ಪುತ್ತೂರು: ನರಿಮೊಗರು ಮುಕ್ವೆ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಇದರ ಹಿರಿಯ ವಿದ್ಯಾರ್ಥಿ ಸಂಘದ ಮಹಾಸಭೆಯು ಆ.25ರಂದು ಮಧ್ಯಾಹ್ನ ಮುಕ್ವೆ ಶಾಲಾ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರವಿ ಎಂ ವಹಿಸಿದ್ದರು. ಮುಖ್ಯ ಅತಿಥಿಗಳಾಗಿದ್ದ ಶ್ರೀರಾಮ ಕನ್ ಸ್ಟ್ರಕ್ಷನ್ ನ ಮಾಲಕರಾದ ಪ್ರಸನ್ನ ಭಟ್ ಪಂಚವಟಿ ಇವರು ಸಂಘವು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವಂತೆ ಕರೆ ನೀಡಿದರು. ಕಾರ್ಯಕ್ರಮದ ಪರಿವೀಕ್ಷಕರಾಗಿ ಶಾಲಾ ಮುಖ್ಯಗುರು ಕಾರ್ಮಿನ್ ಅಂದ್ರಾದೆ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಮುಬೀನ್ ಸಾಹೇಬ್, ಕೋಶಾಧಿಕಾರಿ ನವೀನ್ ಡಿ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಎಂ ಅಶ್ರಫ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತಿನಲ್ಲಿ ಶಾಲಾ ಹಿರಿಯ ವಿದ್ಯಾರ್ಥಿ ಸಂಘ ನಡೆದು ಬಂದ ದಾರಿ, ಮಾಡಿದ ಅಭಿವೃದ್ಧಿ ಕಾರ್ಯಗಳು, ನೀಡಿದ ಸಹಕಾರ ಎಲ್ಲವನ್ನು ಸ್ಮರಿಸಿದರು. ಬಳಿಕ 13 ಜನ ಸದಸ್ಯರನ್ನು ಒಳಗೊಂಡ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಸಭಾಧ್ಯಕ್ಷರಾದ ರವಿಯವರು ತಮ್ಮ ಕಾಲಾವಧಿಯಲ್ಲಿ ಸಹಕಾರ ನೀಡಿದ ಸರ್ವರನ್ನೂ ಸ್ಮರಿಸಿಕೊಂಡರು. ಶಿಕ್ಷಕ ಚರಣ್ ಕುಮಾರ್ ಪ್ರಾರ್ಥಿಸಿ, ಕಾರ್ಯಕ್ರಮ ನಿರೂಪಣೆ ಮಾಡಿದರು. ಮುಖ್ಯಗುರು ಕಾರ್ಮಿನ್ ಅಂದ್ರಾದೆ ವಂದನಾರ್ಪಣೆಗೈದರು. ಸುಮಾರು 47 ಜನ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕೊನೆಗೆ ಲಘು ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.