ಪುತ್ತೂರು: ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಂಪರ್ಕ ಪಡೆದು ಶುಲ್ಕ ಪಾವತಿಸದವರ ನೀರಿನ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಬನ್ನೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಸಭೆಯು ಆ.12ರಂದು ಅಧ್ಯಕ್ಷೆ ಸ್ಮಿತಾರವರ ಅಧ್ಯಕ್ಷತೆಯಲ್ಲಿ ನಡೆಯಿತು. ನೀರಿನ ಶುಲ್ಕ ಹಾಗೂ ತೆರಿಗೆಗಳ ಬಾಕಿಯಿರುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಮನೆ ತೆರಿಗೆಗಳು, ನೀರಿನ ಶುಲ್ಕಗಳ ಪಾವತಿಯು ಡಿಜಿಟಲೀಕರಣಗೊಂಡಿದ್ದು ಶುಲ್ಕ ಪಾವತಿಸುವಾಗ ಆನ್ಲೈನ್ನಲ್ಲಿ ಪಾವತಿಸಿ ರಶೀದಿ ನೀಡಲಾಗುತ್ತದೆ. ಬನ್ನೂರು, ಪಡ್ನೂರು ಹಾಗೂ ಚಿಕ್ಕಮುಡ್ನೂರು ಗ್ರಾಮಗಳಲ್ಲಿ ನೀರಿನ ಶುಲ್ಕ ಪಾವತಿಸಲು ಬಾಕಿಯಿದ್ದು ಸಂಬಂಧಪಟಟ್ವರಿಗೆ ಈಗಾಗಲೇ ನೋಟೀಸ್ ನೀಡಲಾಗಿದ್ದರೂ ಶುಲ್ಕ ಪಾವತಿಯಾಗಿಲ್ಲ ಎಂದು ಪಿಡಿಓ ತಿಳಿಸಿದರು.ನೀರಿನ ಶುಲ್ಕ ಹಾಗೂ ತೆರಿಗೆ ಪಾವತಿಸದವರ ವಿರುದ್ಧ ಕಟ್ಟು ನಿಟ್ಟಿನ ಕ್ರಮಕೈಗೊಳ್ಳುವಂತೆ ಸದಸ್ಯರು ಆಗ್ರಹಿಸಿದರು. ನೀರಿನ ಶುಲ್ಕ ಪಾವತಿಸದವರ ಸಂಪರ್ಕ ಕಡಿತಗೊಳಿಸಲಾಗುವುದು.ಶುಲ್ಕ ಪಾವತಿಸಿದ ಬಳಿಕ ಮರು ಜೋಡಿಸಲಾಗುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ಪಂಚಾಯತ್ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಘಟಕವನ್ನು ಸಂಜೀವಿನಿ ಒಕ್ಕೂಟದೊಂದಿಗೆ ಒಪ್ಪಂದದ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ.ಇದರ ಮಾಸಿಕ ಶುಲ್ಕ ಸಂಗ್ರಹಣೆ ಮಾಡಲು ಸಿಬ್ಬಂದಿಗಳು ಮನೆ ಮನೆ ಭೇಟಿ ನೀಡುವ ಸಂದರ್ಭದಲ್ಲಿ ಅವರಲ್ಲಿ ಕಡ್ಡಾಯವಾಗಿ ಶುಲ್ಕ ನೀಡಬೇಕು ಎಂದು ನಿರ್ಣಯಿಸಲಾಗಿದೆ.
ನಾಯಿ, ದನ ಮೊದಲಾದ ಸಾಕುಪ್ರಾಣಿಗಳನ್ನು ಬೀದಿಗೆ ಬಿಡುವುದರಿಂದ ವಾಹನ ಸವಾರರಿಗೆ ಸಂಕಷ್ಟ ಉಂಟಾಗುತ್ತಿರುವ ಬಗ್ಗೆ ಹಲವಾರು ದೂರುಗಳು ಬರುತ್ತಿರುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಯಿತು. ಇನ್ನು ಮುಂದೆ ಸಾಕು ಪ್ರಾಣಿಗಳಿಂದ ವಾಹನ ಸವಾರರಿಗೆ ತೊಂದರೆಗಳುಂಟಾದರೆ ಅದರ ವೆಚ್ಚಗಳನ್ನು ಸಾಕು ಪ್ರಾಣಿಗಳ ಮ್ಹಾಲಕರು ಭರಿಸಬೇಕು. ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು. ಇದರ ಬಗ್ಗೆ ಸ್ವಚ್ಚವಾಹಿನಿ ಮೂಲಕ ಜನರಿಗೆ ಅರಿವು ಮೂಡಿಸಲು ನಿರ್ಣಯಿಸಲಾಗಿದೆ.
ಗ್ರಾ.ಪಂ ಉಪಾಧ್ಯಕ್ಷ ಶೀನಪ್ಪ ಕುಲಾಲ್, ಸದಸ್ಯರಾದ ಶ್ರೀನಿವಾಸ ಪೆರ್ವೋಡಿ, ತಿಮ್ಮಪ್ಪ ಪೂಜಾರಿ, ಗಿರಿಧರ ಗೌಡ, ರಾಘವೇಂದ್ರ ಹಂದ್ರಟ್ಟ, ಗಣೇಶ್ ಹೆಗ್ಡೆ, ರಮಣಿ ಡಿ.ಗಾಣಿಗ, ಜಯ ಏಕ, ಹರಿಣಾಕ್ಷಿ, ವಿಮಲ, ಗೀತಾ, ಸುಪ್ರಿತಾ ಸಭೆಯಲ್ಲಿ ಉಪಸ್ಥಿತರಿದ್ದರು.ಪಿಡಿಓ ಚಿತ್ರಾವತಿ ಸ್ವಾಗತಿಸಿ, ಸಭೆಯ ಕಲಾಪ ನಡೆಸಿಕೊಟ್ಟರು.ಲೆಕ್ಕಸಹಾಯಕಿ ಜಯಂತಿ ವಂದಿಸಿದರು.
ಅರಿವು ನಾಮಫಲಕ ಅನಾವರಣ:
ಗ್ರಂಥ ಪಾಲಕರ ದಿನಾಚರಣೆಯ ಅಂಗನವಾಗಿ ಅರಿವು ಕೇಂದ್ರದ ನಾಮ ಫಲಕವನ್ನು ಗ್ರಾ.ಪಂ ಅಧ್ಯಕ್ಷೆ ಸ್ಮಿತಾ ಅನಾವಣಗೊಳಿಸಿದರು. ಗ್ರಂಥಾಲಯ ಮೇಲ್ವಿಚಾರಕಿ ಮಮತಾ ಸ್ವಾಗತಿಸಿ, ವಂದಿಸಿದರು.