ನರೇಂದ್ರ ಪ.ಪೂ.ಕಾಲೇಜಿನಲ್ಲಿ ಗಣೇಶ ಚತುರ್ಥಿ ಮತ್ತು ರಾಷ್ಟ್ರೀಯ ಚಿಂತನೆಗಳು-ವಿಶೇಷ ಉಪನ್ಯಾಸ ಕಾರ‍್ಯಕ್ರಮ

0

ಪುತ್ತೂರು: ಆಧ್ಯಾತ್ಮಿಕ ಮಹತ್ವವನ್ನು ಹೊಂದಿರುವ ಹಬ್ಬಗಳಲ್ಲಿ ಗಣೇಶ ಚತುರ್ಥಿಯೂ ಒಂದಾಗಿದೆ. ಭಾಂದವ್ಯ ಬೆಸೆಯುವ ರಾಷ್ಟ್ರೀಯ ಹಬ್ಬ ಗಣೇಶ ಚತುರ್ಥಿ.ಬುದ್ಧಿವಂತಿಕೆಯ ಪ್ರತಿರೂಪ ಮತ್ತು ಅಡೆತಡೆಗಳನ್ನು ನಿವಾರಿಸುವ ಗಣೇಶನು ಭಕ್ತರಿಗೆ ಮಾರ್ಗದರ್ಶನವನ್ನು ನೀಡುತ್ತಾನೆ. ಗಣೇಶ ಚತುರ್ಥಿಯ 10 ದಿನಗಳ ನಂತರ ವಿಗ್ರಹವನ್ನು ನೀರಿನಲ್ಲಿ ಮುಳುಗಿಸುವ ಮೂಲಕ ನಮ್ಮಲ್ಲಿನ ಅಹಂಕಾರದ ವಿನಾಶವನ್ನು ಸೂಚಿಸುತ್ತದೆ. ಆಚರಣೆಗಳು ಮತ್ತು ಆರಾಧನಾ ಪದ್ಧತಿಗಳು ದೈವಿಕತೆಯೊಂದಿಗೆ ಆಳವಾದ ಸಂಪರ್ಕವನ್ನು ಬೆಳೆಸಲು ಸಹಾಯ ಮಾಡುತ್ತದೆ.ಏಕತೆ ಮತ್ತು ಸಾಮರಸ್ಯದ ಭಾವನೆಯನ್ನು ಬೆಳೆಸುತ್ತದೆ. ಗಣೇಶನ ಆಶೀರ್ವಾದವನ್ನು ಕೋರುವ ಮೂಲಕ, ಭಕ್ತರು ಆಂತರಿಕ ಮತ್ತು ಬಾಹ್ಯ ಸವಾಲುಗಳನ್ನು ಸುಲಭವಾಗಿ ಜಯಿಸುತ್ತಾರೆ. ಈ ದಿನ ಗಣಪತಿಯನ್ನು ಪೂಜಿಸುವುದರಿಂದ ಜ್ಞಾನ, ಬುದ್ಧಿವಂತಿಕೆ ವೃದ್ಧಿಯಾಗುತ್ತದೆ ಎನ್ನುವ ನಂಬಿಕೆಯಿದೆಎಂದು ಪುತ್ತೂರಿನ ವಿವೇಕಾನಂದ ವಿದ್ಯಾಸಂಸ್ಥೆಗಳ ಸಂಸ್ಕಾರ ಪರಿವೀಕ್ಷಣ ಪ್ರಮುಖ್ ಆದ ಮೀನಾಕ್ಷಿ ಭಗಿನಿ ಹೇಳಿದರು.


ನರೇಂದ್ರ ಪ.ಪೂ.ಕಾಲೇಜಿನಲ್ಲಿ ಸೆಪ್ಟೆಂಬರ್ 9ರಂದು ನಡೆದ ಗಣೇಶ ಚತುರ್ಥಿ ಮತ್ತು ರಾಷ್ಟ್ರೀಯ ಚಿಂತನೆಗಳು-ವಿಶೇಷ ಉಪನ್ಯಾಸ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು.


ಭಕ್ತಿ ಹಾಗೂ ಭಾವೈಕ್ಯತೆಯ ಹಿನ್ನೆಲೆಯಲ್ಲಿ ಬಾಲಗಂಗಾಧರ ತಿಲಕರ ಮುಂದಾಳತ್ವದಲ್ಲಿ ಹುಟ್ಟಿ ಬೆಳೆದ ಗಣೇಶ ಹಬ್ಬವು ಇಂದು ನಮ್ಮೆಲ್ಲರ ಅಚ್ಚುಮೆಚ್ಚಿನ ಹಬ್ಬ. ಚದುರಿ ಹೋಗಿದ್ದ ಅಂದಿನ ಸಮಾಜದಲ್ಲಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಜನರನ್ನು ಒಂದೇ ವೇದಿಕೆಯಡಿ ಏಕೀಕರಣಗೊಳಿಸಲು ತಿಲಕರು ಆಯ್ಕೆ ಮಾಡಿದ್ದೇ ಈ ಗಣೇಶ ಹಬ್ಬ. ತಿಲಕರ ಕರೆಗೆ ಜಾತಿ-ಮತ ಬೇಧವಿಲ್ಲದೆ ಬಹುಬೇಗನೆ ಜನರು ಸ್ಪಂದಿಸಿದರು. ದೇಶಾದ್ಯಂತ ಭಕ್ತಿಯ ಪ್ರವಾಹ ಹರಿಯುವುದರೊಂದಿಗೆ ಬ್ರಿಟಿಷರಿಗೆ ನಮ್ಮ ಏಕತೆಯ ಬಿಸಿಯನ್ನೂ ಮುಟ್ಟಿಸಿತು ಎಂದು ಹೇಳಿದರು.


ಗಣೇಶೋತ್ಸವಗಳ ಮೂಲಕ ಜನರನ್ನು ಒಂದುಗೂಡಿಸಿ ಬ್ರಿಟಿಷರ ದಾಸ್ಯದಿಂದ ಬಿಡುಗಡೆಗೊಳ್ಳಲು ಏಕತೆಯನ್ನು ಸಾಧಿಸುವ ಬಾಲಗಂಗಾಧರ್ ತಿಲಕ್ ಅವರ ಪ್ರಯತ್ನ ಧರ್ಮಜಾಗೃತಿಯ ಜತೆಗೆ ಜಾತಿ, ಧರ್ಮಗಳನ್ನು ಮೀರಿದ ದೇಶಭಕ್ತಿ, ಏಕತಾ ಶಕ್ತಿಗೆ ಮುನ್ನುಡಿ ಬರೆಯಿತು.ಎಲ್ಲ ವರ್ಗದ ಜನರ ನಡುವೆ ಐಕ್ಯತೆ ಮೂಡಿಸುವ ಉದ್ದೇಶ ಸಾರ್ಥಕವಾಯಿತು. ದೇಶ-ವಿದೇಶಗಳಲ್ಲೂ ಜನಪ್ರಿಯಗೊಂಡಿರುವ ಗಣೇಶ ಚತುರ್ಥಿ ಇಂದು ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ತುಂಬಾ ಮಹತ್ವವನ್ನು ಪಡೆದುಕೊಂಡಿದೆ ಎಂದು ಹೇಳಿದರು.


ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶ್ಯಾನಭಾಗ್ ಉಪಸ್ಥಿತರಿದ್ದರು. ಕಾರ‍್ಯಕ್ರಮದಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾದ ಸಿಂಚನಾ ಕೆ.ಎಸ್ ಇವರು ಸ್ವಾಗತಿಸಿ,ವಂದಿಸಿದರು.

LEAVE A REPLY

Please enter your comment!
Please enter your name here