ಸಾಲ ಮರು ಪಾವತಿಸಲು ತಿಳಿಸಲೆಂದು ಮನೆಗೆ ಹೋಗಿದ್ದ ವೇಳೆ ಪಿಸ್ತೂಲ್ ತೋರಿಸಿ ಬೆದರಿಕೆ:ದೂರು,ಪ್ರತಿ ದೂರಿನ ಪ್ರಕರಣ-ಆರೋಪಿಗಳಿಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು

0

ಪುತ್ತೂರು:ಬ್ಯಾಂಕಿನಿಂದ ಪಡೆದುಕೊಂಡ ಸಾಲವನ್ನು ಮರುಪಾವತಿ ಮಾಡುವಂತೆ ತಿಳಿಸಲೆಂದು ಮನೆಗೆ ಹೋಗಿದ್ದ ಸಂದರ್ಭ ಪಿಸ್ತೂಲ್ ತೋರಿಸಿ ಬ್ಯಾಂಕ್ ಸಿಬ್ಬಂದಿಗಳಿಗೆ ಬೆದರಿಕೆಯೊಡ್ಡಿದ್ದ ಆರೋಪದ ಪ್ರಕರಣ ಮತ್ತು ಮನೆಗೆ ಅಕ್ರಮ ಪ್ರವೇಶಿಸಿ, ಮಾನಭಂಗಕ್ಕೆ ಯತ್ನಿಸಿ ಬೆದರಿಕೆಯೊಡ್ಡಿರುವ ಪ್ರತಿ ದೂರಿನ ಪ್ರಕರಣದಲ್ಲಿ ಆರೋಪಿಗಳು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪುತ್ತೂರು ಜಿಲ್ಲಾ ನ್ಯಾಯಾಲಯ ಮಾನ್ಯ ಮಾಡಿದ್ದು ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಅ.10ಕ್ಕೆ ಆದೇಶಿಸಿದೆ.


ಪುತ್ತೂರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ರಿಲೇಶನ್‌ಶಿಪ್ ಮ್ಯಾನೇಜರ್ ಚಿಕ್ಕಮಗಳೂರು ಕೊಪ್ಪ ನಿವಾಸಿ ಚೈತನ್ಯ ಎಚ್.ಸಿ.ಎಂಬವರು ನೀಡಿದ ದೂರಿನಲ್ಲಿ ಆರೋಪಿಗಳಾಗಿ ಅಖಿಲೇಶ್ ಮತ್ತು ಕೃಷ್ಣಕಿಶೋರ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿತ್ತು.ಅವರು ತಮ್ಮ ಪರ ವಕೀಲ ಮಹೇಶ್ ಕಜೆ ಅವರ ಮೂಲಕ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ್ದ ನ್ಯಾಯಾಲಯ ಆರಂಭದಲ್ಲಿ, ಮುಂದಿನ ವಿಚಾರಣೆ ತನಕ ಬಂಧನದಂತಹ ಯಾವುದೇ ಬಲವಂತದ ಕ್ರಮಕೈಗೊಳ್ಳದಂತೆ ಪೊಲೀಸರಿಗೆ ಸೂಚನೆ ನೀಡಿ, ವಿಚಾರಣೆಯನ್ನು ಅ.4ಕ್ಕೆ ಮುಂದೂಡಿತ್ತು.ಅ.4ರಂದು ವಿಚಾರಣೆ ನಡೆದು ಅ.9ಕ್ಕೆ ಮುಂದೂಡಿಕೆಯಾಗಿತ್ತು.ಇದೀಗ ನ್ಯಾಯಾಲಯ ಆರೋಪಿಗಳಾದ ಅಖಿಲೇಶ್ ಮತ್ತು ಕೃಷ್ಣಕಿಶೋರ್‌ರವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಅ.10ರಂದು ಆದೇಶಿಸಿದೆ.


ಪ್ರತಿದೂರಿನ ಪ್ರಕರಣ:
ಇದೇ ಪ್ರಕರಣದಲ್ಲಿ ಕೀರ್ತಿ ಅಖಿಲೇಶ್ ಎಂಬವರು ನೀಡಿದ್ದ ದೂರಿನ ಮೇರೆಗೆ ಎಸ್‌ಬಿಐನ ಚೈತನ್ಯ ಎಚ್.ಸಿ.,ಸಹೋದ್ಯೋಗಿಗಳಾದ ಆಕಾಶ್‌ಚಂದ್ರ ಬಾಬು ಮತ್ತು ದಿವ್ಯಶ್ರೀ ಎಂಬವರ ವಿರುದ್ಧವೂ ಪ್ರಕರಣ ದಾಖಲಾಗಿತ್ತು.ಈ ಪ್ರಕರಣದ ಆರೋಪಿಗಳಿಗೂ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

LEAVE A REPLY

Please enter your comment!
Please enter your name here