





ವಿಟ್ಲಕ್ಕೆ ಪ್ರಕಾಶ್ ದೇವಾಡಿಗ , ಉಪ್ಪಿನಂಗಡಿಗೆ ಹೆಚ್.ಇ. ನಾಗರಾಜ್, ರವಿ ಬಿ.ಎಸ್.ಬಂಟ್ವಾಳ ಗ್ರಾಮಾಂತರ ಠಾಣೆಗೆ


ವಿಟ್ಲ: ವಿಟ್ಲ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಹೆಚ್.ಇ. ನಾಗರಾಜ್ ರವರನ್ನು ಉಪ್ಪಿನಂಗಡಿ ವೃತ್ತನಿರೀಕ್ಷಕರಾಗಿ ವರ್ಗಾಯಿಸಲಾಗಿದ್ದು, ಉಪ್ಪಿನಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್.ರವರನ್ನು ಬಂಟ್ವಾಳ ಗ್ರಾಮಾಂತರ ಇನ್ಸ್ ಪೆಕ್ಟರ್ ಆಗಿ ವರ್ಗಾವಣೆ ಮಾಡಲಾಗಿದೆ. ಕಾರವಾರದ ಕದ್ರದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಆಗಿದ್ದ ಪ್ರಕಾಶ್ ದೇವಾಡಿಗರನ್ನು ವಿಟ್ಲ ಠಾಣಾ ಇನ್ಸ್ ಪೆಕ್ಟರ್ ಆಗಿ ವರ್ಗಾಣೆಗೊಳಿಸಿ ಆದೇಶ ಹೊರಡಿಸಲಾಗಿದೆ.





ಪ್ರಕಾಶ್ ದೇವಾಡಿಗರವರು 1996ರಲ್ಲಿ ಮಂಗಳೂರು ಸಂಚಾರಿ ಠಾಣೆಯಲ್ಲಿ ಕಾನ್ಸ್ ಟೇಬಲ್ ಆಗಿ ಕರ್ತವ್ಯ ಆರಂಭಿಸಿದರು. ಆ ಬಳಿಕ ಮಂಗಳೂರಿನ ಪಾಂಡೇಶ್ವರ ಠಾಣೆ, ಹೆಬ್ರಿ ನಕ್ಸಲ್ ಪಡೆ, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಪಿ.ಎಸ್.ಐ. ಪರೀಕ್ಷೆ ಬರೆದು ಉತ್ತೀರ್ಣರಾಗಿ ಗುಲ್ಬರ್ಗದಲ್ಲಿ ತರಬೇತಿ ಪಡೆದು ದಾರವಾಡ ಜಿಲ್ಲೆಯ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪಿ.ಎಸ್.ಐ. ಆಗಿ ಪ್ರೊಬೇಷನರಿ ಕರ್ತವ್ಯವನ್ನು ಆರಂಭಿಸಿದರು. ಅಲ್ಲಿಂದ ಕುಮುಟಾ ಕರಾವಳಿ ಕಾವಲು ಪಡೆಯ ಪಿ.ಎಸ್.ಐ. ಆಗಿ ನಿಯೋಜನೆಗೊಡಿದ್ದರು. ಅಲ್ಲಿಂದ ಮಲ್ಪೆ ಕರಾವಳಿ ಕಾವಲು ಪಡೆಗೆ ವರ್ಗಾವಣೆಗೊಂಡು ಬಂದು ಅಲ್ಲಿಂದ ಭಟ್ಕಳ, ಬೆಳ್ತಂಗಡಿ, ವಿಟ್ಲ, ಕಡಬ ಠಾಣೆಗಳಲ್ಲಿ ಪಿ.ಎಸ್.ಐ. ಆಗಿ ಕರ್ತವ್ಯ ನಿರ್ವಹಿಸಿ ಇನ್ಸ್ ಪೆಕ್ಟರ್ ಆಗಿ ಭಡ್ತಿ ಹೊಂದಿ ಮಂಗಳೂರು ಕಮಿಷನರ್ ಕಚೇರಿಗೆ ವರ್ಗಾವಣೆಗೊಂಡಿದ್ದರು. ಬಳಿಕ ಕೊಣಾಜೆ , ಚಿಕ್ಕಮಗಳೂರು, ಅಲ್ದೂರು ವೃತ್ತನಿರೀಕ್ಷಕರಾಗಿ, ಕೊಣಾಜೆ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಆಗಿ , ಕಾರವಾರದ ಕದ್ರ ವೃತ್ತನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿ ಇದೀಗ ವಿಟ್ಲ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಆಗಿ ವರ್ಗಾವಣೆಗೊಂಡು ಬಂದು ಅಧಿಕಾರ ಸ್ವೀಕರಿಸಿದ್ದಾರೆ. ಇವರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನವರಾಗಿದ್ದಾರೆ.
ಹೆಚ್. ಇ. ನಾಗರಾಜ್ ರವರು 2007ನೇ ಬ್ಯಾಚ್ನ ಪಿಎಸ್ಐ ಆಗಿದ್ದು, ಆರಂಭದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಪ್ರೊಬೇಷನರಿ ಅವಧಿ ಮುಗಿಸಿ ಚಿಕ್ಕಮಗಳೂರು ತರಿಕೆರೆ ಪೊಲೀಸ್ ಠಾಣೆಯಲ್ಲಿ ಎಸ್.ಐ. ಆಗಿ ಕರ್ತವ್ಯ ಆರಂಭಿಸಿದ್ದರು. ಆ ಬಳಿಕ ಕಡಬ, ಬಂಟ್ವಾಳ ಗ್ರಾಮಂತರ, ಪುತ್ತೂರು ಸಂಚಾರ ಠಾಣೆ, ವಿಟ್ಲ, ವೇಣೂರು ಠಾಣೆಯಲ್ಲಿ ಎಸ್.ಐ. ಆಗಿ ಕರ್ತವ್ಯ ನಿರ್ವಹಿಸಿ ಅಲ್ಲಿಂದ ಇನ್ಸ್ ಪೆಕ್ಟರ್ ಆಗಿ ಭಡ್ತಿ ಹೊಂದಿ ಭಟ್ಕಳ ಕೋಸ್ಟಲ್ ಸೆಕ್ಯೂರಿಟಿ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದರು. ಬಳಿಕ ಮೇಲ್ದರ್ಜೆಗೇರಿದ್ದ ವಿಟ್ಲ ಪೊಲೀಸ್ ಠಾಣೆಗೆ ಪ್ರಥಮ ಇನ್ಸ್ ಪೆಕ್ಟರ್ ನೇಮಕಗೊಂಡು ಆಗಮಿಸಿ ಕರ್ತವ್ಯ ನಿರ್ವಹಿಸಿದ್ದರು. ಇದೀಗ ಉಪ್ಪಿನಂಗಡಿ ವೃತ್ತ ನಿರೀಕ್ಷಕರಾಗಿ ವರ್ಗಾವಣೆ ಗೊಂಡಿದ್ದಾರೆ.
ಬಂಟ್ವಾಳ ಗ್ರಾಮಾಂತರ ಇನ್ಸ್ ಪೆಕ್ಟರ್ ಶಿವಕುಮಾರ್ ರವರನ್ನು ಬೈಂದೂರು ಠಾಣೆಗೆ ವರ್ಗಾವಣೆ ಮಾಡಲಾಗಿದ್ದು ಅವರ ತೆರವಾದ ಸ್ಥಾನಕ್ಕೆ ಉಪ್ಪಿನಂಗಡಿ ವೃತ್ತನಿರೀಕ್ಷಕರಾಗಿದ್ದ ರವಿ ಬಿ.ಎಸ್.ರವರನ್ನು ವರ್ಗಾವಣೆ ಮಾಡಲಾಗಿದೆ.
ಬೆಳ್ತಂಗಡಿ ಉಪವಿಭಾಗಕ್ಕೆ ಉಪ್ಪಿನಂಗಡಿ:
ಪುತ್ತೂರು ಪೊಲೀಸ್ ಉಪವಿಭಾಗದ ವ್ಯಾಪ್ತಿಯಲ್ಲಿದ್ದ ಉಪ್ಪಿನಂಗಡಿ ವೃತ್ತವು ಇನ್ನು ಮುಂದಕ್ಕೆ ಬೆಳ್ತಂಗಡಿ ವೃತ್ತದ ವ್ಯಾಪ್ತಿಗೆ ಬರುವ ಮಾಹಿತಿಯಿದ್ದು, ಈ ಬಗ್ಗೆ ಅಧಿಕೃತ ಆದೇಶ ಇನ್ನಷ್ಟೇ ಬರಬೇಕಿದೆ.










