ಪುತ್ತೂರು: ಹಿಂದೂ ಸಂಘಟನೆ ಮತ್ತು ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಅರುಣ್ ಕುಮಾರ್ ಪುತ್ತಿಲ ಅವರ ವಿರುದ್ಧ ಅತ್ಯಾಚಾರ ಆರೋಪದಡಿ ದಾಖಲಾಗಿರುವ ಎಫ್.ಐ.ಆರ್. ಮತ್ತು ನ್ಯಾಯಾಲಯದ ಮುಂದಿನ ತನಿಖಾ ಪ್ರಕ್ರಿಯೆಗೆ ಸೆ.10ರಂದು ಹೈಕೋರ್ಟ್ ತಡೆಯಾಜ್ಞೆ ನೀಡಿದ ಬಳಿಕ ಅವರು ಸೆ.11ರ ಸಮಯ ಬೆ. 9.12ಕ್ಕೆ ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕಾರ್ಯಕರ್ತರ ಜೊತೆಗೂಡಿ ಅವರು ಮಹಾಲಿಂಗೇಶ್ವರ ದೇವರಿಗೆ ಮಲ್ಲಿಗೆ ಸಮರ್ಪಣೆ ಮಾಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ದೇವಳದ ಪ್ರಧಾನ ಅರ್ಚಕ ವೆ. ವಸಂತ ಕೆದಿಲಾಯ ಅವರು ಪ್ರಾರ್ಥನೆ ಸಲ್ಲಿಸಿದರು.ಯಾವುದೇ ಅಪವಾದವಿದ್ದರೂ ಸತ್ಯಕ್ಕೆ ನ್ಯಾಯ ಸಿಗಬೇಕು, ಅರುಣ್ ಕುಮಾರ್ ಪುತ್ತಿಲ ಅವರು ಮಾಡತಕ್ಕಂತಹ ಪ್ರತಿಯೋಂದು ಕಾರ್ಯಕ್ಕೂ ದೇವರ ಅನುಗ್ರಹ ಸದಾ ಸಿಗಲಿ ಎಂದು ಪ್ರಾರ್ಥನೆ ನೆರವೇರಿಸಿದರು.
ಸತ್ಯಕ್ಕೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ:ಅರುಣ್ ಕುಮಾರ್ ಪುತ್ತಿಲ
ಈ ಹಿಂದೆಯೂ ನನ್ನ ವಿರುದ್ಧ ಮಾಡಿದ ಷಡ್ಯಂತ್ರಗಳ ಬಗ್ಗೆ ಪುತ್ತೂರಿನ ಜನತೆಗೆ, ಜಿಲ್ಲೆಗೆ ತಿಳಿದಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಕಾಣದ ಕೈಗಳು ವ್ಯವಸ್ಥಿತವಾದ ಪಿತೂರಿಯಿಂದ ಈ ಕಾರ್ಯವನ್ನು ಮಾಡುತ್ತಾ ರಾಜಕೀಯವಾಗಿ ನನ್ನನ್ನು ಮುಗಿಸುವ ಹುನ್ನಾರ ಮಾಡಿದ್ದಾರೆ. ಆದರೆ ಮಹಾಲಿಂಗೇಶ್ವರ ದೇವರು, ಉಳ್ಳಾಲ್ತಿ ಅಮ್ಮನವರಲ್ಲಿ ನಂಬಿಕೆಯ ಆಧಾರದಲ್ಲಿ ಬದುಕಿದ್ದೇನೆ,ಯಾವತ್ತೂ ಕೂಡ ಸತ್ಯಕ್ಕೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ನನ್ನ ಜೊತೆಗಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ಶ್ರೀ ಕೃಷ್ಣ ಉಪಾಧ್ಯಾಯ, ಸಹಿತ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.