ರಾಮಕುಂಜ: ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಗಳು, ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ ಕೊಯಿಲ ಇವರ ಆಶ್ರಯದಲ್ಲಿ ಗೋ ಸೇವಾ ಗತಿನಿಧಿ ಮತ್ತು ಗ್ರಾಮ ವಿಕಾಸ ಗತಿನಿಧಿ ಮಂಗಳೂರು ವಿಭಾಗ ಇವರ ಸಹಯೋಗದೊಂದಿಗೆ ಪಂಚಗವ್ಯ ಚಿಕಿತ್ಸಾ ಶಿಬಿರ ಮತ್ತು ವಿಚಾರಗೋಷ್ಠಿ ಅ.14ರಂದು ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನಲ್ಲಿ ನಡೆಯಿತು.
ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕುವೆಚ್ಚಾರು ಅವರು ಶಿಬಿರ ಉದ್ಘಾಟಿಸಿ ಸಂದರ್ಭೋಚಿತವಾಗಿ ಮಾತನಾಡಿದರು. ಪ್ರಗತಿಪರ ಕೃಷಿಕ ಬಾಲಕೃಷ್ಣ ಭಟ್ ಬರೆಂಬಾಡಿ ಅಧ್ಯಕ್ಷತೆ ವಹಿಸಿದ್ದರು. ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಧರ್ಮಪಾಲ ರಾವ್ ಕಜೆ, ಮಂಗಳೂರು ವಿಭಾಗದ ಗೋ ಸೇವಾ ಪ್ರಮುಖ್ ಗಂಗಾಧರ, ಆಯುರ್ವೇದ ವೈದ್ಯ ಮತ್ತು ಪಂಚಗವ್ಯ ಚಿಕಿತ್ಸಾ ತಜ್ಞ ಡಾ.ಡಿ.ಪಿ.ರಮೇಶ, ಸೈಕನ್ಯೂರೋ ಇಮ್ಯುನೋಲಾಜಿಸ್ಟ್ ಹಾಗೂ ಪರ್ಯಾಯ ಚಿಕಿತ್ಸಾ ವಿಧಾನಗಳ ತಜ್ಞರಾದ ಡಾ.ಅವಿನಾಶ್ ಸಲ್ಗಾರ್ ಬೆಂಗಳೂರು, ಕೊಯಿಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಉಪನಿರ್ದೇಶಕ ಡಾ.ಪ್ರಸನ್ನ ಕುಮಾರ್ ಹೆಬ್ಬಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗ್ರಾಮ ವಿಕಾಸ ರಾಮಕುಂಜ ಗ್ರಾಮ ಸಮಿತಿ ಸಂಯೋಜಕ ಪದ್ಮಪ್ಪ ಗೌಡ ಸ್ವಾಗತಿಸಿ, ಶಿಕ್ಷಕ ದಿನೇಶ್ ಬರೆಂಬೆಟ್ಟು ವಂದಿಸಿದರು. ಗ್ರಾಮ ವಿಕಾಸ ಗತಿನಿಧಿ ಕಡಬ ತಾಲೂಕು ಪ್ರಮುಖ್ ಜನಾರ್ದನ ಕದ್ರ ಕಾರ್ಯಕ್ರಮ ನಿರೂಪಿಸಿದರು. ಜಯಶ್ರೀ ಪ್ರಾರ್ಥಿಸಿದರು. ’ಆನ್ಸರ್ ಫಾರ್ ಕ್ಯಾನ್ಸರ್’ ಖ್ಯಾತಿಯ ಡಾ.ಡಿ.ಪಿ.ರಮೇಶ ಬೆಂಗಳೂರು ಇವರಿಂದ ಹಲವು ಮಂದಿ ಪಂಚಗವ್ಯ ಚಿಕಿತ್ಸೆ, ಸಲಹೆ ಪಡೆದುಕೊಂಡರು.
ವಿಚಾರಗೋಷ್ಠಿ:
ಉದ್ಘಾಟನಾ ಸಮಾರಂಭದ ಬಳಿಕ ನಡೆದ ಪ್ರಥಮ ವಿಚಾರಗೋಷ್ಠಿಯಲ್ಲಿ ಕೊಯಿಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಉಪನಿರ್ದೇಶಕ ಡಾ.ಪ್ರಸನ್ನ ಕುಮಾರ್ ಹೆಬ್ಬಾರ್ ಅವರು ಮಲೆನಾಡು ಗಿಡ್ಡ ತಳಿಯ ಹಸುಗಳ ಕುರಿತು ಮಾಹಿತಿ ಹಂಚಿಕೊಂಡರು. ಬಳಿಕ ನಡೆದ ಗೋಷ್ಠಿಯಲ್ಲಿ ಪಂಚಗವ್ಯ ಚಿಕಿತ್ಸೆಗೆ ಮಣಿಯುವ ಖಾಯಿಲೆಗಳು ಮತ್ತು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಇದರ ಮಹತ್ವ ಕುರಿತು ಆಯುರ್ವೇದ ವೈದ್ಯರು ಮತ್ತು ಪಂಚಗವ್ಯ ಚಿಕಿತ್ಸಾ ತಜ್ಞ ಡಾ.ಡಿ.ಪಿ.ರಮೇಶ ಅವರು ಮಾಹಿತಿ ನೀಡಿದರು. ವಿಜ್ಞಾನ, ತಂತ್ರಜ್ಞಾನ ಎಷ್ಟೇ ಬೆಳೆದರೂ ರೋಗಗಳೂ ಕಡಿಮೆಯಾಗುತ್ತಿಲ್ಲ. ಪಂಚಗವ್ಯ ಚಿಕಿತ್ಸೆಯು ಎಲ್ಲಾ ರೋಗಗಳಿಗೂ ದಿವ್ಯೌಷಧ ಎಂದು ಡಾ.ಡಿ.ಪಿ.ರಮೇಶ್ ಹೇಳಿದರು. ಬಳಿಕ ನಡೆದ ವಿಚಾರಗೋಷ್ಟಿಯಲ್ಲಿ ಸೈಕನ್ಯೂರೋ ಇಮ್ಯುನೋಲಾಜಿಸ್ಟ್ ಹಾಗೂ ಪರ್ಯಾಯ ಚಿಕಿತ್ಸಾ ವಿಧಾನಗಳ ತಜ್ಞರಾದ ಡಾ.ಅವಿನಾಶ್ ಸಲ್ಗಾರ್ ಬೆಂಗಳೂರು ಅವರು, ಪಂಚಗವ್ಯ ಚಿಕಿತ್ಸೆ, ಸಂಶೋಧನೆ, ಅಧ್ಯಯನ ಮತ್ತು ಪ್ರಸ್ತುತತೆ ಹಾಗೂ ಮನೋದೈಹಿಕ ಖಾಯಿಲೆಗಳು ಮತ್ತು ತಡೆಗಟ್ಟುವಿಕೆ ಮತ್ತು ಪಂಚಗವ್ಯದಂತಹ ನೈಸರ್ಗಿಕ ಪರಿಹಾರೋಪಾಯಗಳ ಕುರಿತು ಮಾಹಿತಿ ನೀಡಿದರು.