ಶುದ್ಧೀಕರಣಗೊಂಡ ಜಲಸಿರಿಯ ನೀರು ಬೇಕೇ ಬೇಕು-ಪ್ರತಿಭಟನೆಗೂ ಸಿದ್ಧ: ಪಂಪ್‌ಹೌಸ್‌ಗೆ ಬೀಗ ಜಡಿಯಲೂ ಬದ್ಧ-ಕುಡಿಯುವ ನೀರಿನ ಸಭೆಯಲ್ಲಿ ನೆಕ್ಕಿಲಾಡಿ ಗ್ರಾಮಸ್ಥರ ನಿರ್ಧಾರ

0

ಉಪ್ಪಿನಂಗಡಿ: ಗ್ರಾಮದ ಜನರಿಗೆ ಕುಡಿಯಲು ಶುದ್ಧವಾದ ನೀರು ಬೇಕೇ? ಕುಡಿಯಲು ಯೋಗ್ಯವಲ್ಲದ ನೀರು ಬೇಕೆ ಎಂಬುದನ್ನು ನಿರ್ಧಾರ ಮಾಡುವುದು ನೀರು ಬಳಕೆದಾರರರೇ ಹೊರತು ಇಲ್ಲಿನ ವಾಸ್ತವತೆ ಅರಿವಿಲ್ಲದ ಅಧಿಕಾರಿಗಳಲ್ಲ. 34 ನೆಕ್ಕಿಲಾಡಿ ಗ್ರಾಮದಲ್ಲಿ ಈಗ ಪೂರೈಕೆಯಾಗುತ್ತಿರುವ ಕುಡಿಯುವ ನೀರು ಕುಡಿಯಲು ಯೋಗ್ಯವಲ್ಲ ಎಂಬುದು ಈಗಾಗಲೇ ಪ್ರಯೋಗಾಲಯದ ವರದಿ ತಿಳಿಸಿದೆ. ಆದ್ದರಿಂದ ನಮ್ಮ ಗ್ರಾಮದಿಂದ ಪುತ್ತೂರು ನಗರಸಭೆಗೆ ಪೂರೈಕೆಯಾಗುವ ಶುದ್ಧ ಕುಡಿಯುವ ನೀರನ್ನು ನಮ್ಮ ಗ್ರಾಮಕ್ಕೂ ನೀಡಬೇಕು. ಇಲ್ಲದಿದ್ದಲ್ಲಿ ನೆಕ್ಕಿಲಾಡಿಯಲ್ಲಿರುವ ಪುತ್ತೂರು ನಗರ ಸಭೆಯ ಪಂಪ್ ಹೌಸ್‌ಗೆ ಬೀಗ ಜಡಿದು ಪ್ರತಿಭಟಿಸುವುದಾಗಿ 34 ನೆಕ್ಕಿಲಾಡಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.


34 ನೆಕ್ಕಿಲಾಡಿ ಗ್ರಾ.ಪಂ.ನಲ್ಲಿ ಸಭಾಂಗಣದಲ್ಲಿ ಗ್ರಾ.ಪಂ. ಅಧ್ಯಕ್ಷೆ ಸುಜಾತ ರೈ ಅವರ ಅಧ್ಯಕ್ಷತೆಯಲ್ಲಿ ಸೆ.19ರಂದು ನಡೆದ ಪಂಪ್ ಹೌಸ್ ರಸ್ತೆ ದುರಸ್ತಿ ಹಾಗೂ ಜಲಸಿರಿ ಯೋಜನೆಯಡಿ ನೆಕ್ಕಿಲಾಡಿ ಗ್ರಾಮಕ್ಕೆ ಕುಡಿಯುವ ನೀರು ಒದಗಿಸುವ ಕುರಿತು ನಡೆದ ಗ್ರಾಮಸ್ಥರ ಮತ್ತು ನಗರ ಸಭೆ ಅಧಿಕಾರಿಗಳ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥ ಅಸ್ಕರ್ ಅಲಿ, ಪುತ್ತೂರು ನಗರಸಭೆಗೆ 34 ನೆಕ್ಕಿಲಾಡಿಯಿಂದ ಶುದ್ಧೀಕರಣಗೊಂಡು ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಈ ನೀರನ್ನು 34 ನೆಕ್ಕಿಲಾಡಿ ಗ್ರಾಮಕ್ಕೂ ನೀಡಬೇಕು ಎಂದು ಇಲ್ಲಿನ ಮುಹಮ್ಮದ್ ರಫೀಕ್ ಎಂಬವರು ಜನತಾ ನ್ಯಾಯಾಲಯದ ಮೆಟ್ಟಿಲೇರಿದ್ದು, ಅವರ ಪರವಾಗಿ ತೀರ್ಪು ಬಂದಿದೆ. ಇಲ್ಲಿಗೆ ಕುಡಿಯುವ ನೀರು ಪೂರೈಸುತ್ತೇವೆ ಎಂದು ನಗರ ಸಭೆಯೂ ಅಫಿದಾವಿತ್ ನೀಡಿದೆ. ಆದರೆ ಬಳಿಕ ನಗರಸಭೆಯವರು ಜಲಸಿರಿ ಯೋಜನೆ ಅನುಷ್ಠಾನವಾಗುವಾಗ ಇಲ್ಲಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುವುದೆಂದು ತಿಳಿಸಿದ್ದರು. ಆದರೆ ಅದು ಅನುಷ್ಠಾನಗೊಂಡರೂ ನಮ್ಮ ಗ್ರಾಮಕ್ಕೆ ನಗರ ಸಭೆಗೆ ಪೂರೈಕೆ ಮಾಡುವ ಕುಡಿಯುವ ನೀರನ್ನು ನೀಡಿಲ್ಲ. ಈಗ ಇಲ್ಲಿನ ಕೊಳವೆ ಬಾವಿಗಳ ನೀರು ಕುಡಿಯಲು ಯೋಗ್ಯವಲ್ಲವೆಂದು ಪ್ರಯೋಗಾಲಯದ ವರದಿ ತಿಳಿಸಿದೆ. ಆದ್ದರಿಂದ ನಮ್ಮ ಹಕ್ಕಾದ ಕುಡಿಯುವ ನೀರನ್ನು ನಗರ ಸಭೆಯು ನಮ್ಮ ಗ್ರಾಮಕ್ಕೆ ಪೂರೈಕೆ ಮಾಡಬೇಕು ಎಂದರು.

ಅದಕ್ಕುತ್ತರಿಸಿದ ಪುತ್ತೂರು ನಗರಸಭೆಯ ಜಲಸಿರಿ ಯೋಜನೆಯ ಎಡಬ್ಲ್ಯೂಇ ಮಾದೇಶ್ ಅವರು, ಬಹುಗ್ರಾಮ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಸಭೆ ನಡೆದು, ನೆಕ್ಕಿಲಾಡಿ ಗ್ರಾಮಕ್ಕೆ ಡಿಬಿಒಟಿ ಆಧಾರಿತ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಸೌಲಭ್ಯ ಇರುವುದರಿಂದ ಪುತ್ತೂರು ನಗರದಲ್ಲಿ ಅನುಷ್ಠಾನವಾಗುತ್ತಿರುವ ಜಲಸಿರಿ ಯೋಜನೆಯಡಿ ನೀರು ಪೂರೈಕೆಯ ಅವಶ್ಯಕತೆ ಇರುವುದಿಲ್ಲ ಎಂಬ ಮಾಹಿತಿಯನ್ನಾಧರಿಸಿ, ಕೆಯುಐಡಿಎಫ್‌ಸಿ ಇಲಾಖೆಯಲ್ಲಿ ಇದನ್ನು ಪರಿಗಣಿಸಲು ಅವಶ್ಯವಿರುವುದಿಲ್ಲ ಎಂದು ನಿರ್ಧಾರ ತಳೆಯಲಾಗಿದ್ದು, ಈ ಬಗ್ಗೆ ನಗರ ಸಭೆಗೂ ಸ್ಪಷ್ಟೀಕರಣ ನೀಡಲಾಗಿದೆ. ಹಾಗಾಗಿ ಜಲಸಿರಿ ಯೋಜನೆಯಡಿ ನೀರು ನೀಡಿಲ್ಲ ಎಂದರು.


ಅದಕ್ಕೆ ಗ್ರಾಮಸ್ಥೆ ಅನಿ ಮಿನೇಜಸ್ ಅವರು ಇದು ನ್ಯಾಯಾಂಗ ನಿಂದನೆಯಲ್ಲವೇ? ನ್ಯಾಯಾಲಯದ ಆದೇಶವನ್ನು ಕಡೆಗಣಿಸಿದ್ದು ಸರಿಯೇ ಎಂದು ಪ್ರಶ್ನಿಸಿದರು. ಗ್ರಾಮಸ್ಥ ರೂಪೇಶ್ ಆಕ್ರೋಶಭರಿತರಾಗಿ ಮಾತನಾಡಿ, ಇಲ್ಲಿನ ವಾಸ್ತವತೆ ಅರಿಯದೇ ಎಲ್ಲೋ ಕುಳಿತು ತೀರ್ಮಾನ ತೆಗೆದುಕೊಳ್ಳಲು ಅಧಿಕಾರಿಗಳು ಯಾರು? ನಮ್ಮ ಗ್ರಾಮಕ್ಕೆ ಕುಡಿಯಲು ಯೋಗ್ಯವಾದ ನೀರು ಬೇಕೇ? ಕುಡಿಯಲು ಯೋಗ್ಯವಲ್ಲದ ನೀರು ಬೇಕೆ ಎಂದು ನಿರ್ಧಾರ ಮಾಡುವುದು ಇಲ್ಲಿನ ಕುಡಿಯುವ ನೀರು ಬಳಕೆದಾರರೇ ಹೊರತು ಇಲ್ಲಿನ ಬಗ್ಗೆ ಏನೂ ತಿಳಿಯದ ಅಧಿಕಾರಿಗಳಲ್ಲ ಎಂದರು. ಆಗ ಅಸ್ಕರ್ ಅಲಿ ಮಾತನಾಡಿ, 2005ರಿಂದಲೇ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪ್ರಸ್ತಾಪ ಇದೆ. ಆದರೆ ಈಗ ಕಾಮಗಾರಿಗಳು ಆರಂಭವಾಗಿದ್ದರೂ, ಅದು ಪೂರ್ಣಗೊಂಡು ಇಲ್ಲಿಗೆ ತಲುಪುವಾಗ 5 ವರ್ಷವಾದರೂ ಬೇಕಾಗಬಹುದು. ಆದ್ದರಿಂದ ನಾವು ಅಲ್ಲಿಯವರೆಗೆ ಕುಡಿಯಲು ಯೋಗ್ಯವಲ್ಲದ ನೀರನ್ನು ಕುಡಿಯಬೇಕೇ ಎಂದರು.

ಅಬ್ದುರ್ರಹ್ಮಾನ್ ಯುನಿಕ್ ಮಾತನಾಡಿ, ಬಹುಗ್ರಾಮ ಕುಡಿಯುವ ನೀರಿನದ್ದು ಮತ್ತಿನ ವಿಷಯ. ಆದರೆ ಈಗ ನಮ್ಮ ಗ್ರಾಮಕ್ಕೆ ನಗರಸಭೆಗೆ ಪೂರೈಕೆಯಾಗುವ ಜಲಸಿರಿಯ ನೀರು ಬೇಕೇ ಬೇಕು ಎಂದು ಪಟ್ಟು ಹಿಡಿದರು. ಗ್ರಾಮಸ್ಥರಾದ ಮುಹಮ್ಮದ್ ರಫೀಕ್, ಅಝೀಝ್ ಪಿ.ಟಿ., ಕಲಂದರ್ ಶಾಫಿ, ಶಬೀರ್ ಅಹಮ್ಮದ್, ಝಕಾರಿಯಾ ಕೊಡಿಪ್ಪಾಡಿ ಸೇರಿದಂತೆ ಗ್ರಾಮಸ್ಥರು ಇದನ್ನು ಬೆಂಬಲಿಸಿ ಮಾತನಾಡಿದರು. ಆಗ ಪಿಡಿಒ ಸತೀಶ್ ಬಂಗೇರ ಅವರು ಮಾತನಾಡಿ, ಬೊಳಂತಿಲದಲ್ಲಿ ಎರಡು ಕೊಳವೆ ಬಾವಿಗಳ ನೀರು ಕಬ್ಬಿಣದಾಂಶ ಜಾಸ್ತಿ ಇರುವ ಕಾರಣ ಕುಡಿಯಲು ಯೋಗ್ಯವಲ್ಲ ಎಂದು ವರದಿ ಬಂದಿದೆ. ಅದನ್ನು ನಾವು ಈಗಾಗಲೇ ಮಂಗಳೂರಿನಿಂದ ತಂತ್ರಜ್ಞರನ್ನು ಕರೆಸಿ ಶುದ್ದೀಕರಣ ಮಾಡಿದ್ದೇವೆ. ಇನ್ನು 15 ವರ್ಷಗಳ ಕಾಲ ತೊಂದರೆ ಇಲ್ಲ ಎಂದು ಅವರು ತಿಳಿಸಿದ್ದಾರೆ ಎಂದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಇಲ್ಲಿನ ಎರಡು ಕೊಳವೆ ಬಾವಿಗಳ ನೀರನ್ನು ಮಾತ್ರ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಬಾಕಿಯದ್ದನ್ನು ಕಳುಹಿಸಿಲ್ಲ. ಹಾಗಿರುವಾಗ ಆ ಕೊಳವೆ ಬಾವಿಗಳ ನೀರು ಸರಿ ಇದೆಯೆಂದು ಹೇಗೆ ಹೇಳುತ್ತೀರಿ. 2023-24ನೇ ಸಾಲಿನ 15ನೇ ಹಣಕಾಸು ಕಾಮಗಾರಿಯಡಿ ಕುಡಿಯುವ ನೀರಿಗಾಗಿ 10.50 ಲಕ್ಷ ರೂ.ವನ್ನು ಇಡಲಾಗಿದೆ. ಜಲಸಿರಿ ಯೋಜನೆಯ ನೀರು ಗ್ರಾಮಕ್ಕೆ ಪೂರೈಕೆಯಾದಾಗ ಇಷ್ಟು ಖರ್ಚು ಬರುವುದಿಲ್ಲ. ಇದರಲ್ಲಿ ಪಂಚಾಯತ್‌ಗೂ ಕೂಡಾ ಹಣ ಉಳಿಕೆಯಾಗಲಿದೆ. ಗ್ರಾಮಸ್ಥರಿಗೂ ಶುದ್ಧ ಕುಡಿಯುವ ನೀರು ಸಿಗಲಿದೆ. ಹೀಗಿರುವಾಗ ನಮಗೆ ಜಲಸಿರಿಯ ನೀರೇ ಬೇಕು. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನವಾದ ಬಳಿಕ ಆಗ ಆ ಬಗ್ಗೆ ಯೋಚಿಸೋಣ ಎಂದರು. ಆಗ ರೂಪೇಶ್ ರೈ ಮಾತನಾಡಿ, ನಮ್ಮ ಗ್ರಾಮದಿಂದ ಪುತ್ತೂರು ನಗರಸಭೆಗೆ ಪೂರೈಕೆಯಾಗುವ ಶುದ್ಧ ಕುಡಿಯುವ ನೀರನ್ನು ನಮ್ಮ ಗ್ರಾಮಕ್ಕೂ ನೀಡಬೇಕು. ಇಲ್ಲದಿದ್ದಲ್ಲಿ ನೆಕ್ಕಿಲಾಡಿಯಲ್ಲಿರುವ ಪುತ್ತೂರು ನಗರ ಸಭೆಯ ಪಂಪ್ ಹೌಸ್‌ಗೆ ಬೀಗ ಜಡಿದು ಪ್ರತಿಭಟಿಸೋಣ ಎಂದು ಎಚ್ಚರಿಸಿದರು. ಇದಕ್ಕೆ ಅಲ್ಲಿದ್ದ ಗ್ರಾಮಸ್ಥರು ಒಕ್ಕೊರಲ ಬೆಂಬಲ ಸೂಚಿಸಿದರು.


ಜಲಸಿರಿ ಯೋಜನೆಯ ಎಡಬ್ಲ್ಯೂಇ ಮಾದೇಶ್ ಮಾತನಾಡಿ, ನಗರ ಸಭೆ ಜಲಸಿರಿ ಯೋಜನೆಯ ನೀರು ನೆಕ್ಕಿಲಾಡಿಗೆ ಕೊಡುವುದಿಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಅದರೆ ಸರಕಾರದಿಂದಲೇ ನೀರಿನ ಅವಶ್ಯಕತೆ ಇರುವುದಿಲ್ಲ ಎಂದು ಪತ್ರ ಬಂದಿದೆ. ಅವರು ಕೊಡಿ ಎಂದು ಹೇಳಿದರೆ ನಾವು ಕೊಡಲು ಸಿದ್ಧ ಎಂದರು. ಆಗ ಅಸ್ಕರ್ ಅಲಿ ಮಾತನಾಡಿ, ಈ ಬಗ್ಗೆ ಗ್ರಾಮಸ್ಥರು ನಿರ್ಣಯ ಮಾಡಿ ಸರಕಾರಕ್ಕೆ ಕಳಿಸೋಣ ಎಂದರು. ಅದಕ್ಕೆ ಗ್ರಾಮಸ್ಥರು ಸಮ್ಮತಿ ಸೂಚಿಸಿದರು.


34 ನೆಕ್ಕಿಲಾಡಿಯ ಯುನಿಕ್ ಕಂಪೌಂಡ್‌ನಿಂದ ನಗರ ಸಭೆಯ ಪಂಪ್‌ಹೌಸ್‌ಗೆ ಹೋಗುವ ರಸ್ತೆಯ ಕಾಮಗಾರಿಯನ್ನು ನಗರಸಭೆಯು ಕಳೆದ ಒಂದು ವರ್ಷದ ಹಿಂದೆ ಮಾಡಿದ್ದು, ಆದರೆ ಅದು ಕಳಪೆ ಕಾಮಗಾರಿಯಾಗಿ. ಕಾಮಗಾರಿ ಮಾಡಿದ ಮೂರೇ ತಿಂಗಳಲ್ಲಿ ರಸ್ತೆ ತೀರಾ ಹದಗೆಟ್ಟು ಹೋಗಿದ್ದು, ಅಲ್ಲಲ್ಲಿ ಗುಂಡಿಗಳು ಬಿದ್ದು ಸಂಚಾರಕ್ಕೆ ತೊಂದರೆಯಾಗಿದೆ ಎಂದರು. ಎಡಬ್ಲ್ಯೂಇ ಮಾದೇಶ್ ಮಾತನಾಡಿ ನಾವು ಪೈಪ್‌ಲೈನ್‌ಗೆ ಕಟ್ ಮಾಡಿದ ಜಾಗವನ್ನಷ್ಟೇ ದುರಸ್ತಿ ಮಾಡಲು ನಮಗೆ ಅವಕಾಶವಿರುವುದು. ಆದರೂ ಇಲ್ಲಿ ನಾವು ಇಡೀ ರಸ್ತೆಗೆ ಡಾಮರು ಕಾಮಗಾರಿ ಮಾಡಿದ್ದೇವೆ ಎಂದರು. ಅದಕ್ಕೆ ಕಲಂದರ್ ಶಾಫಿ ಮಾತನಾಡಿ, ನೀವು ಅಲ್ಲಿ ಇಡೀ ರಸ್ತೆಯನ್ನೇ ಕಟ್ ಮಾಡಿದ್ದೀರಿ ಎಂದರು. ಝಕಾರಿಯಾ ಕೊಡಿಪ್ಪಾಡಿ ಮಾತನಾಡಿ, ರಸ್ತೆ ಮಧ್ಯೆಯೇ ಅಲ್ಲಿ ನೀರಿನ ಛೇಂಬರ್ ಮಾಡಲಾಗಿದೆ ಎಂದು ದೂರಿದರು. ಅಸ್ಕರ್ ಅಲಿ ಮಾತನಾಡಿ ಆ ರಸ್ತೆ ನಿಮ್ಮ ವಶಕ್ಕೆ ಕೊಡಲಾಗಿದೆ. ಆದ್ದರಿಂದ ಅದರ ಕಾಮಗಾರಿಯ ಹೊಣೆ ನಗರಸಭೆಯದ್ದೇ. ಅಲ್ಲಿ ಸುಮಾರು ೨೨೦ ಮನೆಗಳಿವೆ ಅವರಿಗೆ ಸಮಸ್ಯೆಯಾಗಿದೆ ಎಂದರು. ಅದಕ್ಕೆ ಮಾದೇಶ್ ಅವರು ಈಗ ಮಳೆಗಾಲ ಅದು ಮುಗಿದ ಬಳಿಕ ಕಾಮಗಾರಿ ನಡೆಸೋಣ ಎಂದರು. ಆಗ ಅಬ್ದುರ್ರಹ್ಮಾನ್ ಯುನಿಕ್ ಮಾತನಾಡಿ, ಅಲ್ಲಿನ ಹೊಂಡದಲ್ಲಿ ಲಾರಿಯೊಂದು ಸಿಲುಕಿಕೊಂಡಿತ್ತು. ಈ ಬಗ್ಗೆ ಎಸಿಯವರ ಗಮನಕ್ಕೆ ತಂದಾಗ ಮಳೆಗಾಲದ ಸಮಯದಲ್ಲೇ ಆ ಹೊಂಡವನ್ನು ಮುಚ್ಚಿದ್ದೀರಿ. ಆದರೆ ಬೇರೆ ಕಡೆ ಹೊಂಡ ಮುಚ್ಚಲು ಮಳೆಗಾಲದ ಕಾರಣ ಯಾಕೆ ಎಂದು ಪ್ರಶ್ನಿಸಿದರಲ್ಲದೆ, ಈಗಾಗಲೇ ಮೂರು ದ್ವಿಚಕ್ರ ವಾಹನಗಳು ರಸ್ತೆ ಗುಂಡಿಗಳಿಂದ ಅಲ್ಲಿ ಅಪಘಾತವಾಗಿವೆ. ಅದರ ಹೊಣೆ ನೀವು ವಹಿಸುತ್ತೀರಾ ಎಂದರು. ಅನಿ ಮಿನೇಜಸ್ ಮಾತನಾಡಿ, ಆ ರಸ್ತೆಯು ಮಳೆಗಾಲದ ಮೊದಲೇ ಹಾಳಾಗಿದೆ. ಆದರೂ ಅದನ್ನು ಸರಿಪಡಿಸುವ ಗೋಜಿಗೆ ನೀವು ಹೋಗಿಲ್ಲ. ತಕ್ಷಣಕ್ಕೆ ಅಲ್ಲಿನ ಹೊಂಡ ಗುಂಡಿಗಳನ್ನು ಮುಚ್ಚುವ ಕೆಲಸವಾಗಬೇಕು. ಮತ್ತೆ ಮಳೆಗಾಲದ ಮುಗಿದ ಬಳಿಕ ಆ ರಸ್ತೆಗೆ ಮರು ಡಾಮರೀಕರಣ ಆಗಬೇಕು ಎಂದರು. ಅಲ್ಲಿದ್ದ ಗ್ರಾಮಸ್ಥರೆಲ್ಲಾ ಇದಕ್ಕೆ ಧ್ವನಿಗೂಡಿಸಿದರಲ್ಲದೆ, ಮೂರು ದಿನಗಳೊಳಗೆ ಆ ರಸ್ತೆಯ ಗುಂಡಿಗಳನ್ನು ಮುಚ್ಚುವ ಕೆಲಸವಾಗಬೇಕು. ಮಳೆಗಾಲ ಮುಗಿದ ಕೂಡಲೇ ಅದನ್ನು ಮರುಡಾಮರೀಕರಣ ಮಾಡಬೇಕು ಎಂದು ನಿರ್ಣಯ ಕೈಗೊಂಡರು. ನಗರ ಸಭೆಯ ಅಧಿಕಾರಿಗಳೂ ಅದಕ್ಕೆ ಸಮ್ಮತಿ ಸೂಚಿಸಿದರು.


ಕಳೆದ ಬೇಸಿಗೆಯಲ್ಲಿ ಇಲ್ಲಿನ ಬೀತಲಪ್ಪು ಪರಿಸರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದಾಗ ನಾವು ಇಲ್ಲಿ ರಾಧಾಕೃಷ್ಣ ನಾಯ್ಕ್ ಅವರು ಉಚಿತವಾಗಿ ಎರಡು ಟ್ಯಾಂಕ್ ನೀರನ್ನು ನೀಡಿ ಮಾನವೀಯತೆಯನ್ನು ಮೆರೆದಿದ್ದಾರೆ. ಬಳಿಕ ಗ್ರಾ.ಪಂ. ಮೂರು ಟ್ಯಾಂಕರ್ ನೀರು ಈ ಪರಿಸರಕ್ಕೆ ಪೂರೈಸಿದ್ದು, ಅದಕ್ಕೆ ಬಿಲ್ ಮಾಡಲಾಗಿದೆ ಇದು ನೈಜ ವಿಚಾರ. ಆದರೆ ಉಚಿತವಾಗಿ ನೀರು ಕೊಟ್ಟಿರುವುದನ್ನು ಮರೆಮಾಚಿ ಗ್ರಾ.ಪಂ.ನವರೇ ಕೆಲವರು ಈಗ ಬೀತಲಪ್ಪು ಪರಿಸರದವರಲ್ಲಿ ಇಲ್ಲಿಗೆ ಉಚಿತವಾಗಿ ನೀರು ನೀಡಿಲ್ಲ. ಅದಕ್ಕೆ ಗ್ರಾ.ಪಂ. ಬಿಲ್ ಪಾವತಿ ಮಾಡಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದರು. ಈ ಸಂದರ್ಭ ಮಾತನಾಡಿದ ರೂಪೇಶ್ ರೈ ಇದು ರಾಜಕೀಯ ಎಂದು ಹೇಳಿ ಈ ಸಂಬಂಧಿತ ಚರ್ಚೆಗೆ ತೆರೆ ಎಳೆದರು.
ಗ್ರಾ.ಪಂ. ಅಧ್ಯಕ್ಷೆ ಸುಜಾತ ರೈ ಅಲಿಮಾರ್ ಮಾತನಾಡಿ, ನಮ್ಮ ಗ್ರಾಮಕ್ಕೆ ಜಲಸಿರಿ ಯೋಜನೆ ನೀರು ಬೇಕು ಎಂಬ ಬಗ್ಗೆ ನಮ್ಮೆಲ್ಲರ ಬೇಡಿಕೆಯೂ ಆಗಿದೆ. ಇದಕ್ಕಾಗಿ ಎಲ್ಲರೂ ಒಂದಾಗಿ ಸ್ವಇಚ್ಛೆಯಿಂದ ಕೆಲಸ ಮಾಡೋಣ ಎಂದರು.‌


ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಹರೀಶ್ ಡಿ., ನಗರಸಭೆಯ ಎಂಜಿನಿಯರ್ ವಸಂತ ಉಪಸ್ಥಿತರಿದ್ದರು. ಸಭೆಯಲ್ಲಿ ಗ್ರಾ.ಪಂ. ಸದಸ್ಯರಾದ ಪ್ರಶಾಂತ್ ಎನ್., ವಿಜಯಕುಮಾರ್, ವೇದಾವತಿ, ಹರೀಶ್ ಕೆ., ಗ್ರಾಮಸ್ಥರಾದ ಅಬ್ದುಲ್ ಖಾದರ್, ಶರೀಕ್ ಅರಫ್ಪಾ, ಸದಾನಂದ ನೆಕ್ಕಿಲಾಡಿ, ಈಸುಬು ಎನ್., ಕೆ.ಎ. ಸಲೀಂ ಮತ್ತಿತರರು ಉಪಸ್ಥಿತರಿದ್ದು, ಚರ್ಚೆಯಲ್ಲಿ ಭಾಗವಹಿಸಿದರು.
ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸತೀಶ್ ಡಿ. ಬಂಗೇರ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here