ಅ.9: ಕಾಫಿ ಬೆಳೆಯ ಬಗ್ಗೆ ಮಾಹಿತಿ ಕಾರ್ಯಾಗಾರ

0

ಉಪ್ಪಿನಂಗಡಿ: ಅಡಕೆ ಬೆಳೆಗಾರರಿಗೆ ಬೆಲೆ ಕುಸಿತದ ಹಾಗೂ ರೋಗ ಬಾಧೆಯ ಭೀತಿ ಕಾಡುತ್ತಿರುವ ನಡುವೆ ದ.ಕ ಜಿಲ್ಲೆಯ ಪುತ್ತೂರು, ಬೆಳ್ತಂಗಡಿ, ಹಾಗೂ ಕಡಬ ತಾಲೂಕಿನಲ್ಲಿ ಕಾಫಿ ಬೆಳೆ ಬೆಳೆಯಲು ವಿಪುಲ ಅವಕಾಶಗಳಿದ್ದು, ಈ ಬಗ್ಗೆ ಸರ್ವೇ ಕಾರ್ಯ ನಡೆಸಿ ಕಾಫಿ ಬೋರ್ಡಿನ ಕಚೇರಿ ಆರಂಭಿಸುವ ಸಾಧ್ಯಾಸಾಧ್ಯತೆಯನ್ನು ಅಧ್ಯಯನ ಮಾಡಲು ಅ.9 ರಂದು ಕೇಂದ್ರ ಸರಕಾರದ ಕಾಫಿ ಬೋರ್ಡಿನ ಮಡಿಕೇರಿಯ ವಿಸ್ತರಣಾಧಿಕಾರಿಗಳ ತಂಡ ಉಪ್ಪಿನಂಗಡಿಗೆ ಭೇಟಿ ನೀಡಲಿದೆ.


ಈಗಾಗಲೇ ಕಾಫಿ ಬೆಳೆಯನ್ನು ಬೆಳೆಯುತ್ತಿರುವ ಉಪ್ಪಿನಂಗಡಿಯ ಪಂಜಳದ ಪ್ರಗತಿಪರ ಕೃಷಿಕ ಚಂದ್ರಶೇಖರ್ ತಾಳ್ತಜೆ ರವರ ತೋಟಕ್ಕೆ ಭೇಟಿ ನೀಡಲಿರುವ ಈ ತಂಡ ತೋಟದಲ್ಲಿ ಕಾಫಿ ಗಿಡಗಳ ವೀಕ್ಷಣೆ ಮತ್ತು ಮಾಹಿತಿ ಸಭೆಯನ್ನು ನಡೆಸಲಿದ್ದಾರೆ. ಪೂರ್ವಾಹ್ನ 11 ಗಂಟೆಯಿಂದ ನಡೆಯುವ ಈ ಕಾರ್ಯಕ್ರಮದಲ್ಲಿ ಆಸಕ್ತರಿಗೆ ಭಾಗವಹಿಸಲು ಮುಕ್ತ ಅವಕಾಶವಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಆಸಕ್ತ ಕೃಷಿಕರು ಚಂದ್ರಶೇಖರ ತಾಳ್ತಜೆ ( ಮೊ.ಸಂ. 9449200681 ) ಅವರನ್ನು ಸಂಪರ್ಕಿಸಬಹುದು. ಈ ಭಾಗದಲ್ಲಿ ಕಾಫಿ ಬೆಳೆ ಬೆಳೆಯುತ್ತಿರುವ ಕೃಷಿಕರ ತೋಟಕ್ಕೂ ಭೇಟಿ ನೀಡಲು ಈ ತಂಡ ಸಿದ್ಧವಿದೆ.


ಅಡಕೆಗೆ ಬೇರು ಹುಳ, ಎಲೆಚುಕ್ಕಿ ರೋಗ, ವೈರಸ್ ಇತ್ಯಾದಿ ಹೊಸ ರೋಗಗಳು ಕಾಣಿಸಿಕೊಂಡಿದ್ದು, ಬೆಳೆಗಾರರ ಶ್ರಮವನ್ನು ವ್ಯರ್ಥಗೊಳಿಸುವ ಭೀತಿ ಆವರಿಸಿದೆ. ಈ ಹಿನ್ನೆಲೆಯಲ್ಲಿ ಪರ್ಯಾಯ ಬೆಳೆಗಳನ್ನು ಬೆಳೆಸುವ ಅನಿವಾರ್ಯತೆ ಕೃಷಿಕರದ್ದಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮೇಲೆ ಉಲ್ಲೇಖೀಸಿದ ತಾಲೂಕುಗಳಲ್ಲಿ ಕಾಫಿ ಬೆಳೆಯನ್ನು ಉತ್ತಮವಾಗಿ ಬೆಳೆಸುವ ಸಾಧ್ಯತೆಗಳಿರುವುದರಿಂದ ಈ ಮಾಹಿತಿ ಕಾರ್ಯಾಗಾರ ಕೃಷಿಕರ ಪಾಲಿಗೆ ವರದಾನವಾಗಲಿದೆ.


ಯಾವುದೇ ಕಾಳಜಿ ಅಥವಾ ನಿರ್ವಹಣೆಯನ್ನು ಮಾಡದೆಯೂ ನೆಡಲಾದ ಕಾಫಿ ಗಿಡದಲ್ಲಿ ಉತ್ತಮ ಫಸಲು ಲಭಿಸುತ್ತಿದ್ದು, ಘಟ್ಟ ಪ್ರದೇಶದಲ್ಲಿ ಕಾಫಿ ಬೆಳೆಗೆ ನಿಡುವ ಪ್ರಾಧಾನ್ಯತೆ ಹಾಗೂ ಉತ್ತಮ ನಿರ್ವಹಣೆಯನ್ನು ಇಲ್ಲಿಯೂ ತೋರಿದರೆ ಇನ್ನಷ್ಟು ಉತ್ತಮ ಇಳುವರಿಯನ್ನು ಪಡಲು ಸಾಧ್ಯ ಎಂದು ಈಗಾಗಲೇ ಉಪ್ಪಿನಂಗಡಿಯಲ್ಲಿ ಕಾಫಿ ಬೆಳೆಯನ್ನು ಬೆಳೆದು ಗಮನ ಸೆಳೆದ ಚಂದ್ರಶೇಖರ್ ತಾಳ್ತಜೆಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here