ಪುರುಷರಕಟ್ಟೆ 24ನೇ ವರ್ಷದ ಸಂಭ್ರಮದ ಗಣೇಶೋತ್ಸವಕ್ಕೆ ಚಾಲನೆ

0

ಪುತ್ತೂರು: ಪುರುಷರಕಟ್ಟೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮೂರು ದಿನಗಳ ಕಾಲ ಪುರುಷರಕಟ್ಟೆಯ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಯ ಮುಂಭಾಗದಲ್ಲಿ ಸಂಭ್ರಮಿಸಲಿರುವ 24ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ.7ರಂದು ಚಾಲನೆ ದೊರೆಯಿತು.


ಅರ್ಚಕ ರಾಧಾಕೃಷ್ಣ ಶಗ್ರಿತ್ತಾಯರವರ ನೇತೃತ್ವದಲ್ಲಿ ನಡೆಯುವ ಗಣೇಶೋತ್ಸವದಲ್ಲಿ ಸೆ.7ರಂದು ಬೆಳಿಗ್ಗೆ ಶ್ರೀಗಣೇಶನ ವಿಗ್ರಹ ಪ್ರತಿಷ್ಠೆ, ಪ್ರಾರ್ಥನೆ, ಗಣಪತಿ ಹೋಮ, ಸ್ಥಳ ಶುದ್ದಿಯೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಅಪರಾಹ್ನ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು ನಡೆಯಿತು.
ಸಂಜೆ ಪುರುಷರಕಟ್ಟೆ ಶ್ರೀದೇವಿ ಭಜನಾ ಮಂಡಳಿಯವರಿಂದ ಭಜನೆ, ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆದ ಬಳಿಕ ಬಂಗಾರ್ ಕಲಾವಿದೆರ್ ಪುತ್ತೂರು ಇವರಿಂದ ಮನಸ್ಸ್ ಎನ್ನಿಲೆಕ ಎಂಬ ತುಳು ನಾಟಕ ನಡೆಯಲಿದೆ.


ಸೆ.8ರಂದು ಬೆಳಿಗ್ಗೆ ಗಣಹೋಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಶಾಂತಿಗೋಡು ಕೂಡುರಸ್ತೆ ಶ್ರೀದುರ್ಗಾ ಭಜನಾ ಮಂಡಳಿಯವರಿಂದ ಭಜನೆ, ರಾತ್ರಿ ನರಿಮೊಗರು ಸರಸ್ವತಿ ವಿದ್ಯಾಮಂದಿರದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳು, ರಾತ್ರಿ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆಯ ಬಳಿಕ ಧಾರ್ಮಿಕ ಸಭೆ, ಬಳಿಕ ವಿಷ್ಣು ಕಲಾವಿದೆರ್ ಕಳೆಂಜ ಬೆಳ್ಳಾರೆ ಅಭಿನಯದ ಅಗ್ಗಿನಾತ್ ಮುಗ್ಯುಜಿ ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.


ಸೆ.9ರಂದು ಶೋಭಾಯಾತ್ರೆ:
ಗಣೇಶೋತ್ಸವದಲ್ಲಿ ಮೂರನೇ ದಿನವಾದ ಸೆ.9ರಂದು ಬೆಳಿಗ್ಗೆ ಗಣಹೋಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ, ಅಪರಾಹ್ನ ಮಜಲುಮಾರು ಶ್ರೀ ಉಮಾಮಹೇಶ್ವರ ಭಜನಾ ಮಂಡಳಿ ಹಾಗೂ ಪುರುಷರಕಟ್ಟೆ ಇಂದಿರಾನಗರ ಶ್ರೀವನದುರ್ಗಾ ಭಜನಾ ಮಂಡಳಿಯವರಿಂದ ಭಜನೆ, ಸಂಜೆ ಮಹಾಪೂಜೆ, ಪ್ರಸಾದ ವಿತರಣೆಯ ಬಳಿಕ ಗಣೇಶ ವಿಗ್ರಹ ವೈಭವದ ಶೋಭಾಯಾತ್ರೆ ನಡೆಯಲಿದೆ. ಶೋಭಾಯಾತ್ರೆಯು ಪುರುಷರಕಟ್ಟೆಯಿಂದ ಹೊರಟು ಇಂದಿರಾನಗರ, ಕೂಡುರಸ್ತೆ ಮಾರ್ಗವಾಗಿ ಸಂಚರಿಸಿ ಕಲ್ಕಾರ್‌ನಲ್ಲಿ ಜಲಸ್ತಂಭನಗೊಳ್ಳುವ ಮೂಲಕ ಗಣೇಶೋತ್ಸವವು ಸಂಪನ್ನಗೊಳ್ಳಲಿದೆ ಎಂದು ಸಮಿತಿ ಅಧ್ಯಕ್ಷ ರವಿ ಮಾಯಂಗಲ, ಕಾರ್ಯದರ್ಶಿ ಸಂತೋಷ್ ಎಂ. ಮುಕ್ವೆ ಹಾಗೂ ಕೋಶಾಧಿಕಾರಿ ಕಾರ್ತಿಕ್ ಪೂಜಾರಿ ಇಂದಿರಾನಗರ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here