ಪುತ್ತೂರು: ಕೊರೋನಾ ಮಹಾಮಾರಿಯ ಬಳಿಕ ಸ್ಥಗಿತಗೊಂಡಿದ್ದ ಪುತ್ತೂರು -ಅಳಿಕೆ ಕೆಎಸ್ಆರ್ಟಿಸಿ ಬಸ್ ಸೇವೆ ಆ.30ರಂದು ಪ್ರಾರಂಭಗೊಂಡಿದ್ದು ಗ್ರಾಮಸ್ಥರು ಬಸ್ ವ್ಯವಸ್ಥೆಯನ್ನು ಸ್ವಾಗತಿಸಿ ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಕಳೆದ ಮೂರು ವರ್ಷದಿಂದ ಪುತ್ತೂರಿನಿಂದ ವಿಟ್ಲಕ್ಕೆ ಬಸ್ಸು ಸಂಚಾರ ಇರಲಿಲ್ಲ. ಹಿಂದೆ ಇದ್ದ ಬಸ್ ವ್ಯವಸ್ಥೆಯನ್ನು ಮತ್ತೆ ಆರಂಭ ಮಾಡುವಂತೆ ಅಳಿಕೆ ಗ್ರಾ.ಪಂ ಅಧ್ಯಕ್ಷ ಪದ್ಮನಾಭ ಪೂಜಾರಿ ಮತ್ತು ನಿಯೋಗ ಶಾಸಕರಲ್ಲಿ ಮನವಿ ಮಾಡಿತ್ತು. ಮನವಿ ಮಾಡಿದ ತಕ್ಷಣ ಸ್ಪಂಧಿಸಿದ ಶಾಸಕರು ವಾರದೊಳಗೆ ಬಸ್ ಸಂಚಾರ ಪುನರಾರಂಭ ಮಾಡುವಂತೆ ಅಧಿಕಾರಿಗೆ ಸೂಚನೆಯನ್ನು ನೀಡಿದ್ದರು.
ಬಸ್ ಗೆ ಸ್ವಾಗತ ನೀಡಿ ಮಾತನಾಡಿದ ಅಳಿಕೆ ಗ್ರಾಪಂ ಅಧ್ಯಕ್ಷ ಪದ್ಮನಾಭ ಪೂಜಾರಿ, ನಮ್ಮ ಮನವಿಗೆ ಸ್ಪಂದಿಸಿದ ಶಾಸಕರು ವಾರದೊಳಗೆ ಬಸ್ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಬಸ್ ಸಂಚಾರ ಇಲ್ಲದೆ ವಿದ್ಯಾರ್ಥಿಗಳಿಗೆ, ಕೂಲಿ ಕಾರ್ಮಿಕರಿಗೆ ತೀವ್ರ ತೊಂದರೆಯಾಗಿತ್ತು. ಈಗ ಎಲ್ಲವೂ ಪರಿಹಾರವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಸದಾಶಿವ ಶೆಟ್ಟಿ, ಸರಸ್ವತಿ, ಶಾಂಭವಿ, ರಮೇಶ್, ಗ್ರಾಪಂ ಮಾಜಿ ಸದಸ್ಯ ಸುಧಾಕರ, ಸ್ಥಳೀಯರಾದ ಬಾಲಕೃಷ್ಣಪೂಜಾರಿ, ಶರತ್, ಚಿದಾನಂದ, ಶೋಭಾಚಾರ್ಯ, ವಿಜಯ, ಈಶ್ವರಮೂಲ್ಯ, ಹಂಝ ಚೆಂಡುಕಲ, ಇಮ್ರನ್ ಪಡೀಲ್, ಪದ್ಮನಾಭ ಗೌಡ ಮೊದಲಾದವರು ಉಪಸ್ಥಿತರಿದ್ದರು.