ಮೇನಾಲ ಪಂಚೋಡಿಯ ಕೋಳಿ ತ್ಯಾಜ್ಯ ನಿರ್ವಹಣಾ ಘಟಕ ಸ್ಥಳಾಂತರಕ್ಕೆ ಹೈಕೋರ್ಟ್‌ನಲ್ಲಿ ಪಿಐಎಲ್

0

ಜಿಲ್ಲಾಡಳಿತ ಸಹಿತ ಏಳು ಪ್ರತಿವಾದಿಗಳಿಗೆ ನೋಟೀಸ್

ಪುತ್ತೂರು: ನೆಟ್ಟಣಿಗೆ ಮುಡ್ನೂರು ಗ್ರಾಮದ ಮೇನಾಲ ಪಂಚೋಡಿಯಲ್ಲಿರುವ ಕೋಳಿ ತ್ಯಾಜ್ಯ ನಿರ್ವಹಣಾ ಘಟಕವನ್ನು ಸ್ಥಳಾಂತರಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿ ದ.ಕ.ಜಿಲ್ಲಾಡಳಿತ ಸಹಿತ 7 ಮಂದಿಗೆ ಕರ್ನಾಟಕ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.


ನೆಟ್ಟಣಿಗೆಮುಡ್ನೂರು ಗ್ರಾಮದ ಪಂಚೋಡಿ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಹೈಟೆಕ್ ಆರ್ಗ್ಯಾನಿಕ್ ಫರ್ಟಿಲೈಜರ್ ಕಂಪನಿ ಕೋಳಿ ತ್ಯಾಜ್ಯ ನಿರ್ವಹಣಾ ಘಟಕದ ದುರ್ವಾಸನೆ ವಿರುದ್ದ ಹಾಗೂ ಘಟಕವನ್ನು ಸ್ಥಳಾಂತರಿಸಲು ನಿರ್ದೇಶನ ನೀಡುವಂತೆ ಗ್ರಾಮಸ್ಥರಾದ ಪ್ರವೀಣ್ ಹಾಗೂ ಇತರ 10 ಮಂದಿ ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಕೇಶವ ಪಾಟಾಳಿ ಎಂಬವರ ಜಾಗದಲ್ಲಿ ರಾಸಾಯನಿಕ ಸಹಿತ ಪ್ರಾಣಿ ತ್ಯಾಜ್ಯ ನಿರ್ವಹಣ ಘಟಕ ಇದ್ದು, ದಿನದ 24 ಗಂಟೆಯೂ 2 ಕಿ.ಮೀ. ವ್ಯಾಪ್ತಿಯಲ್ಲಿ ದುರ್ಗಂಧ ಬೀರಿ ಜನರಿಗೆ ಉಸಿರಾಡಲು ಕಷ್ಟವಾಗಿದೆ.ಘಟಕದಿಂದ ಸಾರ್ವಜನಿಕರಿಗೆ ಬಹಳಷ್ಟು ತೊಂದರೆ ಆಗಿದ್ದು ದುರ್ವಾಸನೆಯಿಂದ ಸರಿಯಾಗಿ ಊಟ ಮಾಡಲು ಕೂಡ ಸಾಧ್ಯವಾಗುತ್ತಿಲ್ಲ. ಅದೇ ರೀತಿ ಅನೇಕ ರೋಗ-ರುಜಿನಗಳು ಹರಡುವ ಸಾಧ್ಯತೆಗಳಿವೆ. ಸಮೀಪದಲ್ಲೇ ಸರಕಾರಿ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿದ್ದು, ಅಲ್ಲಿನ ಮಕ್ಕಳಿಗೆ ತೀವ್ರತರವಾದ ಆರೋಗ್ಯ ತೊಂದರೆ ಉಂಟಾಗಿದೆ. ಈ ಎಲ್ಲ ಕಾರಣಗಳಿಂದ ತ್ಯಾಜ್ಯ ನಿರ್ವಹಣಾ ಘಟಕವನ್ನು ಸ್ಥಳಾಂತರಿಸುವಂತೆ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.


ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾ|ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಅರ್ಜಿ ವಿಚಾರಣೆಗೆ ಬಂದಿತ್ತು. ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯ ಅಧಿಕಾರಿ, ಪುತ್ತೂರು ತಹಶೀಲ್ದಾರ್, ನೆಟ್ಟಣಿಗೆಮುಡ್ನೂರು ಗ್ರಾ.ಪಂ. ಅಧ್ಯಕ್ಷ ಸೇರಿ 7 ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಸೆ.18ಕ್ಕೆ ಮುಂದೂಡಿದೆ.ಸಾರ್ವಜನಿಕರ ಪರವಾಗಿ ಹೈಕೋರ್ಟ್‌ನಲ್ಲಿ ವಕೀಲರಾದ ರಾಜಾರಾಮ್ ಸೂರ್ಯಂಬೈಲು ಮತ್ತು ನಿತೇಶ್ ರೈ ಕೋಟೆ ಮತ್ತು ಪುತ್ತೂರಿನ ವಕೀಲರಾದ ಚಂದ್ರಹಾಸ ಈಶ್ವರಮಂಗಲ ವಾದ ಮಂಡಿಸಿದರು.

ಕೋಳಿ ತ್ಯಾಜ್ಯ ಘಟಕ ಇರುವ ಸ್ಥಳ ಯಾವುದೇ ಕೈಗಾರಿಕಾ ಮೀಸಲು ಸ್ಥಳವಾಗಿರುವುದಿಲ್ಲ ಇದು ಜನರ ವಾಸ್ತವ್ಯ ಉದ್ದೇಶಕ್ಕೆ ಇರುವ ಸ್ಥಳವಾಗಿದೆ. ಆದ್ದರಿಂದ ಜನ ವಾಸ್ತವ್ಯ ಇರುವ ಸ್ಥಳಗಳಲ್ಲಿ ಇಂತಹ ಅಪಾಯಕಾರಿ ಕಾರ್ಖಾನೆಗಳನ್ನು ಮುಚ್ಚಬೇಕಾಗಿದೆ. ಕೋಳಿ ತ್ಯಾಜ್ಯ ಘಟಕವು ಪಂಚಾಯತ್‌ನ ಪರವಾನಿಗೆ ಇಲ್ಲದೆ 2016ನೇ ಇಸವಿಯಿಂದ ನಡೆಯುತ್ತಿದೆ. ಈ ಕುರಿತು ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ಹಾಗೂ ಗ್ರಾಮಸಭೆಗಳಲ್ಲಿ ಪ್ರಸ್ತಾಪವಾಗಿ ಆ ಕಾರ್ಖಾನೆಯನ್ನು ಮುಚ್ಚಲು ಹಲವು ಬಾರಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಹಲವಾರು ಬಾರಿ ಗ್ರಾಮ ಪಂಚಾಯತ್ ಇದನ್ನು ಮುಚ್ಚುವ ಪ್ರಯತ್ನ ಕೂಡ ಮಾಡಿತ್ತು.ಇದರ ವಿರುದ್ಧ ಅನೇಕ ಪ್ರತಿಭಟನೆಗಳೂ ನಡೆದಿದ್ದವು. ಯಾವುದೂ ಫಲದಾಯಕವಾಗಿಲ್ಲ ಎಂದು ಇದೀಗ ಸಾರ್ವಜನಿಕರು ಹೈಕೋರ್ಟಿನಲ್ಲಿ ಪಿಐಎಲ್ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here