ರಾಷ್ಟ್ರೀಯ ಸೇವಾ ಯೋಜನೆ ಪಠ್ಯವಿಷಯವಾಗಬೇಕು: ಸುಬ್ರಹ್ಮಣ್ಯ ನಟ್ಟೋಜ- ಅಂಬಿಕಾ ಪದವಿ ಕಾಲೇಜಿನಲ್ಲಿ ಎನ್.ಎಸ್.ಎಸ್ ವಾರ್ಷಿಕ ಚಟುವಟಿಕೆಗಳಿಗೆ ಚಾಲನೆ

0

ಪುತ್ತೂರು: ರಾಷ್ಟ್ರೀಯ ಸೇವಾ ಯೋಜನೆ ಇಂದು ಶೈಕ್ಷಣಿಕ ವ್ಯವಸ್ಥೆಯಲ್ಲಿ ಪಠ್ಯೇತರ ಚಟುವಟಿಕೆಯಾಗಿ ವಿದ್ಯಾರ್ಥಿಗಳಿಗೆ ದೊರೆಯುತ್ತಿದೆ. ಆದರೆ ಅದು ಪಠ್ಯವಿಷಯವಾಗಿಯೇ ಎಲ್ಲ ವಿದ್ಯಾರ್ಥಿಗಳಿಗೆ ದೊರೆಯಬೇಕಾದ ಅವಶ್ಯಕತೆ ಇದೆ. ವ್ಯಕ್ತಿತ್ವವನ್ನು ರೂಪುಗೊಳಿಸುವ ರಾಷ್ಟ್ರೀಯ ಸೇವಾ ಯೋಜನೆಯನ್ನು ಪ್ರಮುಖ ಅಧ್ಯಯನ ವಿಷಯವನ್ನಾಗಿಸಿದಾಗ ಸೇವಾ ಮನೋಭಾವನೆಯ ಸಮಾಜ ನಿರ್ಮಾಣವಾಗುವುದಕ್ಕೆ ಹೆಚ್ಚಿನ ಅನುವು ದೊರಕುತ್ತದೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಮಂಗಳವಾರ ಮಾತನಾಡಿದರು.

ಇಂದು ಮಾನವೀಯತೆ, ತಾಳ್ಮೆ, ಶಿಸ್ತು, ಹೃದಯವಂತಿಕೆ, ಬದ್ಧತೆಗಳಿಲ್ಲದ ವ್ಯಕ್ತಿಗಳು ಸಮಾಜದ ನಾನಾ ಸ್ಥರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪರಿಣಾಮವಾಗಿ ಭ್ರಷ್ಟಾಚಾರ, ಅನಾಚಾರಗಳು ಅವ್ಯಾಹತವಾಗಿ ನಡೆಯುತ್ತಿವೆ. ಇವೆಲ್ಲದಕ್ಕೂ ರಾಷ್ಟ್ರೀಯ ಸೇವಾ ಯೋಜನೆ ಉತ್ತರವಾಗಿ ಕಾಣಿಸಿಕೊಳ್ಳುವ ಅರ್ಹತೆ ಹೊಂದಿದೆ. ಆದರೆ ಈ ವ್ಯವಸ್ಥೆಯನ್ನು ಶಿಕ್ಷಣದ ಪ್ರಮುಖ ಭಾಗವಾಗಿ ಪರಿವರ್ತನೆ ಮಾಡಿದಾಗ ಮಾತ್ರ ಉದ್ದೇಶಿತ ಗುರಿಯನ್ನು ತಲಪಬಹುದು ಎಂದು ಅಭಿಪ್ರಾಯಪಟ್ಟರು.


ರಾಷ್ಟ್ರೀಯ ಸೇವಾ ಯೋಜನೆ ಕೇವಲ ಸ್ವಚ್ಚತೆಗಷ್ಟೇ ಸೀಮಿತವಾಗಿರಬಾರದು. ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲೂ ಸಮರ್ಪಕವಾಗಿ ತೊಡಗಿಕೊಳ್ಳಬೇಕು. ತಪ್ಪು ಒಪ್ಪುಗಳನ್ನು ಜನಸಾಮಾನ್ಯರಿಗೆ ತಿಳಿಸುವ ಕಾರ್ಯದಲ್ಲಿ ನಿರಂತರವಾಗಿ ನಿರತವಾಗಬೇಕು. ಸಾಮಾಜಿಕ ಬದಲಾವಣೆಯ ಮಾಧ್ಯಮವಾಗಬೇಕು ಎಂದು ಅಭಿಪ್ರಾಯಪಟ್ಟರು.


ವೇದಿಕೆಯಲ್ಲಿ ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ, ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾಂತ ಗೋರೆ ಉಪಸ್ಥಿತರಿದ್ದರು.ವಿದ್ಯಾರ್ಥಿನಿ ಶ್ರೀಲಕ್ಷ್ಮೀ ಪ್ರಾರ್ಥಿಸಿದರು. ಎನ್.ಎಸ್.ಎಸ್ ನಾಯಕಿ ಮಾನ್ಯ ಸ್ವಾಗತಿಸಿದರು. ಎನ್.ಎಸ್.ಎಸ್ ನಾಯಕ ಪ್ರಸ್ತುತ್ ವಂದಿಸಿದರು. ಎನ್.ಎಸ್.ಎಸ್.ಯೋಜನಾಧಿಕಾರಿ ಹರ್ಷಿತ್ ಪಿಂಡಿವನ 23-24ರ ಶೈಕ್ಷಣಿಕ ವರ್ಷದ ವರದಿ ವಾಚಿಸಿದರು. ವಿದ್ಯಾರ್ಥಿನಿ ಅಕ್ಷಿತಾ ಕಾರ್ಯಕ್ರಮ ನಿರ್ವಹಸಿದರು.

LEAVE A REPLY

Please enter your comment!
Please enter your name here