ಉಪ್ಪಿನಂಗಡಿ: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಕಾಮರ್ಸ್ ಅಸೋಸಿಯೇಶನ್ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಶೈಕ್ಷಣಿಕ ಕೌಶಲ್ಯ ಮತ್ತು ಯಶಸ್ಸು ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಮುಖ್ಯ ಅತಿಥಿಯಾಗಿದ್ದ ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಅಝೀಝ್ ಬಸ್ತಿಕ್ಕಾರ್ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಹಾದಿಯಲ್ಲಿ ಸುಗಮವಾಗಿ ಸಾಗಬೇಕು. ನಾವು ಅಂದುಕೊಂಡ ಹಾಗೆ ಯಾವುದೂ ನಡೆಯುವುದಿಲ್ಲ. ಜೊತೆಗೆ ಅಬ್ದುಲ್ ಕಲಾಂರವರ ಸಾಧನೆಯನ್ನು ಮಾದರಿಯನ್ನಾಗಿರಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಇಬ್ರಾಹೀಂ ಎಂ., ಗುರಿ ತಲುಪಲು ಯೋಜನೆಯನ್ನು ಹಾಕಿಕೊಳ್ಳಬೇಕು. ಇದು ಸಾಧಿಸುವ ವಯಸ್ಸು. ಯಾರು ಶ್ರಮ ಪಡುತ್ತಾರೋ ಅವರಿಗೆ ಮುಂದಿನ ಜೀವನದಲ್ಲಿ ಸುಖವಿದೆ ಎಂದರು.
ಸಂಪನ್ಮೂಲ ವ್ಯಕ್ತಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಉಪನ್ಯಾಸಕ ಡಾ. ಹರಿಪ್ರಸಾದ್ ಎಸ್. ಮಾತನಾಡಿ, ಶೈಕ್ಷಣಿಕ ಕೌಶಲ್ಯ ಮತ್ತು ಯಶಸ್ಸು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ವಿದ್ಯಾರ್ಥಿನಿ ರಶ್ಮಿ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಫಾತಿಮತ್ ಸುಹೈರಾ ಸ್ವಾಗತಿಸಿದರು. ರೂಹಿನ್ ಆಯಿಷಾ ವಂದಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ನವ್ಯಶ್ರೀ ಸ್ವರ್ಗ ಕಾರ್ಯಕ್ರಮ ನಿರೂಪಿಸಿದರು.