ಕಡಬ:ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದ ಪುತ್ತೂರು ತಾಲೂಕು ತಂಡ,ವಯೋಮಿತಿ ಮೀರಿದ ವಿದ್ಯಾರ್ಥಿಯೊಬ್ಬ ತಂಡದಲ್ಲಿ ಆಡಿದ್ದ ಕಾರಣಕ್ಕಾಗಿ ತನ್ನ ಸ್ಥಾನ ಕಳೆದುಕೊಂಡ ಘಟನೆ ವರದಿಯಾಗಿದೆ.
ಗುತ್ತಿಗಾರಿನ ಪಿ.ಎಂ.ಶ್ರೀ ಶಾಲಾ ಮೈದಾನದಲ್ಲಿ ಸೆ.20ರಂದು ನಡೆದ ಪ್ರಾಥಮಿಕ ಶಾಲಾ ಜಿಲ್ಲಾ ಮಟ್ಟದ ಬಾಲಕರ ಕಬಡ್ಡಿ ಪಂದ್ಯಾಟದಲ್ಲಿ ಪುತ್ತೂರು ತಾಲೂಕು ತಂಡದಲ್ಲಿ ಕಡಬ ಸೈಂಟ್ ಆನ್ಸ್,ದುರ್ಗಾಂಬ ಆಲಂಕಾರು, ರಾಮಕುಂಜ, ಕಡ್ಯ ಕೊಣಾಜೆ ಶಾಲೆಯ ವಿದ್ಯಾರ್ಥಿಗಳಿದ್ದರು.ಈ ಪಂದ್ಯಾಟದಲ್ಲಿ ಪುತ್ತೂರು ತಾಲೂಕು ತಂಡ ಪ್ರಥಮ ಸ್ಥಾನ ಪಡೆದಿತ್ತು.ಸೆಮಿಫೈನಲ್ ಮುಗಿಸಿ ಫೈನಲ್ ಪಂದ್ಯಾಟ ನಡೆಯುತ್ತಿದ್ದ ವೇಳೆ, ಪುತ್ತೂರು ತಾಲೂಕು ತಂಡದಲ್ಲಿ ವಯೋಮಿತಿ ಮೀರಿದ ವಿದ್ಯಾರ್ಥಿಯೊಬ್ಬ ಆಟವಾಡುತ್ತಿದ್ದ ವಿಚಾರ ಗೊತ್ತಾಗಿ ಈ ಕುರಿತು ದೂರು ವ್ಯಕ್ತವಾದ ಕಾರಣ ಫೈನಲ್ ಪಂದ್ಯಾಟವನ್ನು ಅರ್ಧದಲ್ಲಿ ರದ್ದುಗೊಳಿಸಿ ವಯೋಮಿತಿ ಮೀರಿದ ವಿದ್ಯಾರ್ಥಿಯನ್ನು ಹೊರಗಿಟ್ಟು ಫೈನಲ್ ಪಂದ್ಯಾಟ ನಡೆಸಲಾಗಿತ್ತು. ಈ ಪಂದ್ಯಾಟದಲ್ಲಿ ಪುತ್ತೂರು ತಾಲೂಕು ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದು, ದ್ವಿತೀಯ ಸ್ಥಾನವನ್ನು ಬಂಟ್ವಾಳ ತಾಲೂಕು ತಂಡ ಪಡೆಯಿತು. ಆದರೆ ಅದೇ ದಿನ ಫಲಿತಾಂತ ಘೋಷಣೆ ಮಾಡದೆ ಸೆ.21ರಂದು ಫಲಿತಾಂಶ ಘೋಷಣೆ ಮಾಡಲಾಯಿತು. ವಯೋಮಿತಿ ಮೀರಿದ ಬಾಲಕ ಆಡಿದ್ದರಿಂದ ಪುತ್ತೂರು ತಾಲೂಕು ತಂಡದ ಪ್ರಥಮ ಸ್ಥಾನವನ್ನು ಹಿಂಪಡೆದುಕೊಂಡು, ದ್ವಿತೀಯ ಸ್ಥಾನ ಪಡೆದ ಬಂಟ್ವಾಳ ತಾಲೂಕು ತಂಡಕ್ಕೆ ಪ್ರಥಮ ಸ್ಥಾನ ಹಾಗೂ ಪುತ್ತೂರು ತಂಡದೊಂದಿಗೆ ಸೆಮಿಫೈನಲ್ನಲ್ಲಿ ಪರಾಭವಗೊಂಡಿದ್ದ ಮಂಗಳೂರು ಉತ್ತರ ತಂಡಕ್ಕೆ ದ್ವಿತೀಯ ಸ್ಥಾನ ನೀಡಲು ನಿರ್ಧಾರವಾಗಿರುವುದಾಗಿ ವರದಿಯಾಗಿದೆ.
ಯಾರದ್ದೋ ತಪ್ಪಿಗೆ ಇನ್ಯಾರಿಗೋ ಶಿಕ್ಷೆ: ಫೈನಲ್ನಲ್ಲಿ ಪುತ್ತೂರು ತಂಡ ಪ್ರಥಮ ಸ್ಥಾನ ಪಡೆದುಕೊಂಡರೂ, ವಯೋಮಿತಿ ಮೀರಿದ ವಿದ್ಯಾರ್ಥಿ ತಂಡದಲ್ಲಿದ್ದರೆಂಬ ಕಾರಣಕ್ಕೆ ಪ್ರಶಸ್ತಿ ಹಿಂಪಡೆದುಕೊಂಡ ವಿಚಾರದಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿದ್ದು ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಶಿಕ್ಷೆ ಅನುಭವಿಸುವಂತಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.ಪುತ್ತೂರು ತಾಲೂಕು ತಂಡಕ್ಕೆ ಆಯ್ಕೆ ಸಂದರ್ಭವೇ ವಿದ್ಯಾರ್ಥಿ ತನ್ನ ವಯೋಮಿತಿಯನ್ನು ಸರಿಯಾಗಿ ನಮೂದಿಸಿದ್ದರೂ ಆಯ್ಕೆ ಸಮಿತಿ ಇದನ್ನು ಪರಿಶೀಲಿಸದೆ ವಿದ್ಯಾರ್ಥಿಯನ್ನು ತಂಡಕ್ಕೆ ಸೇರಿಸಿಕೊಂಡದ್ದು ಮೊದಲ ತಪ್ಪಾದರೆ, ಪಂದ್ಯಾಟಕ್ಕೆ ಗುತ್ತಿಗಾರಿಗೆ ತೆರಳಲೆಂದು ತಂಡದವರು ಕಡಬ ಸೈಂಟ್ ಆನ್ಸ್ ವಿದ್ಯಾ ಸಂಸ್ಥೆಗೆ ಬಂದಿದ್ದಾಗ ಅಲ್ಲಿಯೂ ಪರಿಶೀಲಿಸಲಾಗಿಲ್ಲ. ಪಂದ್ಯಾಟ ಆರಂಭದ ಮೊದಲು ತಂಡದ ವಿದ್ಯಾರ್ಥಿಯ ದಾಖಲೆ ಪತ್ರಗಳು ಅಲ್ಲಿಯ ಸಂಘಟಕರು, ಸಮಿತಿಯವರ ಬಳಿಯಲ್ಲಿ ಇದ್ದರೂ ಚಕಾರವೆತ್ತದೆ ಪಂದ್ಯಾಟಕ್ಕೆ ಅವಕಾಶ ನೀಡಲಾಗಿತ್ತು. ಪಂದ್ಯಾಟದ ಮಧ್ಯದಲ್ಲಿ ವಯೋಮಿತಿಯ ದೂರು ವ್ಯಕ್ತವಾಯಿತೆಂದು ಫೈನಲ್ ಪಂದ್ಯಾಟವನ್ನು ಅರ್ಧದಲ್ಲಿ ರದ್ದುಗೊಳಿಸಿ ವಯೋಮಿತಿ ಮೀರಿದ ಬಾಲಕನನ್ನು ಹೊರಗಿಟ್ಟು ಮತ್ತೆ ಫೈನಲ್ ಆಟವಾಡಿಸಿದಾಗಲೂ ಪುತ್ತೂರು ತಂಡ ಪ್ರಥಮ ಸ್ಥಾನ ಗಳಿಸಿದರೂ ಇಲಾಖಾ ಸಮಿತಿ ಪ್ರಥಮ ಸ್ಥಾನವನ್ನು ಹಿಂಪಡೆದುಕೊಂಡಿರುವುದಕ್ಕೆ ದೈಹಿಕ ಶಿಕ್ಷಣ ಶಿಕ್ಷಕರಿರುವ ಆಯ್ಕೆ ಸಮಿತಿಯ ಬೇಜವಾಬ್ದಾರಿಯೇ ಕಾರಣ ಎಂದು ಪೋಷಕರು ಹಾಗೂ ಶಾಲೆಯವರು ಆಕ್ರೋಶ ಹೊರ ಹಾಕಿದ್ದಾರೆ.ಪಂದ್ಯಾಟದ ಮೊದಲು ದಾಖಲೆಗಳನ್ನು ಸರಿಯಾಗಿ ಪರಿಶೀಲನೆ ಮಾಡುತ್ತಿದ್ದರೆ ಈ ಗೊಂದಲವೇ ನಡೆಯುತ್ತಿರಲಿಲ್ಲ.ವಯೋಮಿತಿ ಮೀರಿದ ಬಾಲಕನನ್ನು ಹೊರಗಿಟ್ಟು ಆಟ ಆಡುವ ಎಲ್ಲಾ ಸಾಧ್ಯತೆ ಇತ್ತು ಎಂಬ ಅಭಿಪ್ರಾಯಗಳೂ ಕೇಳಿ ಬಂದಿವೆ.