ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

0

3.45 ಲಕ್ಷ ರೂ.ನಿವ್ವಳ ಲಾಭ; ಶೇ.12 ಡಿವಿಡೆಂಡ್, ಪ್ರತಿ ಲೀ.ಹಾಲಿಗೆ 36 ಪೈಸೆ ಬೋನಸ್ ಘೋಷಣೆ

ನೆಲ್ಯಾಡಿ: ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ 2023-24ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಸೆ.23ರಂದು ಬೆಳಿಗ್ಗೆ ಸಂಘದ ಸಭಾಂಗಣದಲ್ಲಿ ನಡೆಯಿತು.


ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಗುರುಪ್ರಸಾದ್ ಕೆ.,ಅವರು ಮಾತನಾಡಿ, ವರದಿ ಸಾಲಿನ ಅಂತ್ಯಕ್ಕೆ ಸಂಘದಲ್ಲಿ 287 ಸದಸ್ಯರಿದ್ದು 57,900 ರೂ.ಪಾಲು ಬಂಡವಾಳವಿದೆ. ಪ್ರಸ್ತುತ 160 ಜನ ಸದಸ್ಯರು ಹಾಲು ಪೂರೈಸುತ್ತಿದ್ದು ದಿನವೊಂದಕ್ಕೆ 1100 ಲೀ.ಹಾಲು ಸಂಗ್ರಹವಾಗುತ್ತಿದೆ. ಹೊಸಮಜಲು ಮತ್ತು ಪಾಪಿನಮಂಡೆಯಲ್ಲಿ ಹಾಲು ಖರೀದಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ವರದಿ ಸಾಲಿನಲ್ಲಿ 4,31,206.7 ಲೀ.ಹಾಲು ಸಂಗ್ರಹಿಸಿ 4,07,002.6 ಲೀ.ಹಾಲು ಒಕ್ಕೂಟಕ್ಕೆ ಮಾರಾಟ ಮಾಡಲಾಗಿದೆ. 24,204.1 ಲೀ.ಹಾಲು ಸ್ಥಳೀಯವಾಗಿ ಮಾರಾಟವಾಗಿದೆ. 1925 ಚೀಲ ಪಶು ಆಹಾರ ಮತ್ತು ಕರುಗಳ ಪಶು ಆಹಾರವನ್ನು ಒಕ್ಕೂಟದಿಂದ ಖರೀದಿಸಿ 1736 ಚೀಲ ಮಾರಾಟ ಮಾಡಲಾಗಿದೆ. ವರದಿ ಸಾಲಿನಲ್ಲಿ ಹಾಲು, ಪಶು ಆಹಾರ ಮಾರಾಟದಿಂದ ಮತ್ತು ಇತರ ಆದಾಯಗಳಿಂದ ರೂ.21,48,303.79 ರೂ. ಲಾಭ ಬಂದಿದ್ದು ಖರ್ಚು ವೆಚ್ಚಗಳನ್ನು ಕಳೆದು 3,45,049.90 ರೂ.ನಿವ್ವಳ ಲಾಭ ಬಂದಿದೆ. ಲಾಭಾಂಶದಲ್ಲಿ ಸದಸ್ಯರಿಗೆ ಶೇ.12 ಡಿವಿಡೆಂಡ್ ಹಾಗೂ ಪ್ರತಿ ಲೀ.ಹಾಲಿಗೆ 36 ಪೈಸೆ ಬೋನಸ್ ನೀಡಲಾಗುವುದು ಎಂದು ಹೇಳಿದರು. ಒಕ್ಕೂಟದ ಸಹಕಾರದಿಂದ ರಾಸುಗಳ ಕಾಲುಬಾಯಿ ಜ್ವರ ನಿವಾರಣಾ ಲಸಿಕಾ ಶಿಬಿರವನ್ನು ಉಚಿತವಾಗಿ ಸಂಘದ ವ್ಯಾಪ್ತಿಯಲ್ಲಿ ನಡೆಸಲಾಗುತ್ತಿದೆ. ಜಾನುವಾರುಗಳ ಕೃತಕ ಗರ್ಭಧಾರಣಾ ಸೌಲಭ್ಯ ಮತ್ತು ಜಂತುಹುಳ ನಿವಾರಣೆಗೆ ಮಾತ್ರೆ ಸಹಾಯಧನ ರೂಪದಲ್ಲಿ ಲಭ್ಯವಿದೆ. ಪ್ರತಿ ಆರು ತಿಂಗಳಿಗೊಮ್ಮೆ ಉಚಿತವಾಗಿ ಜಂತುಹುಳ ನಿವಾರಣೆಗೆ ಮಾತ್ರ ನೀಡಲಾಗುತ್ತಿದೆ. ಜಾನುವಾರುಗಳ ವಿಮಾ ಯೋಜನೆ ಸಹಿತ ಹಾಲು ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಒಕ್ಕೂಟದಿಂದ ಸಂಘದ ಸದಸ್ಯರಿಗೆ ಹಲವು ಯೋಜನೆಗಳಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಗುರುಪ್ರಸಾದ್ ಕೆ.,ಹೇಳಿದರು.

ಮಾಹಿತಿ ಶಿಬಿರ ಆಯೋಜನೆ:
ರಾಸುಗಳಿಗೆ ಕೃತಕ ಗರ್ಭಧಾರಣೆ ಇಂಜೆಕ್ಷನ್ ನೀಡಿದರೂ ಗಬ್ಬ ನಿಲ್ಲದೇ ಇರುವುದು ದೊಡ್ಡ ಸಮಸ್ಯೆಯಾಗಿದೆ. ಈ ಬಗ್ಗೆ ತಜ್ಞರಿಂದ ಮಾಹಿತಿ ನೀಡುವ ಕಾರ್ಯಕ್ರಮ ಆಯೋಜಿಸಲು ಆಡಳಿತ ಮಂಡಳಿಯಿಂದ ನಿರ್ಧರಿಸಲಾಗಿದೆ ಎಂದು ನಿರ್ದೇಶಕ ಡಿ.ಮಹಾಬಲ ಶೆಟ್ಟಿ ಹೇಳಿದರು. ಸಂಘದ ವಿಸ್ತರಣಾಧಿಕಾರಿ ರಾಜೇಶ್ ಕಾಮತ್ ಅವರು, ಹಾಲು ಉತ್ಪಾದಕರಿಗೆ ಒಕ್ಕೂಟದಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಹೇಳಿದರು. ದನ ಸಾಕಾಣಿಕೆಯಿಂದ ಸೋಲೇ ಇಲ್ಲ. ಇದಕ್ಕೆ ಪೂಜನೀಯ ಸ್ಥಾನವಿದೆ ಎಂದು ಅವರು ಹೇಳಿದರು.

ಬಹುಮಾನ ವಿತರಣೆ:
2023-24ನೇ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಸರಬರಾಜು ಮಾಡಿದ ಸದಸ್ಯರಾದ ಜಿಬು ಜೋಯಿ (ಪ್ರಥಮ), ಪ್ರೇಮಾವತಿ ನೆಲ್ಯಾಡಿ(ದ್ವಿತೀಯ)ಹಾಗೂ ಪುಷ್ಪರಾಜ್ ಶೆಟ್ಟಿ (ತೃತೀಯ) ಅವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಸಂಘದ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು. ಪಾಪಿನಮಂಡೆಯಲ್ಲಿ ಹಾಲು ಸಂಗ್ರಹಣೆಗೆ ಅವಕಾಶ ಮಾಡಿಕೊಟ್ಟ ಹರೀಶ್ ಡಿ.ಸೋಜ ಹಾಗೂ ಏಲಿಯಮ್ಮ ಜೋಸ್ ಅವರಿಗೆ ಉಡುಗೊರೆ ನೀಡಿ ಗೌರವಿಸಲಾಯಿತು. ಸಂಘದ ವಿಸ್ತರಣಾಧಿಕಾರಿ ರಾಜೇಶ್ ಕಾಮತ್ ಅವರಿಗೆ ಶಾಲು, ಹಾರಾರ್ಪಣೆ ಮಾಡಿ ಸನ್ಮಾನಿಸಲಾಯಿತು.

ವಿದ್ಯಾರ್ಥಿಗಳಿಗೆ ಗೌರವಾರ್ಪಣೆ:
2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ಸಂಘದ ಸದಸ್ಯರ ಮಕ್ಕಳನ್ನು ಮಹಾಸಭೆಯಲ್ಲಿ ಗೌರವಿಸಲಾಯಿತು.

ಸಂಘದ ಸ್ಥಾಪಕ ಅಧ್ಯಕ್ಷರಾದ ಎನ್.ವಿ.ವ್ಯಾಸ, ಸದಸ್ಯರಾದ ಆನಂದ ಹೆಗ್ಡೆ, ಪುಷ್ಪರಾಜ ಶೆಟ್ಟಿ, ಜಯಾನಂದ ಬಂಟ್ರಿಯಾಲ್, ಬಾಲಕೃಷ್ಣ ಬಾಣಜಾಲು ಮತ್ತಿತರರು ಸಲಹೆ ಸೂಚನೆ ನೀಡಿದರು. ಸಂಘದ ಉಪಾಧ್ಯಕ್ಷ ಹೊನ್ನಪ್ಪ ಗೌಡ, ನಿರ್ದೇಶಕರಾದ ಡಿ.ಮಹಾಬಲ ಶೆಟ್ಟಿ, ವೆಂಕಪ್ಪ ನಾಯ್ಕ, ಕಾಂತಪ್ಪ ಗೌಡ, ಜಯರಾಮ ಬಿ., ದಯಾನಂದ ಹೆಚ್., ಉಮೇಶ್ ಪಿ., ಸೇಸಮ್ಮ, ವಾರಿಜ, ಗಿರಿಜ, ಹೇಮಾವತಿ, ಪ್ರೇಮಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುರಾಧ ಹೆಚ್., ವರದಿ ಮಂಡಿಸಿದರು. ಉಪಾಧ್ಯಕ್ಷ ಹೊನ್ನಪ್ಪ ಗೌಡ ಸ್ವಾಗತಿಸಿ, ನಿರ್ದೇಶಕ ಡಿ.ಮಹಾಬಲ ಶೆಟ್ಟಿ ವಂದಿಸಿದರು. ಹಾಲು ಪರೀಕ್ಷಕಿ ನಳಿನಾಕ್ಷಿ ಪ್ರಾರ್ಥಿಸಿದರು. ಸಹಾಯಕಿ ಗಿರಿಜ, ಬಿಎಂಸಿ ನಿರ್ವಾಹಕ ಪರಮೇಶ್ವರ, ಕೃತಕ ಗರ್ಭಧಾರಣಾ ಕಾರ್ಯಕರ್ತ ಜಯರಾಮ, ಬ್ರಾಂಚ್ ಸಹಾಯಕಿ ವಿಜಯ, ಜಯಂತಿ ಸಹಕರಿಸಿದರು.

LEAVE A REPLY

Please enter your comment!
Please enter your name here