ಉಪ್ಪಿನಂಗಡಿ: ಗತಿಸಿದ ಪಿತೃಗಳ ಮೋಕ್ಷಕ್ಕಾಗಿ ಪಿಂಡ ಪ್ರಧಾನ

0

ಉಪ್ಪಿನಂಗಡಿ: ಮಹಾಲಯ ಅಮವಾಸ್ಯೆಯ ಬುಧವಾರದಂದು ಗತಿಸಿದ ಪಿತೃಗಳ ಮೋಕ್ಷ ಪ್ರಾಪ್ತಿಗಾಗಿ ಸಾವಿರಾರು ಭಕ್ತಾದಿಗಳು ಉಪ್ಪಿನಂಗಡಿಯ ನೇತ್ರಾವತಿ -ಕುಮಾರಧಾರಾ ನದಿ ಸಂಗಮ ತಟದ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಪಿಂಡ ಪ್ರಧಾನ, ತಿಲಹೋಮಾದಿ ಕಾರ್ಯಗಳನ್ನು ನೆರವೇರಿಸಿದರು.


ಗತಿಸಿದ ಪಿತೃಗಳಿಗೆ ಸದ್ಗತಿ ಬಯಸಿ ಮಹಾಲಯ ಅಮವಾಸ್ಯೆಯ ದಿನ ಪಿಂಡ ಪ್ರಧಾನಾದಿ ಕಾರ್ಯಗಳನ್ನು ನೆರವೇರಿಸಿದರೆ, ಮೋಕ್ಷ ಪ್ರಾಪ್ತಿಯಾಗುತ್ತದೆ ಎನ್ನುವುದು ಸನಾತನ ನಂಬಿಕೆ. ಈ ನಂಬಿಕೆಯ ಆಧಾರದಲ್ಲಿ ಗತಿಸಿದ ಹಿರಿಯನ್ನು ಪ್ರತಿ ವರ್ಷವೂ ನೆನೆದು ಅವರ ಸದ್ಗತಿಗಾಗಿ ಪ್ರಾರ್ಥಿಸಿದರೆ ಅವರ ಸಂತತಿಗೂ ಶುಭ ಫಲವು ಲಭಿಸುವುದು ಎಂಬ ನಂಬಿಕೆಯ ನೆಲೆಯಲ್ಲಿ ಮಹಾಲಯ ಅಮವಾಸ್ಯೆಯು ವಿಶೇಷ ದಿನವಾಗಿದೆ. ಈ ನಿಟ್ಟಿನಲ್ಲಿ ಬುಧವಾರದಂದು ನಸುಕಿನಿಂದಲೇ ದೇವಾಲಯಕ್ಕೆ ಆಗಮಿಸಿದ ಭಕ್ತಾದಿಗಳು ತಮ್ಮ ತಮ್ಮ ಪಿತೃಗಳಿಗಾಗಿ ಅರ್ಚಕರ ಮುಖೇನ ತಿಲಹೋಮಾಧಿ ಕಾರ್ಯಗಳನ್ನು ನೆರವೇರಿಸಿ ಪಿಂಡ ಪ್ರಧಾನ ಸೇವೆಗೈದರು. ಪಿಂಡ ಪ್ರಧಾನ ಸೇವೆಗೈದ ಭಕ್ತಾದಿಗಳು ನೇತ್ರಾವತಿ ಕುಮಾರಧಾರಾ ನದಿ ಸಂಗಮ ಸ್ಥಳದಲ್ಲಿ ಪವಿತ್ರ ತೀರ್ಥ ಸ್ನಾನವನ್ನು ಮಾಡಿ ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.


ಪುತ್ತೂರು ಸಹಾಯಕ ಕಮಿಷನರ್ ಜುಬಿನ್ ಮೊಹಾಪಾತ್ರ ರವರು ಮುಂಜಾನೆಯೇ ದೇವಳಕ್ಕೆ ಆಗಮಿಸಿ, ತಮ್ಮ ಗತಿಸಿದ ಹಿರಿಯರಿಗೆ ಸದ್ಗತಿ ಬಯಸಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಉಳಿದಂತೆ ರಾಜ್ಯ , ಹೊರ ರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯ ಭಕ್ತಾದಿಗಳು ಆಗಮಿಸಿ ಶ್ರೀ ಕ್ಷೇತ್ರದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿದರು.


ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ ರಾಧಾಕೃಷ್ಣ ನಾೖಕ್ ನೇತೃತ್ವದ ಸಮಿತಿ ಸದಸ್ಯರು, ದೇವಾಲಯದ ವ್ಯವಸ್ಥಾಪಕ ವೆಂಕಟೇಶ್ ರಾವ್, ಸಿಬ್ಬಂದಿ ವರ್ಗ ಆಗಮಿಸಿದಂತಹ ಭಕ್ತಾದಿಗಳಿಗೆ ಸೂಕ್ತ ಅನುಕೂಲತೆಗಳನ್ನು ಒದಗಿಸುವಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here