ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ

0

ಗೀತಾಸಾರವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು: ಚಂದ್ರಕಾಂತ ಗೋರೆ

ಪುತ್ತೂರು: ಅಧರ್ಮವನ್ನು ಶಿಕ್ಷಿಸಿ ಧರ್ಮವನ್ನು ಸ್ಥಾಪನೆ ಮಾಡಿದ ಜಗದೋದ್ಧರಕ ಶ್ರೀ ಕೃಷ್ಣ ಬೋಧಿಸಿದ ಭಗವದ್ಗೀತೆ ಎಲ್ಲರ ಬದುಕಿಗೂ ಬೆಳಕು ಚೆಲ್ಲುತ್ತದೆ. ಇದರ ಸಾರವನ್ನು ಪ್ರತಿಯೊಬ್ಬನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಯಶಸ್ವಿ ಜೀವನವನ್ನು ನಡೆಸಬಹುದು ಎಂದು ಅಂಬಿಕಾ ಮಹಾವಿದ್ಯಾಲಯದ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಚಂದ್ರಕಾಂತ ಗೋರೆ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಆ.26ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಯಾವುದೇ ತರ್ಕಕ್ಕೆ ನಿಲುಕದ ಸರಳ ಜೀವನ ಶೈಲಿ ಶ್ರೀಕೃಷ್ಣನದ್ದು. ಯಾವುದೇ ವಿದ್ಯಾ ಅಧಿಕಾರ, ಸಂಪತ್ತು ಇದ್ದರೂ ಅಹಂಕಾರ ರಹಿತವಾಗಿ ಬದುಕಬೇಕು ಹಾಗೂ ಯಾವುದೇ ಆಕರ್ಷಣೆಗೆ ಅಂಟಿಕೊಳ್ಳದೆ ಸರಳತೆಯಿಂದ ಬದುಕಿದಾಗ ನೆಮ್ಮದಿ ನಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ಶ್ರೀಕೃಷ್ಣನು ತನ್ನ ಬದುಕಿನ ಮುಖಾಂತರ ತೋರಿಸಿ ಕೊಟ್ಟಿದ್ದಾನೆ. ಜೀವನದಲ್ಲಿ ಬರುವ ಎಲ್ಲಾ ಸಮಸ್ಯೆಗಳನ್ನು ಶಕ್ತಿಯಿಂದ ಎದುರಿಸುವುದಕ್ಕಿಂತ ಯುಕ್ತಿಯಿಂದ ಬಗೆಹರಿಸಿಕೊಳ್ಳಬೇಕೆಂದು ಹಲವಾರು ನಿದರ್ಶನಗಳ ಮೂಲಕ ಜನತೆಗೆ ಸಾರಿದ್ದಾನೆ ಎಂದು ತಿಳಿಸಿದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ನಟ್ಟೋಜ ಮಾತನಾಡಿ ಭಗವದ್ಗೀತೆಯ ಒಂದೊಂದು ಅಧ್ಯಾಯವೂ ಒಂದೊಂದು ಸಂದೇಶವನ್ನು ಸಾರುತ್ತದೆ. ನಮ್ಮೊಳಗಿನ ಪ್ರಜ್ಞೆಯನ್ನು ಜಾಗೃತಗೊಳಿಸಿ ರಾಜಸ, ತಮೋ ಗುಣಗಳನ್ನು ಹೋಗಲಾಡಿಸಿ ಸಾತ್ವಿಕ ಗುಣಗಳನ್ನು ಹೆಚ್ಚಿಸಿಕೊಂಡು ಉತ್ತಮ ಜೀವನ ನಡೆಸಬೇಕೆಂದು ಹೇಳಿದರು.
ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ನೀಡಲಾಯಿತು. ಸಂಸ್ಥೆಯ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಹಾಗೂ ಪ್ರಾಂಶುಪಾಲೆ ಸುಚಿತ್ರ ಪ್ರಭು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಪ್ರಣತಿ ಮತ್ತು ಬಳಗದವರು ಪ್ರಾರ್ಥಿಸಿದರು. ವಿದ್ಯಾರ್ಥಿನಿ ಹರ್ಷಿತ ಸಿ ಡಿ ಸ್ವಾಗತಿಸಿದರು. ವಿದ್ಯಾರ್ಥಿನಿ ಕಾವ್ಯ ಲಕ್ಷ್ಮಿ ಭಟ್ ವಂದಿಸಿದರು. ವಿದ್ಯಾರ್ಥಿನಿ ದಿಶಾ ಕೆ. ಜೆ ಕಾರ‍್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here