





ಪುತ್ತೂರು: ಕುಂಬ್ರ ಮೆಸ್ಕಾಂ ಇಲಾಖೆಯು ವಿದ್ಯುತ್ ಕಂಬಗಳನ್ನು ಕುಂಬ್ರ-ಬೆಳ್ಳಾರೆ ಮುಖ್ಯ ರಸ್ತೆಯ ಕುಯ್ಯಾರು ಎಂಬಲ್ಲಿ ರಸ್ತೆ ಬದಿಯಲ್ಲಿ ರಾಶಿ ಹಾಕುವುದಲ್ಲದೇ ಕ್ರೇನ್ ಮೂಲಕ ಕಂಬಗಳನ್ನು ಇಳಿಸುವುದು, ಲೋಡ್ ಮಾಡುವುದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ, ಹಾಗಾಗಿ ವಿದ್ಯುತ್ ಕಂಬಗಳನ್ನು ಹಾಕುವ ಸ್ಥಳವನ್ನು ಬದಲಾಯಿಸುವಂತೆ ಆಗ್ರಹಿಸಿ ಕುಂಬ್ರ ಸ್ನೇಹ ಸಾಗರ ರಿಕ್ಷಾ ಚಾಲಕ ಮಾಲಕರ ಸಂಘದ ವತಿಯಿಂದ ಕುಂಬ್ರ ಮೆಸ್ಕಾಂಗೆ ಅ.18ರಂದು ಮನವಿ ಸಲ್ಲಿಸಲಾಯಿತು.


ಕುಯ್ಯಾರು ಎಂಬಲ್ಲಿ ಕಂಬ ಹಾಕುವ ಸ್ಥಳ ತಿರುವು ರಸ್ತೆಯಾಗಿದ್ದು ಸದ್ರಿ ಸ್ಥಳದಲ್ಲಿ ಅನೇಕ ವಾಹನ ಅಪಘಾತಗಳು ಕೂಡಾ ನಡೆದಿದೆ. ಹಾಗಾಗಿ ಸಂಭಾವ್ಯ ಅಪಾಯ ತಪ್ಪಿಸುವ ನಿಟ್ಟಿನಲ್ಲಿ ಕುಯ್ಯಾರುನಲ್ಲಿ ರಸ್ತೆ ಬದಿಯಲ್ಲಿ ವಿದ್ಯುತ್ ಕಂಬಗಳನ್ನು ಹಾಕದೇ ಬೇರೆ ಕಡೆಯಲ್ಲಿ ಹಾಕಬೇಕು, ನಮ್ಮ ಮನವಿಗೆ ಸ್ಪಂದಿಸದೇ ಇದ್ದಲ್ಲಿ ಸಾರ್ವಜನಿಕರನ್ನು ಸೇರಿಸಿಕೊಂಡು ಪ್ರತಿಭಟನೆ ನಡೆಸುತ್ತೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಕುಂಬ್ರ ಸ್ನೇಹ ಸಾಗರ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಅಶ್ರಫ್ ಸಾರೆಪುಣಿ, ಉಪಾಧ್ಯಕ್ಷ ಸುಧಾಕರ ಪಾಟಾಳಿ, ಪ್ರ.ಕಾರ್ಯದರ್ಶಿ ಉದಯ ಮಡಿವಾಳ, ಕಾರ್ಯದರ್ಶಿ ಸಂಶುದ್ದೀನ್ ಜಿ, ಮಾಜಿ ಅಧ್ಯಕ್ಷ ವಾಸು ಪೂಜಾರಿ, ಸದಸ್ಯರಾದ ತಾಜುದ್ದೀನ್, ಲೋಕೇಶ್ ರೈ ನಿಯೋಗದಲ್ಲಿದ್ದರು.














