ಪುತ್ತೂರು: ಸೆ.21: ಕ್ರೀಡೆ ಪ್ರಶಸ್ತಿಯನ್ನು ಮೀರಿದ ವ್ಯವಸ್ಥೆ. ಇಲ್ಲಿ ಭಾಗವಹಿಸುವ ಎಲ್ಲ ಸ್ಪರ್ಧಿಗಳಿಗೆ ಬಹುಮಾನ ಸಿಗದೆ ಇರಬಹುದು, ಆದರೆ ಅವರಿಗೆಲ್ಲ ಪ್ರಶಸ್ತಿಗಿಂತ ಮುಖ್ಯವಾದ ಆರೋಗ್ಯ ಭಾಗ್ಯ ಸಿಗುತ್ತದೆ ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ಹೇಳಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸೆ.21ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ದಸರಾ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದೈಹಿಕವಾಗಿ ಸದೃಢವಾಗಿದ್ದರೆ ಜೀವನ ಸುಗಮವಾಗಿ ಸಾಧ್ಯವಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಕ್ರೀಡೆಗಳಲ್ಲಿ ಭಾಗವಹಿಸುವ ಆಸಕ್ತಿ ಕಡಿಮೆ ಆಗುತ್ತಿದ್ದು ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಮಕ್ಕಳನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಬೇಕು ಎಂದರು.
ಕ್ರೀಡಾಜ್ಯೋತಿ ಬೆಳಗಿಸಿದ ನಗರಸಭೆ ಪೌರಯುಕ್ತ ಮಧು ಎಸ್.ಮನೋಹರ್, ಕ್ರೀಡಾಸ್ಫೂರ್ತಿ, ಶಿಸ್ತಿನಿಂದ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಮೂಲಕ ಸಾಧನೆ ತೋರಬೇಕು ಎಂದರು.
ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್. ಆರ್ ಮಾತನಾಡಿ, ಯುವ ಸಮುದಾಯಕ್ಕೆ ತನ್ನ ಸಾಮರ್ಥ್ಯ ಸಾಬೀತು ಪಡಿಸಲು ದಸರಾ ಕ್ರೀಡಾಕೂಟ ಒಂದು ಉತ್ತಮ ವೇದಿಕೆ ಎಂದರು.
ಯುವ ಸಬಲೀಕರಣ ಕ್ರೀಡಾ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕ ಪ್ರದೀಪ್ ಡಿ’ಸೋಜಾ, ಪುತ್ತೂರು ಕೋಟಿ ಚೆನ್ನಯ ಕಂಬಲ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಶುಭ ಹಾರೈಸಿದರು. ಉದ್ಘಾಟನೆಗಿಂತ ಮೊದಲು ಆಕರ್ಷಕ ಪಥ ಸಂಚಲನ ನಡೆಯಿತು. ವೇದಿಕೆಯಲ್ಲಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ, ಕೊಂಬೆಟ್ಟು ಸ.ಪ.ಪೂ.ಕಾಲೇಜಿನ ಉಪ ಪ್ರಾಂಶುಪಾಲ ವಸಂತ ಮೂಲ್ಯ, ರಾಷ್ಟ್ರೀಯ ಮಟ್ಟದ ವಾಲಿಬಾಲ್ ತರಬೇತುದಾರ ನಾರಾಯಣ್ ಪಿ.ವಿ., ಯುವಜನ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ತಾಲೂಕು ಅಧ್ಯಕ್ಷ ದಿನೇಶ್ ಸಾಲಿಯಾನ್, ಅಶ್ವತ್ಥಕಟ್ಟೆ ದೇವತಾ ಸಮಿತಿ ಯರ್ಮುಂಜಪಳ್ಳ ಪಡ್ನೂರು ಇದರ ಗೌರವಾಧ್ಯಕ್ಷ ಶೀನಪ್ಪ ಪೂಜಾರಿ, ಶ್ರೀ ಧೂಮಾವತಿ ಯುವಕ ಮಂಡಲ ಜುಮಾದಿಪಲ್ಕೆ ಪಡ್ನೂರು ಅಧ್ಯಕ್ಷ ಜಯರಾಜ, ಗ್ರೇಡ್-1 ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಸೀತಾರಾಮ ಮೊದಲಾದವರು ಉಪಸ್ಥಿತರಿದ್ದರು.
ನಿವೃತ್ತ ದೈಹಿಕ ಶಿಕ್ಷಕರಾದ ದಯಾನಂದ ರೈ ಕೊರ್ಮಂಡ, ಗೀತಾಮಣಿ ಅವರನ್ನು ಸಮ್ಮಾನಿಸಲಾಯಿತು. ಶ್ರೀಕಾಂತ್ ಬಿರಾವು ವಂದಿಸಿದರು. ಯುವ ಸಬಲೀಕರಣ ಕ್ರೀಡಾ ಇಲಾಖೆಯ ನೋಡಲ್ ಅಧಿಕಾರಿ ಮಾಮಚ್ಚನ್ ಎಂ. ನಿರೂಪಿಸಿದರು. ತಾ.ಪಂ.ಪುತ್ತೂರು, ನಗರಸಭೆ ಪುತ್ತೂರು, ತಾಲೂಕು ಯುವಜನ ಒಕ್ಕೂಟ ಪುತ್ತೂರು, ಸಂತ ಪಿಲೋಮಿನಾ ಕಾಲೇಜು ಪುತ್ತೂರು, ಸ.ಪ.ಪೂ. ಕಾಲೇಜು ಕೊಂಬೆಟ್ಟು ಪುತ್ತೂರು, ಅಶ್ವತ್ಥಕಟ್ಟೆ ದೇವತಾ ಸಮಿತಿ ಯರ್ಮುಂಜಪಳ್ಳ ಪಡ್ನೂರು ಶ್ರೀ ಧೂಮಾವತಿ ಯುವಕ ಮಂಡಲ ಜುಮಾದಿಪಲ್ಕೆ ಪಡ್ನೂರು ಇವುಗಳು ಕ್ರೀಡಾಕೂಟಕ್ಕೆ ಸಹಯೋಗ ನೀಡಿತು.