ಸಂಘಟನೆಯಲ್ಲಿ ರಾಜಕೀಯ ಲಾಭದ ಉದ್ದೇಶವಿಲ್ಲ- ಕಾವು ಹೇಮನಾಥ ಶೆಟ್ಟಿ
ಪುತ್ತೂರು : ಯಾವುದೇ ಪಕ್ಷ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರೂ ಸಂಘಟನೆಯೊಳಗೆ ರಾಜಕೀಯ ಲಾಭದ ಉದ್ದೇಶ ಇಟ್ಟುಕೊಳ್ಳುವಂತಿಲ್ಲ. ಸಮಾಜದಲ್ಲಿ ಸಮಸ್ಯೆಯಲ್ಲಿರುವ ಮಂದಿಗೆ ಸಹಾಯ ಮಾಡುವುದು, ಯಾವುದೇ ಕಳಂಕವಿಲ್ಲದೆ ಸಮಾಜ ಕಟ್ಟುವ ಹಾಗೂ ಒಬ್ಬರಿಗೊಬ್ಬರು ಸಹಾಯ ಮಾಡುವ ಮೂಲಕ ಸಮಾಜ ಸಂಘಟನೆಯನ್ನು ಬಲಿಷ್ಠಗೊಳಿಸುವ ಕೆಲಸ ಮಾಡುವುದು ಸಂಘಟನೆಯ ಉದ್ದೇಶ ಎಂದು ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಹೇಮನಾಥ ಶೆಟ್ಟಿ ಕಾವು ಅವರು ಹೇಳಿದರು.
ಅವರು ಪಡುವನ್ನೂರು ಗ್ರಾಮದ ಕುದ್ಕಾಡಿ ರಘುನಾಥ ರೈ ಮತ್ತು ಪುರಂದರ ರೈ ಸಹೋದರರ ನಿವಾಸದಲ್ಲಿ ನಡೆದ ಪಡುವನ್ನೂರು ಗ್ರಾಮದ ಬಂಟರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸ್ವಾಭಿಮಾನ, ನಾಯಕತ್ವ ಗುಣಗಳೊಂದಿಗೆ ಪಾರಂಪರಿಕ ಇತಿಹಾಸ ಹೊಂದಿರುವ ಬಂಟರು ದೈವಸ್ಥಾನ, ದೇವಸ್ಥಾನಗಳ ಅಭಿವೃದ್ಧಿ, ದೈವಾರಾಧನೆಗಳಲ್ಲಿ ಮುಂಚೂಣಿಯಲ್ಲಿರುವವರಾಗಿದ್ದಾರೆ. ನಮ್ಮಲ್ಲಿ ಕೆಲವರು ಆರ್ಥಿಕವಾಗಿ ಹಿಂದುಳಿದ ಬಡವರಿದ್ದರೂ ಹೃದಯ ವೈಶಾಲ್ಯತೆಯಿದೆ.ನಾವೆಲ್ಲರೂ ಒಟ್ಟಾಗಿ ಒಂದೇ ಮನಸಿನಿಂದ ಕೆಲಸ ಮಾಡಿದರೆ ಇಡೀ ಸಮಾಜವೇ ಸದೃಢವಾಗುವುದು ಎಂದ ಅವರು, ತಾನು ಅಧ್ಯಕ್ಷನಾಗಿ ಆಯ್ಕೆಗೊಂಡ ಬಳಿಕ ತಾಲೂಕಿನಲ್ಲಿರುವ ಎಲ್ಲಾ ಗ್ರಾಮದಲ್ಲಿ ಇರುವ ಬಂಟರ ಮಾಹಿತಿ ಸಂಗ್ರಹ ಕಾರ್ಯ ನಡೆಸಲು ತೀರ್ಮಾನಿಸಲಾಗಿದೆ. ಗ್ರಾಮ ಮಟ್ಟದಲ್ಲಿ ಸಮಿತಿಗಳು ಸಕ್ರೀಯಗೊಂಡರೆ ಮಾತ್ರ ಸಂಘಟನೆಯು ಬಲಿಷ್ಟವಾಗಲು ಸಾಧ್ಯವಿದ್ದು, ಈ ನಿಟ್ಟಿನಲ್ಲಿ ತಾಲೂಕಿನಾದ್ಯಂತ ಗ್ರಾಮ ಸಮಿತಿಗಳ ರಚನಾ ಕಾರ್ಯ ಆರಂಭಗೊಂಡಿದೆ ಎಂದರು.
ಬಂಟರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿಯ ಸಂಚಾಲಕ ದುರ್ಗಾಪ್ರಸಾದ್ ರೈ ಕುಂಬ್ರ, ಸಹ ಸಂಚಾಲಕ ಸಾಜ ರಾಧಾಕೃಷ್ಣ ರೈ ಆಳ್ವ, ಬಂಟರ ಸಂಘದ ಪುತ್ತೂರು ತಾಲೂಕು ಮಾಜಿ ಅಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು ಅವರು ಮಾತನಾಡಿ,ನಮ್ಮೊಳಗಿನ ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಸಂಘದ ಒಳಗೆ ತಾರದೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಕೆಲಸ ಮಾಡಬೇಕು. ಅನಾರೋಗ್ಯ-ಮರಣ ಇನ್ನಿತರ ಕಷ್ಟದ ಸಂದರ್ಭಗಳಲ್ಲಿ ಪರಸ್ಪರ ಕೈಜೋಡಿಸುವ ಕೆಲಸಗಳಾಗಬೇಕು. ನಾವು ಪ್ರತಿಯೊಬ್ಬರೂ ಒಂದಲ್ಲಾ ಒಂದು ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿದ್ದರೂ ಸಂಘಟನೆಯೊಳಗೆ ರಾಜಕೀಯ ತರಬಾರದು ಎಂದರು.
ಮಾಜಿ ಮಂಡಲ ಉಪಪ್ರಧಾನ ಬಾಲಕೃಷ್ಣ ರೈ ಕುದ್ಕಾಡಿ ಅವರು ಸಭೆಯನ್ನು ಉದ್ಘಾಟಿಸಿದರು. ಪುತ್ತೂರು ತಾಲ್ಲೂಕು ಬಂಟರ ಮಹಿಳಾ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈ ನರಿಮೊಗರು, ಪುತ್ತೂರು ತಾಲೂಕು ಬಂಟರ ಸಂಘದ ಉಪಾಧ್ಯಕ್ಷ ರಮೇಶ್ ರೈ ಡಿಂಬ್ರಿ. ಯುವ ವಿಭಾಗದ ಅಧ್ಯಕ್ಷ ಹರ್ಷಕುಮಾರ್ ರೈ ಮಾಡಾವು, ಮಾತೃ ಸಂಘದ ನಿರ್ದೇಶಕ ಜಯಪ್ರಕಾಶ್ ರೈ ನೂಜಿಬೈಲು, ಮಹಿಳಾ ಬಂಟರ ಸಂಘದ ಖಜಾಂಜಿ ಅರುಣಾ ದಿನಕರ್ ರೈ, ಮಾತೃ ಸಂಘದ ನಿರ್ದೇಶಕರಾದ ವಾಣಿ ಎಸ್ ಶೆಟ್ಟಿ, ಮಹಿಳಾ ಬಂಟರ ಸಂಘದ ನಯನಾ ರೈ ನೆಲ್ಲಿಕಟ್ಟೆ, ರಘುನಾಥ ರೈ ಕುದ್ಕಾಡಿ ಮತ್ತಿತರರು ಉಪಸ್ಥಿತರಿದ್ದರು. ಬಂಟರ ಸಂಘದ ಪಡುವನ್ನೂರು ಗ್ರಾಮ ಸಮಿತಿಯ ಅಧ್ಯಕ್ಷ ರವಿರಾಜ್ ರೈ ಸಜಂಕಾಡಿ ಅವರು ಮಾತನಾಡಿ ಪರಸ್ಪರ ಸಹಕಾರ ತತ್ವದೊಂದಿಗೆ ಸಂಘಟನೆಯನ್ನು ಬಲಿಷ್ಠವಾಗಿ ಕಟ್ಟಲು ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡರು.
ಸಭೆಯಲ್ಲಿ ಬಂಟರ ಸಂಘದ ಪಡುವನ್ನೂರು ಗ್ರಾಮ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಆಯ್ಕೆಯಾದ ರವಿರಾಜ್ ರೈ ಸಜಂಕಾಡಿ, ಕಾರ್ಯದರ್ಶಿಯಾಗಿ ಆಯ್ಕೆಯಾದ ಶಶಿಧರ್ ರೈ ಕುತ್ಯಾಳ, ಕೋಶಾಧಿಕಾರಿಯಾಗಿ ಆಯ್ಕೆಯಾದ ಪುರಂದರ ರೈ ಕುದ್ಕಾಡಿ ಅವರನ್ನು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅವರು ಶಾಲು ಹೊದಿಸಿ ಗೌರವಿಸಿದರು.
ತಾಲೂಕು ಬಂಟರ ಸಂಘದ ನಿರ್ದೇಶಕ ಸತೀಶ್ ರೈ ಕಟ್ಟಾವು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ ವಂದಿಸಿದರು.