‘ನಾವೆಲ್ಲಾ ಅರ್ಜುನ ಸಂತಾನದವರು..ನಮ್ಮನ್ನು ಎಚ್ಚರಿಸಲು ಪ್ರತೀಸಲ ಕೃಷ್ಣನೇ ಬರಬೇಕು..!ʼ- ಚಕ್ರವರ್ತಿ ಸೂಲಿಬೆಲೆ

0

ವಿವೇಕಾನಂದ ಪಿ.ಯು. ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ʼಬಾಂಗ್ಲಾ ವಿದ್ಯಮಾನಗಳು ಮತ್ತು ಭಾರತʼ ವಿಷಯದಲ್ಲಿ ಸಂವಾದ ಕಾರ್ಯಕ್ರಮ

ಪುತ್ತೂರು: ʼನಾವು ಹೇಗೆಂದರೆ, ನಮ್ಮೊಳಗೊಬ್ಬ ಅರ್ಜುನನಿದ್ದಾನೆ. ಸವಾಲುಗಳನ್ನು ಎದುರಿಸುವಂತಹ ಸಂದರ್ಭಗಳಲ್ಲೆಲ್ಲಾ ನಮ್ಮೊಳಗಿರುವ ಆ ಅರ್ಜುನ ವೈರಾಗ್ಯವನ್ನು ತಾಳುತ್ತಾನೆ. ಅಂದು ಕುರುಕ್ಷೇತ್ರ ರಣಾಂಗಣದಲ್ಲಿ ವೈರಾಗ್ಯ ತಾಳಿ ನಿಂತಿದ್ದ ಅರ್ಜುನನ್ನು ಶ್ರೀಕೃಷ್ಣ ಜಾಗೃತಗೊಳಿಸಿದಂತೆ, ಇವತ್ತು ನಮ್ಮ ಸುತ್ತ ನಡೆಯುತ್ತಿರುವ ಅಸಹಜ ವಿದ್ಯಮಾನಗಳನ್ನು ಎದುರಿಸುವ ಅಂತಃಶಕ್ತಿಯನ್ನು ಭಾರತೀಯರಾದ ನಮಗೆ ತುಂಬಲು ಶ್ರೀಕೃಷ್ಣನಂತಹ ವ್ಯಕ್ತಿತ್ವದ ಅಗತ್ಯವಿದ್ದು, ದೇಶ ರಕ್ಷಣೆಯಲ್ಲಿ ನಾವೆಲ್ಲರೂ ಇಂದು ಅರ್ಜುನ ಮತ್ತು ಕೃಷ್ಣನ ಪಾತ್ರವನ್ನು ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ..ʼ ಎಂದು ಖ್ಯಾತ ವಾಗ್ಮಿ ಹಾಗೂ ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarty Sulibele) ಅವರು ಅಭಿಪ್ರಾಯಪಟ್ಟರು.

ಅವರು, ಇಲ್ಲಿನ ವಿವೇಕಾನಂದ ಪದವಿಪೂರ್ವ ವಿದ್ಯಾಲಯದ (Vivekananda Pre University College) ವೈದೇಹಿ ಸಭಾಂಗಣದಲ್ಲಿ ಪುತ್ತೂರು ಸಿಟಿಝನ್‌ ಫಾರಂ ವತಿಯಿಂದ ʼಬಾಂಗ್ಲಾ ವಿದ್ಯಮಾನಗಳು ಮತ್ತು ಭಾರತʼ ಎಂಬ ವಿಷಯದ ಕುರಿತಾಗಿ ಸೆ.11ರಂದು ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಪಾಕಿಸ್ತಾನದ ಭಾಗವಾಗಿದ್ದು, ಪೂರ್ವ ಪಾಕಿಸ್ಥಾನವೆಂದು ಗುರುತಿಸಿಕೊಂಡಿದ್ದ ಹಾಗೂ 1971ರ ಯುದ್ಧದ ಬಳಿಕ ಭಾರತದ ಸಹಕಾರದಿಂದ ಬಾಂಗ್ಲಾ ಎಂಬ ಹೊಸ ದೇಶವಾಗಿ ಉದಯವಾದಲ್ಲಿಂದ ಇತ್ತೀಚೆಗಷ್ಟೆ ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ (Sheikh Hasina) ಅವರ ಪದಚ್ಯುತಿಗಾಗಿ ನಡೆದ ಆಂತರಿಕ ದಂಗೆಯವರೆಗೆ ಮತ್ತು ಆ ಬಳಿಕ ನಡೆದ ರಾಜಕೀಯ ವಿದ್ಯಮಾನಗಳು ಮತ್ತು ಇದರ ಹಿಂದಿರುವ ಶಂಕಿತ ವಿದೇಶಿ ಶಕ್ತಿಗಳ ಕೈವಾಡದ ಕುರಿತಾಗಿ ಸೂಲಿಬೆಲೆಯವರು ಈ ಸಂವಾದದಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟರು.

ಇಷ್ಟು ಮಾತ್ರವಲ್ಲದೇ ಅಮೆರಿಕಾ ನೇತೃತ್ವದಲ್ಲಿ, ಭಾರತವೂ ಸೇರಿದಂತೆ ತನ್ನ ತಾಳಕ್ಕೆ ಕುಣಿಯದ ವಿಶ್ವದ ಕೆಲ ರಾಷ್ಟ್ರಗಳಲ್ಲಿರುವ ಸರಕಾರಗಳನ್ನು ಅಸ್ಥಿರಗೊಳಿಸಲು ನಡೆಯುತ್ತಿರುವ ರಾಜಕೀಯ ಒಳಸಂಚು ಮತ್ತು ಇದಕ್ಕೆ ಹರಿದುಬರುತ್ತಿರುವ ವಿದೇಶಿ ಫಂಡ್‌ ಗಳ ಬಗೆಗಿನ ಮಾಹಿತಿಯನ್ನು ಸೂಲಿಬೆಲೆಯವರು ಸವಿವರವಾಗಿ ಬಿಚ್ಚಿಟ್ಟರು.

ಅತಿಥಿ ಗಣ್ಯರು ವೇದಿಕೆಯಲ್ಲಿದ್ದ ಭಾರತ ಮಾತೆ ಮತ್ತು ಸ್ವಾಮಿ ವಿವೇಕಾನಂದರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಈ ಸಂವಾದ ಕಾರ್ಯಕ್ರಮ ಪ್ರಾರಂಭಗೊಂಡಿತು.

ಖ್ಯಾತ ಉದ್ಯಮಿ ಮತ್ತು ಜಿ.ಎಲ್.‌ ಆಚಾರ್ಯ ಜ್ಯುವೆಲ್ಲರ್ಸ್‌ನ ಲಕ್ಷ್ಮೀಕಾಂತ್‌ ಬಿ. ಆಚಾರ್ಯ ಅವರು ಸಂವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವಿವೇಕಾನಂದ ಇನ್ಸ್ಟಿಟ್ಯೂಟ್‌ ಆಫ್‌ ಫಾರ್ಮಾಸಿಟಿಕಲ್‌ ಸೈನ್ಸಸ್‌ ನ ನಿರ್ದೇಶಕಿಯಾಗಿರುವ ಡಾ| ಅನಿಲಾ ದೀಪಕ್‌ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿದರು ಹಾಗೂ ಸಂವಾದ ಕಾರ್ಯಕ್ರಮದ ಅತಿಥಿ ಗಣ್ಯರನ್ನು ಸ್ವಾಗತಿಸಿ, ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು. ಈ ಸಂವಾದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಆಹ್ವಾನಿತರು ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಚಕ್ರವರ್ತಿ ಸೂಲಿಬೆಲೆಯವರೊಂದಿಗೆ ಸಂವಾದ ಕಾರ್ಯಕ್ರಮವೂ ನಡೆಯಿತು.

LEAVE A REPLY

Please enter your comment!
Please enter your name here