ಕುಂಬ್ರದಲ್ಲಿ ಮನರಂಜಿಸಿದ ಮಾರ್ನೆಮಿದ ಗೌಜಿ

0

ಪುತ್ತೂರು: ನವರಾತ್ರಿಯ ಸಂದರ್ಭದಲ್ಲಿ ಬರುವ ಮಾರ್ನೆಮಿ ವೇಷಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಬಾಂತಲಪ್ಪು ಜನಸೇವಾ ಸಮಿತಿ ಕುಂಬ್ರ ಆಯೋಜಿಸಿದ್ದ 2 ನೇ ವರ್ಷದ ಕುಂಬ್ರದ ಮಾರ್ನೆಮಿದ ಗೌಜಿ ಆಯ್ದ ಸ್ಥಳೀಯ ಮಾರ್ನೆಮಿ ವೇಷಧಾರಿಗಳ ಗುಂಪು ಸ್ಪರ್ಧೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಅ.10 ರಂದು ಕುಂಬ್ರ ಜಂಕ್ಷನ್‌ನಲ್ಲಿರುವ ಕುಂಬ್ರ ಚೆನ್ನಪ್ಪ ರೈ ಮತ್ತು ಕುಂಬ್ರ ಜತ್ತಪ್ಪ ರೈ ಸ್ಮಾರಕ ಅಶ್ವತ್ಥ ಕಟ್ಟೆಯ ಬಳಿ ನಡೆಯಿತು.

ಕಿಕ್ಕಿರಿದ ಜನಸಂದಣಿಯೊಂದಿಗೆ ಸ್ಥಳೀಯ ಸುಮಾರು 41 ಮಾರ್ನೆಮಿ ವೇಷಧಾರಿಗಳ ತಂಡ ಸ್ಪರ್ಧೆಯಲ್ಲಿ ಪಾಲು ಪಡೆಯಿತು. ಕಾರ್ಯಕ್ರಮವನ್ನು ಬನ್ನೂರು ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್‌ರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಸ್ಪರ್ಧೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಾಂತಲಪ್ಪು ಜನಸೇವಾ ಸಮಿತಿಯವರು ಒಂದು ಒಳ್ಳೆಯ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ. ಮಾರ್ನೆಮಿಯ ಸಂದರ್ಭದಲ್ಲಿ ಬರುವ ಗ್ರಾಮೀಣ ಪ್ರತಿಭೆಗಳ ಹುಲಿ,ಕರಡಿ,ಸಿಂಹ ಇತ್ಯಾದಿ ವೇಷಗಳಿಗೆ ಒಂದು ವೇದಿಕೆಯನ್ನು ನಿರ್ಮಿಸಿಕೊಡುವ ಮೂಲಕ ಅವರ ಪ್ರತಿಭೆಗಳಿಗೆ ಪ್ರೋತ್ಸಾಹ ಕೊಡುವ ಕೆಲಸ ಆಗುತ್ತಿದೆ. ಪ್ರತಿಯೊಂದು ಧರ್ಮವನ್ನು ಗೌರವಿಸುವ ಮೂಲಕ ಎಲ್ಲಾ ಧರ್ಮದವರು ಸೇರಿಕೊಂಡಿರುವ ಬಾಂತಲಪ್ಪು ಜನಸೇವಾ ಸಮಿತಿಯಿಂದ ಮೂಡಿಬಂದಿರುವ ಇಂತಹ ಕಾರ್ಯಕ್ರಮಗಳು ಜನರಿಗೆ ಮನರಂಜನೆಯೊಂದಿಗೆ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿ ಶುಭ ಹಾರೈಸಿದರು.


ಅತಿಥಿಗಳಾಗಿದ್ದ ಕ್ಯಾನ್ಸರ್ ತಜ್ಞ ಡಾ.ರಘು ಬೆಳ್ಳಿಪ್ಪಾಡಿಯವರು ಮಾತನಾಡಿ, ದೇವಿಯನ್ನು ನೆನಪಿಸುವ ದಿನಗಳೇ ನವರಾತ್ರಿಯಾಗಿದೆ. ನವ ಎಂಬ ಶಬ್ದಕ್ಕೆ ವಿಶೇಷ ಅರ್ಥವಿದೆ. ನಾವೆಲ್ಲರೂ 9 ತಿಂಗಳು ತಾಯಿ ಗರ್ಭದಲ್ಲಿದ್ದು ಜನ್ಮ ಪಡೆದವರಾಗಿದ್ದೇವೆ. ಬಾಂತಲಪ್ಪ ಜನಸೇವಾ ಸಮಿತಿಯವರು ಮಾರ್ನೆಮಿ ವೇಷಗಳಿಗೆ ಪ್ರೋತ್ಸಾಹ ಕೊಡುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿ ಶುಭ ಹಾರೈಸಿದರು.

ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ, ಒಂದು ಒಳ್ಳೆಯ ಕಾರ್ಯಕ್ರಮ ಇದಾಗಿದೆ. ತುಳುನಾಡಿನ ಸಂಸ್ಕೃತಿಯನ್ನು ಉಳಿಸುವ ಮಾರ್ನೆಮಿಯ ವೇಷಗಳಿಗೆ ಪ್ರೋತ್ಸಾಹ ಕೊಡುವ ಕೆಲಸ ಬಾಂತಲಪ್ಪು ಜನಸೇವಾ ಸಮಿತಿಯಿಂದ ನಡೆದಿದೆ. ಸೌಹಾರ್ದತೆಯ ಕೂಟ ಇದಾಗಿದೆ. ಅನೇಕ ಕಲಾವಿದರು ಅದರಲ್ಲೂ ವಿದ್ಯಾರ್ಥಿಗಳು ಕೂಡ ವೇಷ ಹಾಕಿ ಅದ್ಭುತವಾಗಿ ನರ್ತಿಸಿದ್ದಾರೆ. ಸನ್ಮಾನ ಸ್ವೀಕರಿಸಿದ ಸುದ್ದಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಯು.ಪಿ.ಶಿವಾನಂದರವರು ಮಾತನಾಡಿ, ಬಾಂತಲಪ್ಪು ಜನಸೇವಾ ಸಮಿತಿಯವರು ಮಾಡಿದ ಒಂದು ಅತ್ಯಂತ ಒಳ್ಳೆಯ ಕಾರ್ಯಕ್ರಮ ಇದಾಗಿದೆ. ಕುಂಬ್ರ ದುರ್ಗಾಪ್ರಸಾದ್ ರೈಯವರು ಕುಂಬ್ರದ ಹುಲಿ ಮತ್ತು ಸಿಂಹ ಆಗಿದ್ದಾರೆ. ಜಗತ್ತಿಗೆ ಒಂದು ಮಾದರಿ ಆಗುವ ಕಾರ್ಯಕ್ರಮವನ್ನು ಆಯೋಜಿಸಿರುವುದು ಖುಷಿ ತಂದಿದೆ ಎಂದು ಹೇಳಿ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು.


ಸಾಧಕರಿಗೆ ಸನ್ಮಾನ
ಸುದ್ದಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಯು.ಪಿ.ಶಿವಾನಂದ, ಹುಲಿ, ಸಿಂಹ, ಕರಡಿ ವೇಷಧಾರಿಗಳಿಗೆ ಅಂಗಿ ಹೊಲಿದು ಕೊಡುತ್ತಿದ್ದ ಹಿರಿಯ ಟೈಲರ್ ವಿಶ್ವನಾಥ ರೈ(ಗಂಗಣ್ಣ ಟೈಲರ್) ಹಾಗೂ ಒಳಮೊಗ್ರು ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ಕಾರ್ಯದರ್ಶಿ ಶೇಖರ ರೈ ಕುರಿಕ್ಕಾರರವರುಗಳಿಗೆ ಈ ಸಂದರ್ಭದಲ್ಲಿ ಶಾಲು,ಪೇಟಾ,ಸ್ಮರಣಿಕೆ, ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು.


ಕಾರ್ಯಕ್ರಮದಲ್ಲಿ ಕೋಟಿ ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ರೈ, ಪ್ರಗತಿಪರ ಕೃಷಿಕ ವಾಸು ಪೂಜಾರಿ ಗುಂಡ್ಯಡ್ಕ, ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ಕಾರ್ಯಾಧ್ಯಕ್ಷ ಎ.ಕೆ ಜಯರಾಮ ರೈ, ಕುಂಬ್ರ ಇಂಡೇನ್ ಗ್ಯಾಸ್ ಮಾಲಕ, ಉದ್ಯಮಿ ಬೂಡಿಯಾರ್ ರಾಧಾಕೃಷ್ಣ ರೈ, ಕುಂಬ್ರ ಲಕ್ಷ್ಮೀ ಮೆಡಿಕಲ್‌ನ ಡಾ.ಸುಭಾಷ್ ರೈ, ರೋಟರಿ ಕ್ಲಬ್ ಬೀರಮಲೆ ಹಿಲ್ಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಆಕರ್ಷಣ್ ಮಾಲಕ, ಉದ್ಯಮಿ ಅಹಮ್ಮದ್ ಸಾದಿಕ್, ಸಹಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಮೌರೀಸ್ ಮಸ್ಕರೇನಸ್, ಉದ್ಯಮಿ ರೋಶನ್ ರೈ ಬನ್ನೂರು, ಕುಂಬ್ರ ಮಾತೃಶ್ರೀ ಅರ್ಥ್‌ಮೂವರ‍್ಸ್ ಮಾಲಕ, ಉದ್ಯಮಿ ಮೋಹನದಾಸ ರೈ ಕುಂಬ್ರ, ಕುಂಬ್ರ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಮೋನಪ್ಪ ಪೂಜಾರಿ ಬಡಕ್ಕೋಡಿ, ಕುಂಬ್ರ ಮೇಗಿನಗುತ್ತು ಸಂತೋಷ್ ರೈ ಉಪಸ್ಥಿತರಿದ್ದರು.


ಭರತನಾಟ್ಯ ಕಲಾವಿದೆ ರಶ್ಮಿ ಪ್ರಾರ್ಥಿಸಿದರು. ಬಾಂತಲಪ್ಪು ಜನಸೇವಾ ಸಮಿತಿಯ ಅಧ್ಯಕ್ಷ ಎ.ರಕ್ಷಿತ್ ರೈ ಮುಗೇರು ಸ್ವಾಗತಿಸಿದರು. ಗೌರವಾಧ್ಯಕ್ಷ ಕುಂಬ್ರ ದುರ್ಗಾಪ್ರಸಾದ್ ರೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಅಶೋಕ್ ಪೂಜಾರಿ ಬೊಳ್ಳಾಡಿ ವಂದಿಸಿದರು. ಹರೀಶ್ ರೈ ಮುಗೇರು ಮತ್ತು ವಿಶ್ವನಾಥ ಗೌಡ ಬೊಳ್ಳಾಡಿ ಕಾರ್ಯಕ್ರಮ ನಿರೂಪಿಸಿದರು.


ಬಾಂತಲಪ್ಪು ಜನಸೇವಾ ಸಮಿತಿ ಉಪಾಧ್ಯಕ್ಷ ವಿನೋದ್ ಶೆಟ್ಟಿ ಮುಡಾಲ, ಸಂಚಾಲಕ ಶಶಿಕಿರಣ್ ರೈ ನೂಜಿಬೈಲು, ಕೋಶಾಧಿಕಾರಿ ಅಶ್ರಫ್ ಉಜಿರೋಡಿ, ಸಂಘಟನಾ ಕಾರ್ಯದರ್ಶಿ ಶೀನಪ್ಪ ನಾಯ್ಕ ಬೊಳ್ಳಾಡಿ ಮತ್ತು ಮಹಮ್ಮದ್ ಬೊಳ್ಳಾಡಿ, ಜತೆ ಕಾರ್ಯದರ್ಶಿ ಶಾರದಾ ಚಿನ್ನಯ ಆಚಾರ್ಯ, ಸಹ ಕಾಯದರ್ಶಿಗಳಾದ ಸುಂದರಿ ಪರ್ಪುಂಜ, ಚಿತ್ರ ಬಿ.ಸಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಕೆ.ಶೇಖರ ರೈ ಕುರಿಕ್ಕಾರ, ಬಶೀರ್ ಕೌಡಿಚ್ಚಾರ್,ಸಂತೋಷ್ ಭಂಡಾರಿ ಚಿಲ್ಮೆತ್ತಾರು,ವಸಂತ ಶೆಟ್ಟಿ ಕಲ್ಲಡ್ಕ, ಮಾಧವ ಅಜಲಡ್ಕ, ಅಶ್ರಫ್ ಶೇಖಮಲೆ, ಶಮಿತ್ ರೈ ಕುಂಬ್ರ, ಬದ್ರುನ್ನೀಸಾ ಪರ್ಪುಂಜ, ಮುನೀರ್ ಉಜಿರೋಡಿ, ಸಂಜೀವ ರೈ ಕೋಡಿಬೈಲು, ಹರ್ಷಿತ್ ನಾಯ್ಕ್ ಬೈರಮೂಲೆ, ಹುಕ್ರ ಬೊಳ್ಳಾಡಿ, ಅಜೀಜ್ ನೀರ್ಪಾಡಿ, ನಾಸಿರ್ ಮುಗೇರು, ಚೆನ್ನ ಬಿಜಳರವರುಗಳು ಉಪಸ್ಥಿತರಿದ್ದರು.

ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಏಕೈಕ ಪತ್ರಿಕೆ ‘ಸುದ್ದಿ’
ಸನ್ಮಾನ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಪಂಜಿಗುಡ್ಡೆ ಈಶ್ವರ ಭಟ್‌ರವರು ಬಾಂತಲಪ್ಪು ಜನಸೇವಾ ಸಮಿತಿಯವರು ಸುದ್ದಿ ಪತ್ರಿಕೆಯ ಡಾ.ಯು.ಪಿ.ಶಿವಾನಂದರಿಗೆ ಸನ್ಮಾನ ಇಟ್ಟುಕೊಂಡಿರುವುದು ಖುಷಿ ಕೊಟ್ಟಿದೆ. ಏಕೆಂದರೆ ಇಂದಿನ ಕಾಲದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವ ಏಕೈಕ ಪತ್ರಿಕೆ ಸುದ್ದಿ ಆಗಿದೆ. ಇದಕ್ಕೆ ನಾವೆಲ್ಲರೂ ಪ್ರೋತ್ಸಾಹ ನೀಡಬೇಕು ಎಂದರು. ಕಾವು ಹೇಮನಾಥ ಶೆಟ್ಟಿಯವರು ಪ್ರತಿಕ್ರಿಯೆ ನೀಡಿ, ಭಾರತ ದೇಶದಲ್ಲೇ ಒಂದು ತಾಲೂಕಿನಲ್ಲಿ ಎಲ್ಲಾ ಮಾಹಿತಿಗಳನ್ನು ಕೊಡುವ ಪತ್ರಿಕೆ ಬೇರೆಲ್ಲೂ ಸಿಗಲ್ಲ ಎಂಬುದು ನನ್ನ ಅಭಿಪ್ರಾಯ. ಇದಲ್ಲದೆ ಸಮಾಜದ ಅನೇಕ ಪಿಡುಗುಗಳಾದ ಬಲತ್ಕಾರದ ಬಂದ್, ಭ್ರಷ್ಟಾಚಾರ ಇತ್ಯಾದಿಗಳ ವಿರುದ್ಧ ಹೋರಾಡುತ್ತಿರುವ ಪತ್ರಿಕೆ ಇದಾಗಿದೆ ಎಂದು ಹೇಳಿದರು.

ವೇಷಧಾರಿಗಳ 41 ತಂಡ ಭಾಗಿ
ಪುತ್ತೂರು, ಸುಳ್ಯ, ಬೆಳ್ಳಾರೆ, ಈಶ್ವರಮಂಗಲ, ಕಾಣಿಯೂರು, ಸವಣೂರು, ಬೆಟ್ಟಂಪಾಡಿ ಸೇರಿದಂತೆ ವಿವಿಧ ಭಾಗದ ಸುಮಾರು 41 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ವಿಶೇಷವಾಗಿ ಮೋಹನ್ ಆಳ್ವ ಮುಂಡಾಳ ಮತ್ತು ನೇಮಾಕ್ಷ ಸುವರ್ಣರವರ ಜುಗಲ್‌ಬಂದಿ ನಿರೂಪಣೆ ಕೇಳುವಂತಿತ್ತು. ಗಂತ್‌ದ ಗುರಿಕ್ಕಾರರಾಗಿ ನಾರಾಯಣ ದರ್ಬೆತ್ತಡ್ಕ ಹಾಗೂ ಚೆನ್ನ ಬಿಜಳ ಸಹಕರಿಸಿದ್ದರು. ಕಳೆದ ವರ್ಷ ಬಾಬು ದರ್ಬೆತ್ತಡ್ಕರವರು ಗಂತ್‌ದ ಗುರಿಕ್ಕಾರರವರು ಸಹಕರಿಸಿದ್ದರು. ಅವರ ನಿಧನರಾಗಿದ್ದು ಅವರಿಗೆ ಈ ಸಂದರ್ಭದಲ್ಲಿ 1 ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿ ಅವರ ಮನೆಯವರಿಗೆ ದೀಪವನ್ನು ಹಚ್ಚಿ ಹಸ್ತಾಂತರಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.

ವಿಜೇತ ತಂಡಗಳು
ಪ್ರತಿ ತಂಡಗಳಿಗೆ 8 ನಿಮಿಷಗಳ ಕಾಲವಕಾಶ ನೀಡಲಾಗಿತ್ತು. ವೇಷಧಾರಿ ತಂಡಗಳ ಕುಣಿತ ಶೈಲಿ ಮತ್ತು ಬಣ್ಣಗಾರಿಕೆ ಹಾಗೂ ಇನ್ನಿತರ ವಿಶೇಷತೆಗಳನ್ನು ನೋಡಿಕೊಂಡು ವಿಜೇತ ತಂಡಗಳನ್ನು ಆಯ್ಕೆ ಮಾಡಲಾಗಿತ್ತು. ಪ್ರಥಮ ಸ್ಥಾನವನ್ನು ಶ್ರೀ ದುರ್ಗಾ ಫ್ರೆಂಡ್ಸ್ ಪುಣ್ಚಪ್ಪಾಡಿ ಪಡೆದುಕೊಂಡರೆ ಉಳಿದಂತೆ ರನ್ನರ್ ಅಪ್ ಆಗಿ ಟೀಮ್ ಕುರಿಯ ಮತ್ತು ಎಸ್.ಕೆ.ಫ್ರೆಂಡ್ಸ್ ಬೂಡು ಬೆಳ್ಳಾರೆ ಪಡೆದುಕೊಂಡಿತು. ಪ್ರಥಮ ಬಹುಮಾನವಾಗಿ 2 ಮುಡಿ ಅಕ್ಕಿ ಹಾಗೂ ಉಳಿದಂತೆ ತಲಾ 1 ಮುಡಿ ಅಕ್ಕಿ ನೀಡಲಾಗಿದೆ. ಇದಲ್ಲದೆ ಭಾಗವಹಿಸಿದ ಪ್ರತಿ ತಂಡಗಳಿಗೆ ತಲಾ ರೂ.2 ಸಾವಿರ ನಗದು ಹಾಗೂ ಸ್ಮರಣಿಕೆ ನೀಡಿ ಪ್ರೋತ್ಸಾಹಿಸಲಾಯಿತು.


‘ ಗ್ರಾಮೀಣ ಪ್ರದೇಶದ ಮಾರ್ನೆಮಿ ವೇಷಧಾರಿಗಳಿಗೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಕಳೆದ ವರ್ಷ ಆರಂಭ ಮಾಡಿದ ಕುಂಬ್ರದ ಮಾರ್ನೆಮಿದ ಗೌಜಿ ಎರಡನೇ ವರ್ಷಕ್ಕೆ ಕಾಲಿಟ್ಟಿದ್ದು ಕಳೆದ ವರ್ಷ 19 ತಂಡಗಳು ಭಾಗವಹಿಸಿದ್ದು ಈ ವರ್ಷ 41 ತಂಡಗಳು ಭಾಗವಹಿಸಿದ್ದು ಖುಷಿ ಕೊಟ್ಟಿದೆ. ಎಲ್ಲರಿಗೂ ಧನ್ಯವಾದಗಳೊಂದಿಗೆ ಶ್ರೀದೇವಿಯು ಒಳ್ಳೆಯದನ್ನು ಕರುಣಿಸಲಿ..’
ಎ.ರಕ್ಷಿತ್ ರೈ ಮುಗೇರು, ಅಧ್ಯಕ್ಷರು,ಬಾಂತಲಪ್ಪು ಜನಸೇವಾ ಸಮಿತಿ ಕುಂಬ್ರ

LEAVE A REPLY

Please enter your comment!
Please enter your name here