ಪುತ್ತೂರು: ಚೇತನ ಫೌಂಡೇಶನ್ ಕರ್ನಾಟಕ, ಮತ್ತು ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇದರ ವತಿಯಿಂದ ಆ.18ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ, ʼಬೆಂಗಳೂರು ಪುಸ್ತಕ ಹಬ್ಬʼ ಹಾಗೂ ʼಕಾವ್ಯ ಸಮಾಗಮ -2024ʼ, ʼಕಾವ್ಯ ಚೇತನ ಪ್ರಶಸ್ತಿʼ, ʼಅಮೃತ ಭಾರತಿ ಪ್ರಶಸ್ತಿʼ ಮತ್ತು ʼವರ್ಲ್ಡ್ ಪ್ರೆಸ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿʼ ಪ್ರಧಾನ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಯುವ ಬರಹಗಾರ್ತಿ ದೀಪ್ತಿ ಅಡ್ಡತ್ತಂಡ್ಕ ಅವರು ʼವರ್ಲ್ಡ್ ಪ್ರೆಸ್ ಬುಕ್ ಆಫ್ ರೆಕಾರ್ಡ್ʼ ಗೌರವ ಮತ್ತು ʼಕಾವ್ಯ ಚೇತನʼ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತಮ್ಮ ವಿದ್ಯಾರ್ಥಿ ಜೀವನದಲ್ಲೇ ಕ್ರಿಯಾಶೀಲ ಬರಹಗಾರ್ತಿಯಾಗಿ ಗುರುತಿಸಿಕೊಂಡಿದ್ದ ದೀಪ್ತಿ, ಯಕ್ಷಗಾನ, ಭರತನಾಟ್ಯ, ಯೋಗ ಮತ್ತು ಕ್ರೀಡೆಯಲ್ಲೂ ಆಸಕ್ತಿಯನ್ನು ಹೊಂದಿ ಓರ್ವ ಬಹುಮುಖ ಪ್ರತಿಭೆಯಾಗಿ ಬೆಳೆಯುತ್ತಿದ್ದಾರೆ.
ಇವರ ಈ ಸಾಧನೆಗೆ ಸುಳ್ಯ ಚಂದನ ಸಾಹಿತ್ಯ ವೇದಿಕೆಯ ʼಪ್ರತಿಭಾರತ್ನ ಪ್ರಶಸ್ತಿʼ, ಧಾರವಾಡದಲ್ಲಿ ನಡೆದ ರಾಜ್ಯಮಟ್ಟದ ಕರ್ನಾಟಕ ಫಿಲಂ ಫೆಸ್ಟಿವಲ್ 2024ರ ʼಪುನೀತ ಪ್ರಶಸ್ತಿʼ ಮತ್ತು ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಮತ್ತು ಆಕ್ಸಿಸ್ ಬ್ಯಾಂಕ್ ಮಂಗಳೂರು ಇವರ ʼಕಲಾ ರತ್ನ ಪ್ರಶಸ್ತಿʼಗಳು ಲಭಿಸಿವೆ. ಇಷ್ಟು ಮಾತ್ರವಲ್ಲದೇ ಇವರು ತಮ್ಮ ಪದವಿ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಕಾಲೇಜಿನ ಸಾಂಸ್ಕೃತಿಕ ರಾಯಭಾರಿಯಾಗಿಯೂ ಗುರುತಿಸಿಕೊಂಡಿದ್ದಾರೆ.
ದೀಪ್ತಿಯವರು ಕಾಸರಗೋಡಿನ ದೇಲಂಪಾಡಿ ಗ್ರಾಮದ ಅಡ್ಡತ್ತಂಡ್ಕ ಬಾಲಕೃಷ್ಣ ಗೌಡ ಮತ್ತು ಚಿನ್ನಮ್ಮ ದಂಪತಿಗಳ ಪುತ್ರಿ. ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪತ್ರಿಕೋದ್ಯಮ ಮತ್ತು ಐಚ್ಚಿಕ ಕನ್ನಡದಲ್ಲಿ ಪದವಿಯನ್ನು ಪೂರೈಸಿ, ಪ್ರಸ್ತುತ ಬೆಂಗಳೂರಿನ ಪಬ್ಲಿಕ್ ಟಿವಿಯಲ್ಲಿ ಉದ್ಯೋಗಿಯಾಗಿದ್ದಾರೆ.