ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮೂಲಕ ಉತ್ತಮ ಸಮಾಜವನ್ನು ಕಟ್ಟುವಲ್ಲಿ ಶ್ರಮಿಸುತ್ತಿದೆ: ಪ್ರಹ್ಲಾದ್ ಶೆಟ್ಟಿ ಜೆ.
ಈ ಶಾಲೆ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುತ್ತಿರುವ ತಾಣವಾಗಿದೆ: ಪಿ. ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು
ಶಾಲೆ ಎಂದರೆ ಜ್ಞಾನ ದೇಗುಲ:ವಿವೇಕ್ ವಿನ್ಸೆಂಟ್ ಪಾಯ್ಸ್
ವಿಟ್ಲ: ಪೆರಾಜೆ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೆ.20ರಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವಿಟ್ಲ ತಾಲೂಕು ಜನಜಾಗೃತಿ ವೇದಿಕೆಯ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು.
ಬಾಲವಿಕಾಸ ಟ್ರಸ್ಟ್ ನ ಅಧ್ಯಕ್ಷರಾದ ಪ್ರಹ್ಲಾದ್ ಶೆಟ್ಟಿ ಜೆ ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಉತ್ತಮ ಸಮಾಜವನ್ನು ಕಟ್ಟುವಲ್ಲಿ ಶ್ರಮಿಸುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಈ ಮಹತ್ತರವಾದ ಕೊಡುಗೆ ವಿದ್ಯಾರ್ಥಿಗಳ ಜೀವನದಲ್ಲಿ ಒಳ್ಳೆಯ ಪರಿಣಾಮವನ್ನು ಬೀರುತ್ತದೆ. ವಿದ್ಯಾರ್ಥಿಗಳು ಹದಿಹರೆಯದ ವಯಸ್ಸಿನಲ್ಲಿ ದುಶ್ಚಟಗಳಿಗೆ ಬಲಿಯಾಗದೆ ಒಳ್ಳೆಯ ವಿದ್ಯಾಭ್ಯಾಸದೊಂದಿಗೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬದುಕಲು ಕಲಿಯಬೇಕು ಎಂದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮಾಣಿ ವಲಯದ ಅಧ್ಯಕ್ಷರಾದ ಪಿ. ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಬಾಲವಿಕಾಸ ಶಾಲೆ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುತ್ತಿರುವ ಅತ್ಯುನ್ನತ ಸಂಸ್ಥೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಂಗವಾಗಿ ಏರ್ಪಡಿಸಿದ ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲಕರವಾಗಿದೆ. ಸಂಪನ್ಮೂಲ ವ್ಯಕ್ತಿಗಳು ಹೇಳಿದ ಮಾಹಿತಿಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿ ಉತ್ತಮ ಪ್ರಜೆಗಳಾಗಿ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ವಿವೇಕ್ ವಿನ್ಸೆಂಟ್ ಪಾಯ್ಸ್ ರವರು ಮಾತನಾಡಿ ಇಂತಹ ಗ್ರಾಮೀಣ ಪ್ರದೇಶದಲ್ಲಿ ಅತ್ಯುನ್ನತ ಸೌಲಭ್ಯಗಳನ್ನೊಳಗೊಂಡು ಉತ್ತಮ ಶಿಕ್ಷಣ ನೀಡುತ್ತಿರುವ ಶಾಲೆ ಬಾಲವಿಕಾಸ ಎಂಬುವುದು ಶ್ಲಾಘನೀಯ. ಶಾಲೆ ಎಂದರೆ ಜ್ಞಾನ ದೇಗುಲ. ಶಾಲೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುತ್ತದೆ ಎಂದರು.
ವೇದಿಕೆಯಲ್ಲಿ ಬಾಲವಿಕಾಸ ಸಂಸ್ಥೆಯ ಕಾರ್ಯದರ್ಶಿ ಮಹೇಶ್ ಶೆಟ್ಟಿ ಜೆ, ಮುಖ್ಯೋಪಾಧ್ಯಾಯಿನಿ ಸುಪ್ರಿಯಾ ಡಿ, ಜನಜಾಗೃತಿ ವೇದಿಕೆಯ ಪದಾಧಿಕಾರಿಗಳಾದ ಕಿರಣ್ ಹೆಗ್ಡೆ, ಮನೋಹರ್ ರೈ, ತನಿಯಪ್ಪ ಗೌಡ, ಮಾಣಿ ವಲಯ ಒಕ್ಕೂಟದ ವಲಯಾಧ್ಯಕ್ಷರಾದ ಸುಧಾಕರ ಸಪಲ್ಯ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಾಣಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಬಾಲಕೃಷ್ಣ ಆಳ್ವರವರು ಪ್ರಾಸ್ತವಿಕ ಮಾತುಗಳನ್ನಾಡಿದರು. ವಿಟ್ಲ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ರಮೇಶ್ ಸ್ವಾಗತಿಸಿ, ಸಂಸ್ಥೆಯ ಸಹಶಿಕ್ಷಕಿ ಶೋಭಾ ಎಂ ಶೆಟ್ಟಿ ವಂದಿಸಿದರು. ಸಂಸ್ಥೆಯ ಸಹಶಿಕ್ಷಕಿ ಲೀಲಾ ಮಯ್ಯ ಕಾರ್ಯಕ್ರಮ ನಿರೂಪಿಸಿದರು.