ಮುಮ್ತಾಝ್ ಅಲಿ ಸಾವಿನ ಪ್ರಕರಣದ ತನಿಖೆ ಎಸ್‌ಪಿಪಿಯಾಗಿ ಶಿವಪ್ರಸಾದ್ ಆಳ್ವ

0

ಪುತ್ತೂರು:ಮಾಜಿ ಶಾಸಕ ಮೊಯಿದ್ದೀನ್ ಬಾವ ಅವರ ಸಹೋದರ, ಸುರತ್ಕಲ್ ಕೃಷ್ಣಾಪುರದ ಉದ್ಯಮಿ ಮುಮ್ತಾಝ್ ಅಲಿ ಅವರ ಸಾವಿಗೆ ಸಂಬಂಧಿಸಿ ಕಾವೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ(ಮೊಕದ್ದಮೆ ಸಂಖ್ಯೆ 0150/2024)ದಲ್ಲಿ ಪ್ರಾಸಿಕ್ಯೂಷನ್ ಪರ ವಾದಿಸಲು ವಿಶೇಷ ಸರಕಾರಿ ಅಭಿಯೋಜಕರಾಗಿ ಮಂಗಳೂರು ವಲಯದ ಹಿರಿಯ ಕಾನೂನು ಅಧಿಕಾರಿ, ಪುತ್ತೂರು ಮೂಲದ ಶಿವಪ್ರಸಾದ್ ಆಳ್ವ ಅವರನ್ನು ಸರಕಾರ ನಿಯೋಜಿಸಿದೆ.


ಅ.6ರಂದು ಬೆಳಿಗ್ಗೆ 4 ಗಂಟೆಗೆ ಕೂಳೂರು ಸೇತುವೆ ಬಳಿ ತನ್ನ ಕಾರನ್ನು ನಿಲ್ಲಿಸಿ ಹೋಗಿದ್ದ ಮುಮ್ತಾಝ್ ಅಲಿಯವರು ನಾಪತ್ತೆಯಾಗಿ ಬಳಿಕ ಶವವಾಗಿ ಪತ್ತೆಯಾಗಿದ್ದರು.ಮುಮ್ತಾಝ್ ಅಲಿ ಅವರು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತಪಡಿಸಿ ಅವರ ಸಹೋದರ ಹೈದರ್ ಅಲಿ ಎಂಬವರು ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.ಮಹಿಳೆಯನ್ನು ಬಳಸಿಕೊಂಡು ದುರುದ್ದೇಶದಿಂದ ಮುಮ್ತಾಝ್ ಅಲಿಯವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು.ಶ್ರೀಮತಿ ರೆಹಮತ್, ಅಬ್ದುಲ್ ಸತ್ತಾರ್, ಕಲಂದರ್ ಶಾಫಿ, ಮುಸ್ತಫ, ಸೊಹೈಬ್, ಸಿರಾಜ್ ಎಂಬವರು ಮಾನಸಿಕ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದ ಕುರಿತು ದೂರಿನಲ್ಲಿ ತಿಳಿಸಿದ್ದರು.ನನ್ನ ಸಹೋದರ ಮುಮ್ತಾಝ್ ಅಲಿ ಸಮಾಜದಲ್ಲಿ ಅತ್ಯಂತ ಗೌರವಾನ್ವಿತ ವ್ಯಕ್ತಿಯಾಗಿದ್ದು, ಕಳೆದ 30 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿದ್ದರು.ಸಮಾಜ ಸೇವೆ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ಹಲವು ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರಾಗಿದ್ದರು.ಅವರ ಪ್ರಸಿದ್ಧಿಯನ್ನು ಹಾಳು ಮಾಡುವ ಉದ್ದೇಶದಿಂದ ಆರೋಪಿಗಳೆಲ್ಲರೂ ಸೇರಿಕೊಂಡು ಅವರು ಆತ್ಮಹತ್ಯೆಗೆ ಶರಣಾಗುವಂತೆ ಪ್ರಚೋದನೆ ನೀಡಿದ್ದಾರೆ.ಮುಮ್ತಾಝ್ ಅಲಿ ಅವರನ್ನು ನಿರಂತರವಾಗಿ ಬೆದರಿಸಿ, ಬ್ಲ್ಯಾಕ್ ಮೇಲ್ ಮಾಡಿ ಲಕ್ಷಾಂತರ ರೂಪಾಯಿ ಹಣವನ್ನು ಕಿತ್ತುಕೊಂಡು ಮತ್ತಷ್ಟು ಹಣಕ್ಕೆ ಬೇಡಿಕೆಯಿಟ್ಟ ಆರೋಪದಲ್ಲಿ ಮಹಿಳೆ ಸೇರಿ 6 ಮಂದಿ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಬಂಧನವಾಗಿದೆ.


ಎಸ್‌ಪಿಪಿಯಾಗಿ ಶಿವಪ್ರಸಾದ್ ಆಳ್ವ:
ಈ ಪ್ರಕರಣದಲ್ಲಿ ಸಂಬಂಧಪಟ್ಟ ವಿಚಾರಣಾ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಸರಕಾರದ ಪರ ಹಾಜರಾಗಲು ಮತ್ತು ಪ್ರಕರಣವನ್ನು ನಡೆಸಲು ವಿಶೇಷ ಸರ್ಕಾರಿ ಅಭಿಯೋಜಕರಾಗಿ ಮಂಗಳೂರು ವಲಯದ ಹಿರಿಯ ಕಾನೂನು ಅಧಿಕಾರಿ ಶಿವಪ್ರಸಾದ್ ಆಳ್ವ ಅವರನ್ನು ವಿಶೇಷ ಸರಕಾರಿ ಅಭಿಯೋಜಕರಾಗಿ ನಿಯೋಜಿಸಿ ಸರ್ಕಾರದ ಒಳಾಡಳಿತ ಇಲಾಖೆಯ ಅಧೀನ ಕಾರ್ಯದರ್ಶಿ(ಪೊಲೀಸ್ ಸೇವೆಗಳು-ಬಿ) ಜಿ.ಶ್ಯಾಮ ಹೊಳ್ಳ ಅವರು ಆದೇಶ ಹೊರಡಿಸಿದ್ದಾರೆ.


ಪುತ್ತೂರು ದರ್ಬೆ ಕಾವೇರಿಕಟ್ಟೆ ನಿವಾಸಿಯಾಗಿದ್ದು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಕಾರವಾರ ಜಿಲ್ಲೆಯನ್ನು ಒಳಗೊಂಡ ಮಂಗಳೂರು ವಲಯದ ಹಿರಿಯ ಕಾನೂನು ಅಧಿಕಾರಿಯಾಗಿರುವ ಕೆ.ಶಿವಪ್ರಸಾದ್ ಆಳ್ವ ಅವರು ಹಲವು ಪ್ರಮುಖ ಪ್ರಕರಣಗಳಲ್ಲಿ ವಿಶೇಷ ಸರಕಾರಿ ಅಭಿಯೋಜಕರಾಗಿ ಕಾರ್ಯನಿರ್ವಹಿಸಿ ಅಪರಾಽಗಳಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

LEAVE A REPLY

Please enter your comment!
Please enter your name here