ನಗರದ ಆರೋಗ್ಯ ಕಾಪಾಡುವವರ ಆರೋಗ್ಯ ತಪಾಸಣೆ ನಡೆಸಿದ ಆರೋಗ್ಯ ಇಲಾಖೆ

0


ತಂಬಾಕು ರಹಿತ ಸಮಾಜ ನಿರ್ಮಾಣದ ಗುರಿ – ಡಾ. ದೀಪಕ್ ರೈ

ಪುತ್ತೂರು: ನಗರದ ಸ್ವಚ್ಛತೆಯ ಮೂಲಕ ಆರೋಗ್ಯ ಕಾಪಾಡುತ್ತಿರುವ ಪೌರ ಕಾರ್ಮಿಕರ ಆರೋಗ್ಯ ತಪಾಸಣೆ ಮತ್ತು ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ವಿಶೇಷ ಕಾರ್ಯಕ್ರಮ ಪುತ್ತೂರು ನಗರಸಭೆ ಸಭಾಂಗಣದಲ್ಲಿ ಆ.30ರಂದು ನಡೆಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಪುತ್ತೂರು, ನಗರಸಭೆ ಪುತ್ತೂರು, ಸಾರ್ವಜನಿಕ ಆಸ್ಪತ್ರೆ ಪುತ್ತೂರು ಮತ್ತು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಪುತ್ತೂರು, ರಾಷ್ಟ್ರೀಯ ಬಾಯಿಯ ಆರೋಗ್ಯ ಕಾರ್ಯಕ್ರಮ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ತಾಲೂಕು ಆರೋಗ್ಯಾಧಿಕಾರಿ ಡಾ ದೀಪಕ್ ರೈ ಅವರು ಉದ್ಘಾಟಿಸಿ ಮಾತನಾಡಿ, ತಂಬಾಕು ಬಾಯಲ್ಲಿ ಕ್ಯಾನ್ಸರ್ ಮತ್ತು ಶ್ವಾಸಕೋಶದಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ಈ ನಿಟ್ಟಿನಲ್ಲಿ ದುಷ್ಪರಿಣಾಮಗಳನ್ನು ತಡೆಗಟ್ಟಲು ಮತ್ತು ತಂಬಾಕು ರಹಿತ ಸಮಾಜ ನಿರ್ಮಾಣ ಮಾಡಲು ಇಂತಹ ಶಿಬಿರ ನಡೆಸಲಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಗರಸಭೆ ಕಾರ್ಯಪಾಲಕ ಅಭಿಯಂತರ ಪರಿಸರ ಅಧಿಕಾರಿ ಶಬರೀನಾಥ್ ಅವರು ಮಾತನಾಡಿ, ಪೌರ ಕಾರ್ಮಿಕರು ನಗರದ ಆರೋಗ್ಯ ಕಾಪಾಡುತ್ತಾರೆ. ಇಂತಹ ಸಂದರ್ಭದಲ್ಲಿ ಅವರ ಆರೋಗ್ಯವನ್ನು ಕಾಪಾಡುವುದು ನಮ್ಮ ಕರ್ತವ್ಯ. ಅದಕ್ಕಾಗಿ ಈ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಪೌರ ಕಾರ್ಮಿಕರು ನಗರ ಸ್ವಚ್ಛತೆಯಲ್ಲಿ ಇರುವ ಸಂದರ್ಭ ಪ್ರತಿ ಹಂತದಲ್ಲೂ ಅವರ ಆರೋಗ್ಯ ಕಾಪಾಡುವುದು ಮುಖ್ಯ. ಅವರ ಕೆಲಸದೊಂದಿಗೆ ಅವರು ತಂಬಾಕು ಸೇವನೆಗೂ ಗುರಿಯಾಗುತ್ತಾರೆ. ಇದರಿಂದ ಅನೇಕ ದುಷ್ಪರಿಣಾಮಗಳು ಬರುತ್ತದೆ. ಈ ಕುರಿತು ಜಾಗೃತಿ ಮೂಡಿಸುವ ಕೆಲಸವು ನಾವು ಮಾಡುತ್ತಿದ್ದೇವೆ ಎಂದರು.

ಸರಕಾರಿ ಆಸ್ಪತ್ರೆಯ ದಂತ ವೈದ್ಯ ಡಾ. ಜಯದೀಪ್ ಅವರು ಮಾತನಾಡಿ, ನಗರಸಭೆಯಲ್ಲಿ ತುಂಬಾ ಪೌರ ಕಾರ್ಮಿಕರಿದ್ದಾರೆ. ಕಷ್ಟದಾಯಕ ಕೆಲಸದಲ್ಲಿ ತೊಡಗಿದಾಗ ತಂಬಾಕು ಸೇವನೆ ಮಾಡುವುದು ಅವರ ಆರೋಗ್ಯಕ್ಕೆ ತೊಂದರೆ ನೀಡಲಿದೆ. ಈ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ತಪಾಸಣೆ ಶಿಬಿರ ಮಾಡಲಾಗುತ್ತಿದೆ ಎಂದರು. ಡಾ.ಸ್ಮಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಗರಸಭೆ ಸಮುದಾಯ ಸಂಘಟನಾಧಿಕಾರಿ ಕರುಣಾಕರ ಸ್ವಾಗತಿಸಿ, ವಂದಿಸಿದರು. ಶಿಬಿರದಲ್ಲಿ ಬಾಯಿ ಆರೋಗ್ಯದ ಕುರಿತು ಡಾ.ಜಯದೀಪ್ ಅವರು ಪ್ರಾತ್ಯಕ್ಷಿಕೆಯ ಮೂಲಕ ಪೌರ ಕಾರ್ಮಿಕರಿಗೆ ಅರಿವು ಮಾಹಿತಿ ನೀಡಿದರು. ನಗರಸಭೆ ಆರೋಗ್ಯ ನಿರೀಕ್ಷರಾದ ರಾಮಚಂದ್ರ, ವರಲಕ್ಷ್ಮಿ, ಆರೋಗ್ಯ ಶಿಕ್ಷಣಾಧಿಕಾರಿ ಪದ್ಮಾವತಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಪೌರ ಕಾರ್ಮಿಕರಿಗೆ ಜನರಲ್ ಚೆಕ್‌ ಅಪ್ ಮತ್ತು ಬಾಯಿಯ ತಪಾಸಣೆ ನಡೆಸಲಾಯಿತು.

LEAVE A REPLY

Please enter your comment!
Please enter your name here