ಸಿನಿಮಾ ರಂಗದ ಸಂಗೀತ ಕ್ಷೇತ್ರದಲ್ಲಿ ಮಿಂಚುತ್ತಿರುವ ಯುವ ಸಂಗೀತ ನಿರ್ದೇಶಕ ಪ್ರಸಾದ್ ಕೆ ಶೆಟ್ಟಿ

0

ಪುತ್ತೂರು: ಸಿನಿಮಾ ರಂಗದ ಸಂಗೀತ ಕ್ಷೇತ್ರದಲ್ಲಿ ಯುವ ಸಂಗೀತ ನಿರ್ದೇಶಕರೊಬ್ಬರು ಸದ್ದಿಲ್ಲದೇ ಮಿಂಚುತ್ತಿದ್ದಾರೆ. ಅವರು ಬೇರೆ ಯಾರೂ ಅಲ್ಲ, ಮೂಲತಃ ಸಂಪ್ಯ ಕುಕ್ಕಾಡಿ ನಿವಾಸಿಯಾಗಿದ್ದು ಪ್ರಸ್ತುತ ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಕಲ್ಲಾಜೆ ಎಂಬಲ್ಲಿ ನೆಲೆಸಿರುವ ಪ್ರಸಾದ್ ಕೆ ಶೆಟ್ಟಿ.


ಬಾಲ್ಯದಿಂದಲೇ ಸಂಗೀತ ಕ್ಷೇತ್ರದ ಬಗ್ಗೆ ವಿಪರೀತ ಆಸಕ್ತಿ ಹೊಂದಿದ್ದ ಇವರು ವಿಜ್ಞಾನ ವಿಭಾಗದಲ್ಲಿ ತನ್ನ ಪದವಿ ಪೂರ್ವ ಶಿಕ್ಷಣವನ್ನು ಪಡೆದಿದ್ದರೂ, ಸಂದೇಶ ಲಲಿತ ಕಲಾ ಕಾಲೇಜು ಮಂಗಳೂರಿನಲ್ಲಿ ವೆಸ್ಟರ್ನ್ ಹಾಗೂ ಇಂಡಿಯನ್ ಕ್ಲಾಸಿಕಲ್ ಮ್ಯೂಸಿಕ್‌ನಲ್ಲಿ ಪದವಿಯನ್ನು ಮಾಡಿರುತ್ತಾರೆ .


ಹೆಚ್ಚುವರಿ ಸಂಗೀತ ಶಿಕ್ಷಣಕ್ಕಾಗಿ ಚೆನ್ನೈನಲ್ಲಿ ಮ್ಯೂಸಿಕ್ ಪ್ರೊಡಕ್ಷನ್ ಮತ್ತು ಸೌಂಡ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೋಮಾ ಪೂರ್ಣಗೊಳಿಸಿರುತ್ತಾರೆ. ಹೆಸರಾಂತ ಸಂಗೀತ ನಿರ್ದೇಶಕರಾದ ಮಣಿಕಾಂತ್ ಕದ್ರಿ ಅವರ ಸಹಾಯಕರಾಗಿ 2 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ನಂತರ ತೆಲುಗು ಸಿನಿಮಾ ಸಂಗೀತ ನಿರ್ದೇಶಕ ಶಕ್ತಿಕಾಂತ್ ಕಾರ್ತಿಕ್ ಅವರೊಂದಿಗೆ 3 ವರುಷ ಹಲವಾರು ತೆಲುಗು ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಇನ್ನಷ್ಟು ಸಂಗೀತ ಜ್ಞಾನವನ್ನು ಪಡೆದುಕೊಂಡು ಸ್ವತಂತ್ರ ಸಂಗೀತ ನಿರ್ದೇಶಕರಾದರು. ಮೀ ಆಂಡ್ ಮೈ ಶಾಡೋ ಎಡಿಕ್ಟ್, ಕಡಕ್ ಚಾಯ್, ಒನ್ ರೈಟ್ ಕಿಕ್, ಇನ್ಸಿಪಿಎನ್ಸ್ ಪರ್ಸ್ಪೆಕ್ಟಿವ್ ಹಾಗೂ ಇತರ ಕಿರು ಚಿತ್ರಗಳಿಗೆ ಹಿನ್ನೆಲೆ ಸಂಗೀತವನ್ನು ನೀಡಿದ್ದಾರೆ. ಹಲವಾರು ಆಲ್ಬಮ್ ಸಾಂಗ್ಸ್ ಜಾಹೀರಾತುಗಳಿಗೂ ಹಿನ್ನೆಲೆ ಸಂಗೀತವನ್ನು ನೀಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ತುಳು ಭಾಷೆಯಲ್ಲಿ ಅಮ್ಮೆರ್ ಪೊಲೀಸ, ಪೆಪ್ಪರೆರೆ, ಇತ್ತೀಚಿಗೆ ತೆರೆಕಂಡ ಅರ್ಜುನ್ ಕಾಪಿಕಾಡ್ ನಿರ್ದೇಶನದ ರಾಪಟ ಸಿನಿಮಾಗಳಿಗೆ ಸಂಗೀತ ನಿರ್ದೇಶನವನ್ನು ಮಾಡಿರುತ್ತಾರೆ. ಕನ್ನಡ ಸಿನಿಮಾಗಳಾದ ಗಂಧದ ಕುಡಿ, ಲುಂಗಿ, ನಾನು ಅದು ಮತ್ತು ಸರೋಜಾ, ದಿಲ್ ಖುಷ್ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಇನ್ನೇನು ತೆರೆ ಕಾಣಲಿರುವ ನಿಮ್ಮ ‘ವಸ್ತುಗಳಿಗೆ ನೀವೇ ಜವಾಬ್ದಾರಿ’, ಪಾರಿನ್ ಸ್ಕಾಚ್, ರಕ್ಷಿತ್ ಶೆಟ್ಟಿ ನಿರ್ಮಾನದ ಸ್ಟ್ರಾಬೆರ್ರಿ ಹಾಗೂ ಸುಮನ್ ಸುವರ್ಣ ನಿರ್ದೇಶನದ, ಅರ್ಜುನ್ ಕಾಪಿಕಾಡ್ ಅಭಿನಯದ ಇದೇ ಸೆ.13ರಂದು ತೆರೆಕಾಣಲಿರುವ ಕಲ್ಜಿಗ, ಕನ್ನಡ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿ ಸಿನಿಮಾ ತಂಡದಿಂದ ಹಾಗೂ ಜನರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.


‘ಮೀ ಆಂಡ್ ಮೈ ಶಾಡೋ’ ಕಿರು ಚಿತ್ರದ ಹಿನ್ನೆಲೆ ಸಂಗೀತಕ್ಕೆ ರಾಜ್ಯ ಕಿರು ಚಿತ್ರ ಪ್ರಶಸ್ತಿ, ಚಂದನ್ ವನ್ ಹಿಂದಿ ಸಿನಿಮಾಕ್ಕೆ ಸಂಗೀತ ನಿರ್ದೇಶನ ನೀಡಿ, ಕೋಲ್ಕತಾದಲ್ಲಿ ನಡೆದ NEZ ಅಂತರಾಷ್ಟ್ರೀಯ ಫಿಲಂ ಫೆಸ್ಟಿವಲ್‌ನಲ್ಲಿ ಹಿನ್ನೆಲೆ ಸಂಗೀತ ಪ್ರಶಸ್ತಿಯನ್ನು ಪಡೆದಿದ್ದಾರೆ. ಅರ್ಜುನ್ ಲೂಯಿಸ್ ನಿರ್ದೇಶನದ ಪರ್ಸ್ಪೆಕ್ಟಿವ್ ಎಂಬ ಕಿರುಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದು ಆ.31ರಂದು ಕಾರ್ನರ್ ಸೀಟ್ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್‌ನಲ್ಲಿ ಉತ್ತಮ ಹಿನ್ನೆಲೆ ಸಂಗೀತ ಪ್ರಶಸ್ತಿಯನ್ನು ಚೆನ್ನೈನಲ್ಲಿ ತಮಿಳು ಚಿತ್ರರಂಗದ ಗಣ್ಯರಿಂದ ಸ್ವೀಕರಿಸಲಿದ್ದಾರೆ.


ಮಂಗಳೂರು ತಾಲೂಕು ಕಚೇರಿಯ ನಿವೃತ್ತ ಪ್ರಥಮ ದರ್ಜೆ ಸಹಾಯಕರಾಗಿದ್ದ ದಿ.ವಿಠಲ ಶೆಟ್ಟಿ ಮತ್ತು ರತ್ನ ವಿ ಶೆಟ್ಟಿಯವರ ಪುತ್ರನಾದ ಪ್ರಸಾದ್ ಕೆ ಶೆಟ್ಟಿ ಅವರು ತನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಪಡೆದು ಪದವಿ ಪೂರ್ವ ಶಿಕ್ಷಣವನ್ನು ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಪಡೆದಿದ್ದಾರೆ.

ಪ್ರಸಾದ್ ಕೆ ಶೆಟ್ಟಿಯವರು ತಾಯಿ ರತ್ನಾ ವಿ ಶೆಟ್ಟಿ, ಪತ್ನಿ ಪುತ್ತೂರು ತಾ.ಪಂ ನರೇಗಾ ತಾಂತ್ರಿಕ ಸಹಾಯಕರಾದ ಆಕಾಂಕ್ಷ ರೈ ಹಾಗೂ ಪುತ್ರಿ ತ್ವಸ್ತಿ ಪಿ ಶೆಟ್ಟಿ ಅವರೊಂದಿಗೆ ಕಲ್ಲಾಜೆಯಲ್ಲಿ ವಾಸವಾಗಿದ್ದಾರೆ.

LEAVE A REPLY

Please enter your comment!
Please enter your name here