ಗೆಜ್ಜೆಗಿರಿ ನಂದನ ಬಿತ್ತಲ್ ಎಂಬ ಹೆಸರು ಕೇಳುತ್ತಿದ್ದಂತೆ ಮೈ ರೋಮಾಂಚನಗೊಳ್ಳುತ್ತದೆ. ಕ್ಷೇತ್ರದ ಇತಿಹಾಸವನ್ನು ಕೇಳುವಾಗ ಅವಳಿ ವೀರಪುರುಷರ ಮೂಲಸ್ಥಾನ ಯಾವುದು ಎಂಬ ಪ್ರಶ್ನೆಗೂ ಉತ್ತರ ಸಿಗುತ್ತದೆ. ಅಂತಹ ಪುಣ್ಯ-ಪವಿತ್ರ ಭೂಮಿಯಲ್ಲಿ ದೇಯಿ ಬೈದೈತಿ – ಕೋಟಿ ಚೆನ್ನಯರ ಭವ್ಯ ಆಲಯ ನಿರ್ಮಾಣಗೊಂಡಿದೆ. ಕ್ಷೇತ್ರದ ನಿರ್ಮಾಣ-ಬ್ರಹ್ಮಕಲಶ ಕಾರ್ಯ ಇಡೀ ತುಳುನಾಡಿದ ಧಾರ್ಮಿಕ ಪರಂಪರೆಯಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿದ್ದು ಇಂದಿಗೂ ನಿತ್ಯ- ನಿರಂತರ ಕ್ಷೇತ್ರಕ್ಕೆ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವುದು ಗೆಜ್ಜೆಗಿರಿ ಕಾರಣಿಕ ಶಕ್ತಿಯನ್ನು ಜಗತ್ತಿಗೆ ಸಾರುತ್ತಿದೆ.
ಏರಾರ್ಜೆ ಬರ್ಕೆ ಎಂಬ ಪ್ರತಿಷ್ಠಿತ ಮನೆತನದ ನೆಲವೇ ಗೆಜ್ಜೆಗಿರಿ ನಂದನಬಿತ್ತಲ್, ಸಾವಿರಾರು ವರ್ಷಗಳ ಇತಿಹಾಸ ಇರುವ ಈ ಮನೆತನ ಪಡುಮಲೆ ಅರಸು ಬಳ್ಳಾಲರ ಸಂಸ್ಥಾನದಲ್ಲಿ ಮಹತ್ವದ ಸ್ಥಾನ ಮಾನ ಪಡೆದ ಮಣ್ಣು ಗುರು ಸಾಯನ ಬೈದ್ಯರು ಈ ಮನೆತನದಲ್ಲಿ ಯಜಮಾನರಾಗಿ ಮೆರೆದಿದ್ದು ಸುಮಾರು 500 ವರ್ಷಗಳ ಇತಿಹಾಸವನ್ನು ಕ್ಷೇತ್ರ ಪರಿಚಯಿಸುತ್ತದೆ. ಮಾತೆ ದೇಯಿ ಬೈದೈತಿಗೆ ಗುರು ಸಾಯನರು ಪುನರ್ಜನ್ಮ ನೀಡಿದ ನೆಲ ಗೆಜ್ಜೆಗಿರಿಯಾಗಿದ್ದು, ಕೋಟಿ ಚೆನ್ನಯರ ಜೀವನ ಕಥಾನಕವನ್ನು ಈ ಪುಣ್ಯಭೂಮಿ ಭಕ್ತ ವೃಂದಕ್ಕೆ ವಿವರಿಸುತ್ತದೆ.
ತುಳುನಾಡಿನ ಅವಳಿ ವೀರ ಪುರುಷರಾಗಿ ಮೆರೆದಾಡಿದ ಕೋಟಿ- ಚೆನ್ನಯರು ಬದುಕಿನ ಬಹುಪಾಲನ್ನು ಕಳೆದ ತಾಣವಾಗಿರುವ ಗೆಜ್ಜೆಗಿರಿಯು ವೀರರ ತಾಯಿ, ಮಾವನವರು ವಾಸಿಸಿದ್ದ ಕೌಟುಂಬದ ಮೂಲವಿದು. ಧರ್ಮದೈವ ಧೂಮಾವತಿಯ ತಾಣವಾಗಿಯೂ ಕಾರಣೀಕತೆಯನ್ನು ತೋರಿಸುತ್ತದೆ. ಒಟ್ಟಾರೆಯಾಗಿ ಹೇಳಬೇಕಾದರೆ ಕೋಟಿ ಚೆನ್ನಯರ ಪಾಲಿಗಿದು ಮೂಲಸ್ಥಾನವೇ ಆಗಿದೆ.
ಗೆಜ್ಜೆಗಿರಿಯ ಮಣ್ಣಲ್ಲಿ ಸತ್ಯಧರ್ಮ ಚಾವಡಿ
ಈ ಮೂರು ತಲೆಮಾರುಗಳ ಕಾರಣಿಕ ಶಕ್ತಿಗಳು ಮಾನವ ರೂಪದಲ್ಲಿ ವಾಸಿಸಿದ್ದ ಮನೆ ಪ್ರಸ್ತುತ ಸಂಪೂರ್ಣ ಪುನರುಥಾನಗೊಂಡು ಸತ್ಯಧರ್ಮ ಚಾವಡಿಯಾಗಿ ಕಂಗೊಳಿಸುತ್ತಿದೆ. ಆ ಕಾಲದ ಧರ್ಮದೈವ ಧೂಮಾವತಿ ಮತ್ತು ಸಪರಿವಾರ ದೈವಗಳ ತಾಣವೂ ಸುಂದರವಾಗಿ ನಿರ್ಮಾಣಗೊಂಡಿದೆ. ಚಾರಿತ್ರಿಕ ಸರೋಳಿ ಸೈಮಂಜ ಕಟ್ಟೆಗೆ ನವಸ್ಪರ್ಶವನ್ನು ಪಡೆದಿದೆ.
ಪಾರಂಪರಿಕ ಶೈಲಿಯಲ್ಲಿ ಪುನರ್ ನಿರ್ಮಾಣ ಗೊಂಡಿರುವ ದೇಯಿ ಮಾತೆಯ ಮಹಾಸಮಾಧಿಯು ಆಸ್ತಿಕ ಬಂಧುಗಳ ಮೈರೋಮಾಂಚನ ಗೊಳಿಸುತ್ತದೆ. ಸಾಯನ ಬೈದ್ಯರ ಗುರುಪೀಠವು ಗುರುಪರಂಪರೆಯ ಭಕ್ತಿಯನ್ನು ಇಮ್ಮಡಿಗೊಳಿಸುತ್ತದೆ. ಅವಳಿ ವೀರರಿಗೆ ಮೂಲ ಮಣ್ಣಲ್ಲಿ ಮೂಲಸ್ಥಾನ ಗರಡಿ ನಿರ್ಮಾಣಗೊಂಡಿದೆ. ಬೆರ್ಮೆರ್ ಗುಂಡವೂ ಮೂಡಿಬಂದಿದ್ದು ಸಮಗ್ರ ಮೂಲಸ್ಥಾನ ಭವ್ಯವಾಗಿ ಪುನರುತ್ಥಾನಗೊಂಡು ಭಕ್ತರ ಪಾಲಿಗೆ ಅಮೃತ ಸಂಜೀವಿನಿಯಾಗಿ ಹತ್ತೂರಿನ ಭಕ್ತರನ್ನೂ ತನ್ನತ್ತ ಕೈಬೀಸಿ ಕರೆಯುತ್ತಿದೆ.
ಇವತ್ತು ಗೆಜ್ಜೆಗಿರಿಯಲ್ಲಿ ನಡೆಯುತ್ತಿರುವ ಆರಾಧನೆ ಇದೇ ಮೂಲಸ್ಥಾನದ ಕಲ್ಪನೆಯಲ್ಲಿದೆ. ಇಲ್ಲಿ ಸಾಯನ ಗುರುಗಳು, ಸಹೋದರಿ ದೇಯಿ ಬೈದೈತಿ ಮತ್ತು ಅಳಿಯಂದಿರಾದ ಕೋಟಿ ಚೆನ್ನಯರ ಆರಾಧನೆ ನಡೆಯುತ್ತದೆ. ಈ ಶಕ್ತಿಗಳು ಅವತಾರ ರೂಪದಲ್ಲಿ ಬದುಕಿದ್ದಾಗ ನಂಬಿಕೊಂಡಿದ್ದ ಧರ್ಮದೈವ ಧೂಮಾವತಿಯ ಉಪಾಸನೆಯೂ ಇಲ್ಲಿದೆ. ಜತೆಗೆ ನಾಗಾರಾಧನೆ, ಸಪರಿವಾದ ದೈವಗಳ ಉಪಾಸನೆಯೂ ಇದೆ. ಒಟ್ಟಾರೆಯಾಗಿ ಹೇಳುವುದಿದ್ದರೆ ತುಳುನಾಡಿನ ಮೂಲಸ್ಥಾನ (ತರವಾಡು) ಕಲ್ಪನೆಯ ಸಮಗ್ರ ಚಿತ್ರಣ ಗೆಜ್ಜೆಗಿರಿಯಲ್ಲಿದೆ.