ಕಸ್ತೂರಿ ರಂಗನ್ ವರದಿ ಜಾರಿ ವಿಚಾರ-ಗುಂಡ್ಯದಲ್ಲಿ ಗ್ರಾಮಸ್ಥರ ಸಭೆ; ಹೋರಾಟಕ್ಕೆ ನಿರ್ಧಾರ

0

ವರದಿ ಜಾರಿಯಾದಲ್ಲಿ ಕೃಷಿ ಭೂಮಿ ಕಳೆದುಕೊಳ್ಳುವ ಆತಂಕ: ಕಿಶೋರ್ ಶಿರಾಡಿ

ನೆಲ್ಯಾಡಿ: ಪಶ್ಚಿಮಘಟ್ಟ ಪ್ರದೇಶದಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಹಾಗೂ ಬಾಧಿತ ಗ್ರಾಮಸ್ಥರಿಗೆ ಶಾಶ್ವತ ಪರಿಹಾರಕ್ಕೆ ಹೋರಾಟ ನಡೆಸಲು ರೂಪುರೇಷೆ ಸಿದ್ಧತೆಗಾಗಿ ಗ್ರಾಮಸ್ಥರ ಸಭೆಯು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಇವರ ನೇತೃತ್ವದಲ್ಲಿ ಸೆ.22ರಂದು ಶಿರಾಡಿ ಗ್ರಾಮದ ಗುಂಡ್ಯ ಮಾಡದ ಮೈದಾನದಲ್ಲಿ ನಡೆಯಿತು.


ಸಭೆಯಲ್ಲಿ ಕೊಂಬಾರು, ಸಿರಿಬಾಗಿಲು, ಶಿರಾಡಿ ಗ್ರಾಮದ ಗ್ರಾಮಸ್ಥರು ಭಾಗವಹಿಸಿದ್ದರು. ಸಭೆಯಲ್ಲಿ ಕಸ್ತೂರಿ ರಂಗನ್ ಜಾರಿ ವಿರುದ್ಧ ಹೋರಾಟ ನಡೆಸುವ ನಿರ್ಧಾರ ಕೈಗೊಂಡು ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಸಭೆ ಉದ್ದೇಶಿಸಿ ಮಾತನಾಡಿದ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಅವರು, ಪರಿಸರ ಸಂರಕ್ಷಣೆ ನೆಪದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅರಣ್ಯ ಇಲಾಖೆಯು ಕಗ್ಗೊಲೆ ಮಾಡುತ್ತಿದೆ. 2011ರಲ್ಲಿ ಪುಷ್ಪಗಿರಿ ಯೋಜನೆ ಜಾರಿಗೆ ತರಲು ಸರಕಾರ ಮುಂದಾಗಿತ್ತು. ಆದರೆ ಜನರ ವಿರೋಧ ಇದ್ದ ಕಾರಣ ಅದು ವಿಫಲವಾಯಿತು. ಆ ನಂತರ ಪಶ್ಚಿಮ ಘಟ್ಟ ತಪ್ಪಲು ಪ್ರದೇಶದಲ್ಲಿ ಬೇರೆ ಬೇರೆ ಯೋಜನೆಗಳ ಜಾರಿಗೆ ಅರಣ್ಯ ಇಲಾಖೆ ಪ್ರಯತ್ನ ಮಾಡುತ್ತಲೇ ಬಂದಿದೆ. ಈ ಮೂಲಕ ಪಶ್ಚಿಮ ಘಟ್ಟ ತಪ್ಪಲು ಪ್ರದೇಶದ ರೈತರಿಗೆ ಮಾನಸಿಕ ಹಿಂಸೆ ನೀಡುತ್ತಾ ಬಂದಿದೆ. ಸರಕಾರದ ಯೋಜನೆಯಿಂದಾಗಿ ತಮ್ಮ ಹಿರಿಯರು ಮಾಡಿಟ್ಟಿರುವ ಕೃಷಿ ಭೂಮಿಯನ್ನು ಕಳೆದುಕೊಂಡು ನಿರಾಶ್ರಿತರಾಗುವ ಆತಂಕ ರೈತರಲ್ಲಿ ಉಂಟಾಗಿದೆ ಎಂದರು.

2014ರಿಂದ ಕಸ್ತೂರಿ ರಂಗನ್ ವರದಿ ಜಾರಿಗೆ ಸರಕಾರದ ಮಟ್ಟದಲ್ಲಿ ಪ್ರಯತ್ನ ನಡೆಯುತ್ತಲೇ ಇದೆ. ಈ ವರದಿ ಜಾರಿ ಸಂಬಂಧ ಬಾಧಿತ ಪ್ರದೇಶಗಳಲ್ಲಿ ವಿಶೇಷ ಗ್ರಾಮಸಭೆಯೂ ನಡೆಸಿ ಜನರ ಅಭಿಪ್ರಾಯ ಪಡೆದುಕೊಳ್ಳಲಾಗಿತ್ತು. ವರದಿ ಜಾರಿ ವಿರೋಧಿಸಿ ನಿರ್ಣಯ ಕೈಗೊಂಡು ಸರಕಾರಕ್ಕೆ ಕಳಿಸಲಾಗಿತ್ತು. ಸರಕಾರ ಗ್ರಾಮಸ್ಥರ ಅಭಿಪ್ರಾಯ ಗಣನೆಗೆ ತೆಗೆದುಕೊಂಡು ಪರಿಸರ ಸಂರಕ್ಷಣೆಯ ಬಗ್ಗೆ ಚಿಂತನೆ ಮಾಡಬೇಕು ಎಂದು ಹೇಳಿದ ಕಿಶೋರ್ ಶಿರಾಡಿ ಅವರು, ರೈತರ ಕಂದಾಯ ಸಮಸ್ಯೆಗಳನ್ನು ಬಗೆಹರಿಸಿ ಮೂಲಭೂತ ಸೌಕರ್ಯಕ್ಕೆ ಪ್ರಥಮ ಆದ್ಯತೆ ನೀಡಬೇಕು. ಪಶ್ಚಿಮ ಘಟ್ಟಕ್ಕೆ ಬರುವ ಕಾನೂನನ್ನು ಜನವಸತಿ ಪ್ರದೇಶಕ್ಕೆ ಅನ್ವಯ ಆಗದಂತೆ ನೋಡಿಕೊಳ್ಳುವಂತದ್ದು ಸರಕಾರದ ಕರ್ತವ್ಯ ಆಗಿರುತ್ತದೆ ಎಂದು ಹೇಳಿದರು.


ಗುತ್ತಿಗಾರು ಚರ್ಚ್‌ನ ಧರ್ಮಗುರು ರೆ.ಫಾ.ಆದರ್ಶ್ ಜೋಸೆಫ್, ಕೊಂಬಾರು ಗ್ರಾ.ಪಂ.ಮಾಜಿ ಅಧ್ಯಕ್ಷ ಪ್ರಸನ್ನಕುಮಾರ್, ಧಾರ್ಮಿಕ ಮುಖಂಡ ರಾಮಚಂದ್ರ ಗೌಡ ದೇರಣೆ, ಬಿಳಿನೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ದಾಮೋದರ ಗುಂಡ್ಯ ಅವರು ಮಾತನಾಡಿದರು. ಗ್ರಾಮಸ್ಥರಾದ ರಾಮಚಂದ್ರ ಆಮಡ್ಕ, ಗಣೇಶ್ ಅನಿಲ, ಪ್ರಕಾಶ್ ಗುಂಡ್ಯ, ಯತೀಶ್ ಆಮಡ್ಕ, ಪದ್ಮನಾಭ ಅನಿಲ, ಬಾಲಚಂದ್ರ ಅನಿಲ, ಜಿಮ್ಸನ್ ಶಿರಾಡಿ, ವಸಂತ ಅನಿಲ, ತೀರ್ಥಕುಮಾರ್ ದೇರಣೆ, ಮಂಜುನಾಥ ಪೇರುಂದೊಡಿ, ವಿನಯ ಕಲ್ಲರ್ತನೆ, ವಿನೋದ್ ಹೊಳ್ಳಾರ್, ಪವನ್ ನೀರಾಯ, ನಾರಾಯಣ ಅಮ್ಮಾಜೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here