ಹಳೆನೇರೆಂಕಿ: ವರ್ಗಾವಣೆಗೊಂಡ ಶಿಕ್ಷಕ ಮಯೂರ್‌ರವರಿಗೆ ಬೀಳ್ಕೊಡುಗೆ

0

ಪುತ್ತೂರು: ಕಡಬ ತಾಲೂಕಿನ ಹಳೆನೇರೆಂಕಿ ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆಯಲ್ಲಿ 17 ವರ್ಷ ಸೇವೆ ಸಲ್ಲಿಸಿ ಉಪ್ಪಿನಂಗಡಿ ಸರಕಾರಿ ಪ್ರೌಢಶಾಲೆಗೆ ವರ್ಗಾವಣೆಗೊಂಡ ಶಿಕ್ಷಕ ಮಯೂರ್ ಪಿ.ಅವರಿಗೆ ಶಾಲಾ ವತಿಯಿಂದ ಬೀಳ್ಕೊಡುಗೆ ಸಮಾರಂಭ ಆ.30ರಂದು ನಡೆಯಿತು.


ಅಭಿನಂದನಾ ಮಾತುಗಳನ್ನಾಡಿದ ಕಡಬ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಾಂತರಾಮ ಓಡ್ಲರವರು, ಮಯೂರ್ ಪಿ.ಅವರ ತಂದೆ, ತಾಯಿಯೂ ಶಿಕ್ಷಕರಾಗಿದ್ದುದರಿಂದ ಅವರು ಬಾಲ್ಯದಲ್ಲಿಯೇ ಎಲ್ಲಾ ಸಂಸ್ಕಾರಗಳನ್ನು ಕಲಿತು ಈಗ ಹಳೆನೇರೆಂಕಿ ಗ್ರಾಮದ ಜನರ ಮನಸ್ಸು ಗೆಲ್ಲುವಂತಾಯಿತು ಎಂದರು. ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಮಲ್‌ಕುಮಾರ್ ನೆಲ್ಯಾಡಿ ಮಾತನಾಡಿ, ಮಯೂರ್ ಪಿ.,ಅವರು ತಾಲೂಕಿನ ಉತ್ತಮ ಗಣಿತ-ವಿಜ್ಞಾನ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ ಎಂದರು. ಕಡಬ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ಮಲ್ಲಾರ ಮಾತನಾಡಿ, ಮಯೂರ್ ಪಿ.ಅವರು ಜನರ ಪ್ರೀತಿಗಳಿಸಿರುವುದಕ್ಕೆ ಇಲ್ಲಿ ಸೇರಿದ ದೊಡ್ಡ ಸಂಖ್ಯೆಯಲ್ಲಿ ಸೇರಿರುವ ಜನತೆಯೇ ಸಾಕ್ಷಿ ಎಂದರು. ಸನ್ಮಾನ ಸ್ವೀಕರಿಸಿದ ಶಿಕ್ಷಕ ಮಯೂರ್ ಅವರು ಮಾತನಾಡಿ, ನನಗೆ ಹಳೆನೇರೆಂಕಿಯ ಜನತೆ ಎಲ್ಲಾ ಗೌರವ, ಪ್ರೀತಿ ನೀಡಿದ್ದಾರೆ. ಇಲ್ಲಿ ಗಳಿಸಿದ ಅನುಭವಗಳನ್ನು ನನ್ನ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ ಎಂದರು.

ಅಧ್ಯಕ್ಷತೆ ವಹಿಸಿದ್ದ ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಸುಚೇತಾ ಅವರು ಮಾತನಾಡಿ, ಮಕ್ಕಳ ಕಣ್ಣೀರು ಗಮನಿಸಿದಲ್ಲಿ ಇವರೊಬ್ಬ ವಿಶೇಷತೆಗಳಲ್ಲಿ ವಿಶೇಷ ಶಿಕ್ಷಕರು ಎಂದರು. ರಾಮಕುಂಜ ಕ್ಲಸ್ಟರ್ ಸಿಆರ್‌ಪಿ ಮಹೇಶ್, ಎಸ್‌ಡಿಎಂಸಿ ಅಧ್ಯಕ್ಷ ಹೊನ್ನಪ್ಪ ಗೌಡ ಮರಂಕಾಡಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜನಾರ್ದನ ಕದ್ರ, ಶಾಲಾ ಶತಮಾನೋತ್ಸವ ಸಮಿತಿ ಉಪಾಧ್ಯಕ್ಷರಾದ ಧರ್ಣಪ್ಪ ಗೌಡ, ಸಂತೋಷ್ ರಾವ್, ವಸಂತಿ ಕೆನಮಾರ್, ರಾಮಕುಂಜ ಗ್ರಾ.ಪಂ.ಸದಸ್ಯೆ ಮಾಲತಿ ಕದ್ರ, ನಿವೃತ್ತ ಶಿಕ್ಷಕಿ ಸುಗಂಧಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳು, ಪೋಷಕರು, ಎಸ್‌ಡಿಎಂಸಿ ಮಾಜಿ ಅಧ್ಯಕ್ಷರು ಸೇರಿದಂತೆ ಹಲವು ಮಂದಿ ಶಿಕ್ಷಕ ಮಯೂರ್ ಅವರ ಸಾಧನೆ ನೆನಪಿಸಿಕೊಂಡರು.
ಮುಖ್ಯಶಿಕ್ಷಕ ವೈ.ಸಾಂತಪ್ಪ ಗೌಡ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ರಾಮಣ್ಣ ಗೌಡ ವಂದಿಸಿದರು. ಶಿಕ್ಷಕ ದಯಾನಂದ ಓಡ್ಲ ನಿರೂಪಿಸಿದರು. ಶಾಲಾ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಹಿರಿಯ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

ಚಿತ್ರ ವಿನ್ಯಾಸ ಉದ್ಘಾಟನೆ:ಶಾಲೆಯ ನಲಿಕಲಿ 2 ಕೊಠಡಿಗಳನ್ನು 80 ಸಾವಿರ ರೂ.ವೆಚ್ಚದಲ್ಲಿ ಚಿತ್ರ ವಿನ್ಯಾಸ ಮಾಡಲಾಗಿದ್ದು ಇದರ ಉದ್ಘಾಟನೆಯನ್ನು ಈ ಸಂದರ್ಭದಲ್ಲಿ ಮಾಡಲಾಯಿತು.

LEAVE A REPLY

Please enter your comment!
Please enter your name here