮೇರ್ಲ, ಸುಜಿತ್ ಸಂಟ್ಯಾರ್, ನ್ಯಾಯವಾದಿ ಶಿವಾನಂದ ಮತ್ತು ಪ್ರಮೋದ್ ಪುಣಚ ಹಾಗೂ ಬಾಲಕೃಷ್ಣ ಕುರಿಯ ಸಹಿತ ಮಾಜಿ ಸೈನಿಕರ ಸಂಘದ ಎಲ್ಲಾ ಪದಾಧಿಕಾರಿಗಳು, ಸದಸ್ಯರು, ರಾಷ್ಟ್ರಭಕ್ತ ನಾಗರಿಕ ವೇದಿಕೆ ಇದರ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಹಾಗೂ ದೇಶ ಪ್ರೇಮಿಗಳು ಹಾಜರಿದ್ದರು.