ಪುತ್ತೂರು: ಭಾರತದ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಭೇಟಿಯಲ್ಲಿ ಸೆ.22ರಂದು ಭಾನುವಾರ ನ್ಯೂಯಾರ್ಕ್‌ನಲ್ಲಿ ನಡೆದ ಅನಿವಾಸಿ ಭಾರತೀಯರ ಸಮಾವೇಶದಲ್ಲಿ ಮೋದಿಯವರ ಸ್ವಾಗತ ತಂಡದಲ್ಲಿ ಪುತ್ತೂರಿನ ವಿಪುಲ್ ಎಸ್. ರೈ ಕಡಮಜಲು ಭಾಗಿಯಾಗಿದ್ದಾರೆ.
ವಿಶ್ವಹಿಂದೂ ಪರಿಷದ್ ಪುತ್ತೂರು ಪ್ರಖಂಡ ಮಾಜಿ ಅಧ್ಯಕ್ಷರೂ, ಜಿಲ್ಲಾ ಬಿಜೆಪಿ ಮಾಜಿ ಉಪಾಧ್ಯಕ್ಷರೂ ಆಗಿರುವ ಕಡಮಜಲು ಸುಭಾಸ್ ರೈಯವರ ಪುತ್ರ ವಿಪುಲ್ ಎಸ್. ರೈಯವರು ಪ್ರಸ್ತುತ ಅಮೆರಿಕದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಉದ್ಯೋಗಿಯಾಗಿದ್ದಾರೆ. ʻಓವರ್‌ಸೀಸ್ ಫ್ರೆಂಡ್ಸ್ ಆಫ್ ಬಿಜೆಪಿʼ ಯ ವಿದೇಶ್ ವಿಭಾಗ್ ರಾಜ್ಯ ಸಹಸಂಚಾಲಕ್ ಆಗಿರುವ ವಿಪುಲ್‌ರವರು ನ್ಯೂಯಾರ್ಕ್‌ನ ಲಾಂಗ್ ಐಲ್ಯಾಂಡ್‌ನ ನಸ್ಸೌ ಕೊಲಿಸಿಯಂ ಸ್ಟೇಡಿಯಂನಲ್ಲಿ ನಡೆದ ‘ಮೋದಿ ಮತ್ತು ಯುಎಸ್’ ಕಾರ್ಯಕ್ರಮದಲ್ಲಿ ʻಕಮ್ಯುನಿಟಿ ಲಾಯಿಝನ್ʼ ಸ್ವಾಗತ ತಂಡದ 40 ಮಂದಿಯ ಕೋರ್ ಕಮಿಟಿ ಸದಸ್ಯರಾಗಿದ್ದರು.
ಮೋದಿ ಮತ್ತು ಯುಎಸ್ ಕಾರ್ಯಕ್ರಮದಲ್ಲಿ ಅಮೆರಿಕದಲ್ಲಿರುವ ಭಾರತೀಯ ಮೂಲದ ಸುಮಾರು 2000 ಸಂಘ ಸಂಸ್ಥೆಗಳ ಪೈಕಿ 700 ಸಂಘ ಸಂಸ್ಥೆಗಳನ್ನು ಆಯ್ಕೆ ಮಾಡಿ ನೋಂದಾವಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಸುಮಾರು 45 ಸಾವಿರ ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ನೋಂದಾವಣೆ ಮಾಡಿಕೊಂಡಿದ್ದರು. ಆದರೆ 15 ಸಾವಿರ ಜನರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಮೋದಿ ಭೇಟಿಗೂ ಮುನ್ನ 90 ನಿಮಿಷಗಳ ಕಾಲ ಮನೋರಂಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ ಭಾರತದ ಅನೇಕ ಸಾಂಪ್ರದಾಯಿಕ ನೃತ್ಯ ಮನೋರಂಜನೆಗಳು ಪ್ರದರ್ಶನಗೊಂಡವು. ವಿಶೇಷವಾಗಿ ತುಳುನಾಡಿನ ಗಂಡುಕಲೆ ಯಕ್ಷಗಾನ ಮತ್ತು ಹುಲಿವೇಷ ಕುಣಿತವೂ ವೇದಿಕೆಯಲ್ಲಿ ಪ್ರದರ್ಶನಗೊಂಡಿತು. ನ್ಯೂಯಾರ್ಕ್ ಸಮಯ ಮಧ್ಯಾಹ್ನ 12 ಗಂಟೆಯಿಂದ 1.15 ರವರೆಗೆ ಮೋದಿಯವರು ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು.
ಭಾರತ ಮತ್ತು ಅಮೆರಿಕದ ಸಂಬಂಧ ವೃದ್ಧಿ, ಭಾರತಕ್ಕೆ ಅನಿವಾಸಿ ಭಾರತೀಯರ ಕೊಡುಗೆಯನ್ನು ಉಲ್ಲೇಖಿಸಿದ ಮೋದಿಯವರು ಅಮೆರಿಕದಲ್ಲಿ ಮುಂದಕ್ಕೆ ಭಾರತ ಸರಕಾರದ ವಿಶೇಷ 2 ಕಾನ್ಸುಲೇಟ್‌ಗಳನ್ನು ತೆರೆಯುವುದಾಗಿ ಘೋಷಿಸಿದರು. ಒಟ್ಟಿನಲ್ಲಿ ಮೋದಿ ಭೇಟಿ ಕಾರ್ಯಕ್ರಮಕ್ಕೆ ಅನಿವಾಸಿ ಭಾರತೀಯವರಿಂದ ಉತ್ತಮ ಸ್ಪಂದನೆ ದೊರೆತಿದ್ದು, ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಕಂಡಿದೆ. ಭಾರತೀಯನಾಗಿದ್ದುಕೊಂಡು ಅಮೆರಿಕದಲ್ಲಿ ಪ್ರಧಾನಿ ಮೋದಿಯವರಿಗೆ ದೊರೆಯುತ್ತಿರುವ ಗೌರವ ಪುರಸ್ಕಾರಕ್ಕಾಗಿ ನಾವೂ ಹೆಮ್ಮೆ ಪಡುತ್ತಿದ್ದೇವೆ. ಮೋದಿಜಿಯವರನ್ನು ಅತ್ಯಂತ ಹತ್ತಿರದಿಂದ ನೋಡಿ ಸ್ವಾಗತಿಸುವ ಸುಯೋಗ ನನ್ನ ಪಾಲಿಗೆ ಬಂದಿರುವುದಕ್ಕೆ ತುಂಬಾ ಖುಷಿಯಿದೆʼ ಎಂದು ವಿಪುಲ್ ರೈ ತಮ್ಮ ಅನುಭವವನ್ನು ʻಸುದ್ದಿʼಯೊಂದಿಗೆ ಹಂಚಿಕೊಂಡಿದ್ದಾರೆ.