ಹೊಂಡ-ಗುಂಡಿಗಳಿಂದ ಕೂಡಿದ ಹೆದ್ದಾರಿ-ವಾಹನಗಳ ಅಪಘಾತಕ್ಕೆ ರಹದಾರಿ-ಇಲಾಖೆ ಮೌನವಾದರೂ, ಗುಂಡಿ ಮುಚ್ಚಿದ ಯುವಕರು

0

ಉಪ್ಪಿನಂಗಡಿ: ಇಲ್ಲಿನ ಹಳೆಗೇಟು- ಮರ್ಧಾಳ ರಾಜ್ಯ ಹೆದ್ದಾರಿಯಲ್ಲಿನ ಕೆಮ್ಮಾರ ಎಂಬಲ್ಲಿ ರಸ್ತೆಯ ಮಧ್ಯೆ ಬೃಹತ್ ಹೊಂಡಗಳು ಬಾಯ್ದೆರೆದು ನಿಂತಿದ್ದು, ಆಗಾಗ್ಗೆ ಅಪಘಾತಗಳು ನಡೆಯುತ್ತಲೇ ಇದೆ. ಈ ನಿಟ್ಟಿನಲ್ಲಿ ಯುವಕರ ತಂಡವೊಂದು ರಸ್ತೆಯಲ್ಲಿದ್ದ ಗುಂಡಿಗೆ ಕಾಂಕ್ರೀಟ್ ಹಾಕಿ ಹೊಂಡ ಮುಕ್ತಗೊಳಿಸಿ ಸಾಮಾಜಿಕ ಕಳಕಳಿ ವ್ಯಕ್ತಪಡಿಸಿದೆ.


ಕೆಲ ವರ್ಷಗಳ ಹಿಂದೆ ಇಲ್ಲಿ ಅಪೂರ್ಣ ರಸ್ತೆ ಡಾಮರು ಕಾಮಗಾರಿ ನಡೆಸಲಾಗಿದ್ದು, ಆ ಕಾಮಗಾರಿ ಕೂಡಾ ಕಳಪೆಯಾಗಿ ನಡೆದಿರುವುದರಿಂದ ಅಲ್ಲಲ್ಲಿ ಹೊಂಡಗಳು ನಿರ್ಮಾಣ ಆಗಿದ್ದವು. ಈ ಹೊಂಡಗಳಿಗೆ ವಾಹನಗಳು ಬಿದ್ದು, ಅಪಘಾತಗಳು ಸಂಭವಿಸುತ್ತಲೇ ಇದೆ. ಅ.18ರಂದು ದ್ವಿಚಕ್ರ ವಾಹನವೊಂದು ಬಿದ್ದು, ಇಬ್ಬರೂ ಸವಾರರು ಕಾಲು ಮುರಿತಕ್ಕೊಳಗಾಗಿ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇದಕ್ಕೂ ಕೆಲ ದಿನಗಳ ಹಿಂದೆ ಕಾರೊಂದು ಪಲ್ಟಿಯಾಗಿ ಬಿದ್ದು, ಚಾಲಕ ಸಣ್ಣಪುಟ್ಟ ಗಾಯಗೊಂಡು ಅಪಾಯದಿಂದ ಪಾರಾಗಿದ್ದರು. ಕಾರು ಸಂಪೂರ್ಣ ನುಜ್ಜುಗುಜ್ಜು ಆಗಿತ್ತು. ಹೀಗೆ ಆಗಾಗ್ಗೆ ಇಲ್ಲಿ ಈ ಹೊಂಡಗಳಿಗೆ ವಾಹನಗಳು ಬಿದ್ದು ಎದ್ದು ಹೋದ ಘಟನೆಗಳು ಹಲವಾರು ಸಂಭವಿಸಿವೆ.


ಇಷ್ಟೆಲ್ಲಾ ನಡೆಯುತ್ತಿದ್ದರೂ ಲೋಕೋಪಯೋಗಿ ಇಲಾಖಾ ಅಧಿಕಾರಿಗಳು ಇದರ ದುರಸ್ಥಿಗೆ ಕ್ರಮಕೈಗೊಳ್ಳುತ್ತಿಲ್ಲ ಎನ್ನುವ ದೂರುಗಳು ವ್ಯಕ್ತವಾಗಿದ್ದು, ಹೀಗಾಗಿ ಇಲ್ಲಿನ ಸಮಸ್ಯೆಯ ಗಂಭೀರತೆಯನ್ನು ಮನಗಂಡ ಸ್ಥಳೀಯ ಯುವಕರ ತಂಡ ಅ.19ರಂದು ಹೊಂಡ ಗುಂಡಿ ಇರುವಲ್ಲಿಗೆ ಕಾಂಕ್ರೀಟ್ ಹಾಕಿ ಹೊಂಡವನ್ನು ಮುಚ್ಚಿ ಸಾಮಾಜಿಕ ಕಳಕಳಿ ವ್ಯಕ್ತಪಡಿಸಿದ್ದಾರೆ. ಅ. 19ರಂದು ಬೆಳಗ್ಗೆ ರಸ್ತೆ ಬದಿಯಲ್ಲಿ ಜಮಾಯಿಸಿದ ಯುವಕರ ತಂಡ ಹಾರೆ, ಪಿಕ್ಕಾಸು ಹಿಡಿದು ಕೆಲಸ ಆರಂಭಿಸಿದ್ದು, ಯುವಕರ ಸೇವೆಯನ್ನು ಪ್ರಶಂಶಿಸಿದ ಸ್ಥಳೀಯ ನಿವಾಸಿ ವಾಸುದೇವ ಆಚಾರ್ಯ ಜಲ್ಲಿ, ಮರಳು ನೀಡಿದರು. ಯಾಸಿರ್ ಅರಾಫತ್ ಇದಕ್ಕೆ ಬೇಕಾಗುವಷ್ಟು ಸಿಮೆಂಟ್ ತರಿಸಿ ಕೊಟ್ಟು ಯುವಕರ ಸೇವೆಗೆ ಸಾಥ್ ನೀಡಿದರು. ಸ್ಥಳೀಯ ಯುವಕರಾದ ಸೌಕತ್ ಜೇಡರಪೇಟೆ, ಇಬ್ರಾಹಿಂ ಆಕಿರೆ, ಕಿಲರ್, ಝುಬೈರ್, ಭವಾನಿ ಶಂಕರ್, ಹಂಝ ಬಡ್ಡಮೆ, ಸುಹೈಲ್ ಇವರುಗಳು ಹೊಂಡವನ್ನು ಕಾಂಕ್ರೀಟ್ ಹಾಕಿ ಮುಚ್ಚಿದರು. ಯುವಕರ ಸೇವೆಗೆ ಸಾರ್ವಜನಿಕರು ಮತ್ತು ವಾಹನ ಚಾಲಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ದೇವರು ಕೊಟ್ಟರೂ ಪೂಜಾರಿ ಬಿಡಲಿಲ್ಲ!ರಸ್ತೆಯ ದುಸ್ಥಿತಿಗೆ ಹೊಣೆ ಯಾರು?
ಈ ರಸ್ತೆಯಲ್ಲಿ ಕೆಮ್ಮಾರದಲ್ಲಿ ಮಾತ್ರ ರಸ್ತೆಯಲ್ಲಿ ಹೊಂಡ- ಗುಂಡಿಗಳು ನಿರ್ಮಾಣವಾಗಿದ್ದಲ್ಲ. ಉಪ್ಪಿನಂಗಡಿ- ಮರ್ದಾಳ ರಾಜ್ಯ ಹೆದ್ದಾರಿಯ ಹಳೆಗೇಟು (ಸುಬ್ರಹ್ಮಣ್ಯ ಕ್ರಾಸ್)ವಿನಿಂದ ಕೊಯಿಲ ತನಕವೂ ಈ ರಸ್ತೆಯಲ್ಲಿ ಅದೇ ಸ್ಥಿತಿಯಿದೆ. ಇದಕ್ಕೆ ಮುಖ್ಯವಾಗಿ ಕಾರಣ ಗುತ್ತಿಗೆದಾರರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬೇಜಾವಬ್ದಾರಿ ಎಂದೇ ಹೇಳಬಹುದು. ಹಳೆಗೇಟುವಿನಿಂದ ಕೊಯಿಲದವರೆಗೆ ಈ ರಾಜ್ಯ ಹೆದ್ದಾರಿಯ ಅಗಲೀಕರಣ ಹಾಗೂ ಡಾಮರೀಕರಣಕ್ಕೆ ಕಳೆದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ 7.25 ಕೋಟಿ ರೂಪಾಯಿ ಅನುದಾನ ಮಂಜೂರುಗೊಂಡಿತ್ತು. ಆಗ ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕಿಯಾಗಿದ್ದ ಶಕುಂತಳಾ ಶೆಟ್ಟಿಯವರು 2016 ಆಗಸ್ಟ್ 29ರಂದು ಗುದ್ದಲಿ ಪೂಜೆ ನೆರವೇರಿಸಿ, ಈ ಕಾಮಗಾರಿಗೆ ಚಾಲನೆ ನೀಡಿದರು. ಈ ರಸ್ತೆ ವಿಸ್ತರಣೆ ಮತ್ತು ಡಾಮರೀಕರಣ ಕಾಮಗಾರಿಯನ್ನು ಗುತ್ತಿಗೆದಾರರು 2017ರ ಸೆಪ್ಟೆಂಬರ್ ಒಳಗೆ ಗುತ್ತಿಗೆದಾರರು ಮುಗಿಸಬೇಕಿತ್ತು. ಗುದ್ದಲಿ ಪೂಜೆ ನಡೆದ ಬಳಿಕ ಇದರ ಗುತ್ತಿಗೆ ವಹಿಸಿಕೊಂಡ ಮಂಗಳೂರಿನ ಗುತ್ತಿಗೆದಾರ ಸಂಸ್ಥೆಯೊಂದು ಇದರ ಕಾಮಗಾರಿ ಆರಂಭಿಸಿತಾದರೂ, ಕಾಮಗಾರಿ ಆಮೆ ನಡಿಗೆಯಲ್ಲಿ ನಡೆಯಿತು. ಇವರ ಗುತ್ತಿಗೆ ಅವಧಿ ಮುಗಿದರೂ ಮತ್ತೆ ಇಲಾಖೆಯು ಅದನ್ನು ವಿಸ್ತರಿಸಿತು. ಆದರೂ ಕೆಲವು ದಿನ ಕೆಲಸ ನಿರ್ವಹಿಸುವ ಗುತ್ತಿಗೆದಾರ ಸಂಸ್ಥೆಯ ಸಿಬ್ಬಂದಿಗಳು ಕೆಲಸವನ್ನು ಅರ್ಧದಲ್ಲಿ ಬಿಟ್ಟು ಮತ್ತೆ ಹೋದವರು ತಿಂಗಳುಗಟ್ಟಲೇ ಬರುತ್ತಲೇ ಇರಲಿಲ್ಲ. ಗುತ್ತಿಗೆದಾರ ಸಂಸ್ಥೆಗೆ ಲೋಕೋಪಯೋಗಿ ಇಲಾಖೆಯು ಹಲವು ನೊಟೀಸ್ ನೀಡಿದರೂ, ಪ್ರಯೋಜನವಾಗಲಿಲ್ಲ. ಪುಳಿತ್ತಡಿಯಿಂದ ಹಳೆಗೇಟುವರೆಗಿನ ರಸ್ತೆಯ ಅಗಲೀಕರಣವೂ ನಡೆಯಲಿಲ್ಲ. ಡಾಮರು ಕಾಮಗಾರಿಯೂ ನಡೆಯಲಿಲ್ಲ. ಇನ್ನು ಉಳಿದ ಕಡೆ ಅರ್ಧಂಬರ್ಧ ಕಾಮಗಾರಿ ಮಾಡಿದರೂ, ಅದು ತೀರಾ ಕಳಪೆಯಾಗಿತ್ತು. ಚರಂಡಿ ವ್ಯವಸ್ಥೆಯನ್ನು ಕೂಡಾ ಸಮರ್ಪಕವಾಗಿ ಮಾಡದ್ದರಿಂದ ಮಳೆ ನೀರೆಲ್ಲಾ ತಾನು ಹೋದದ್ದೇ ದಾರಿ ಎಂಬಂತೆ ರಸ್ತೆ, ಫುಟ್‌ಪಾತ್ ಸೇರಿದಂತೆ ಸಿಕ್ಕಸಿಕ್ಕಲ್ಲಿ ಹರಿದು ಹೋಗುತ್ತಿತ್ತು. ರಸ್ತೆಯಿಡೀ ಕೆಸರಾಗಿ ಹಲವು ದ್ವಿಚಕ್ರ ವಾಹನಗಳು ಅಪಘಾತಕ್ಕೀಡಾಗುವಂತಾಗಿತ್ತು. ರಸ್ತೆ ಬದಿ ಹಾಕಿದ ಮಣ್ಣು ಸರಿಯಾಗಿ ಸೆಟ್ ಆಗದಿದ್ದ ಕಾರಣ ರಸ್ತೆ ಬದಿ ಇಳಿದ ವಾಹನಗಳು ಹೂತು ಹೋಗುವ ಪ್ರಸಂಗವೂ ಎದುರಾಯಿತು. ಹೀಗೆ ಈ ಅಪೂರ್ಣ ರಸ್ತೆಯಿಂದ ಸಾರ್ವಜನಿಕರಿಗೆ ಹತ್ತು ಹಲವು ಸಮಸ್ಯೆ ಎದುರಾಗಿತ್ತು. ಕೊನೆಗೇ ಈ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಯಿತು. ಬಳಿಕ ಈ ರಸ್ತೆಯ ಕಾಮಗಾರಿ ಅಪೂರ್ಣವಾಗಿಯೇ ಉಳಿಯಿತು. ಗುತ್ತಿಗೆದಾರ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಿದ್ದರೂ, ಅದೇ ಗುತ್ತಿಗೆದಾರರು ಇನ್ನೊಂದು ಹೆಸರಿನಲ್ಲಿ ಗುತ್ತಿಗೆ ಪಡೆದು ಬೇರೆ ಕಡೆಗಳಲ್ಲಿ ರಸ್ತೆಯ ಕೆಲಸಗಳನ್ನು ಮಾಡುತ್ತಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.


ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಮಾತ್ರ ಅವ್ಯವಸ್ಥೆ:
ಆಗಿನ ಕಾಂಗ್ರೆಸ್ ಸರಕಾರ ಹಳೆಗೇಟು- ಮರ್ಧಾಳ ರಾಜ್ಯ ಹೆದ್ದಾರಿಯ ವಿಸ್ತರಣೆ ಮತ್ತು ಡಾಮರೀಕರಣ ಕಾಮಗಾರಿಗೆ ಅನುದಾನ ಮಂಜೂರಾಗಿತ್ತು. ಇಲ್ಲಿ ಹಳೆಗೇಟು- ಕೊಯಿಲ ತನಕದ ಆರು ಕಿ.ಮೀ. ರಸ್ತೆ ಪುತ್ತೂರು ವಿಧಾನ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟರೆ, ಇದಕ್ಕಿಂತಲೂ ದುಪ್ಪಟ್ಟು ಇರುವ ರಸ್ತೆ ಸುಳ್ಯ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಟ್ಟಿತ್ತು. ಆಗ ಸುಳ್ಯ ಶಾಸಕರಾಗಿದ್ದವರು ಅಂಗಾರರವರು. ಅವರ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಕೊಯಿಲದಿಂದ ಮರ್ದಾಳ ತನಕದ ಹೆದ್ದಾರಿಯ ಅಗಲೀಕರಣ ಮತ್ತು ಡಾಮರೀಕರಣದ ಗುತ್ತಿಗೆಯನ್ನು ಪಡೆದುಕೊಂಡವರು ಇನ್ನೊಂದು ಗುತ್ತಿಗೆದಾರ ಸಂಸ್ಥೆ. ಅವರು ಗುತ್ತಿಗೆ ಅವಧಿ ಮುಗಿಯುವ ಮುನ್ನವೇ ಕಾಮಗಾರಿ ಪೂರ್ಣಗೊಳಿಸಿದ್ದರು. ಆ ಭಾಗದಲ್ಲಿ ಚರಂಡಿ ವ್ಯವಸ್ಥೆ, ರಸ್ತೆಗೆ ಸುಣ್ಣ, ಸೂಚನಾ ಫಲಕ ಸೇರಿದಂತೆ ಕಾಮಗಾರಿಯನ್ನು ಪರಿಪೂರ್ಣವಾಗಿ ನಿರ್ವಹಿಸಿ ಉತ್ತಮವಾಗಿ ಕಾಮಗಾರಿ ಮಾಡುವ ಮೂಲಕ ಗುತ್ತಿಗೆದಾರರು ಸಾರ್ವಜನಿಕರ ಪ್ರಶಂಸೆಗೂ ಪಾತ್ರರಾಗಿದ್ದರು. ಆದರೆ ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗುತ್ತಿಗೆದಾರ ಸಂಸ್ಥೆಯ ಆಮೆ ನಡಿಗೆಯ ಕಾಮಗಾರಿಯಿಂದಾಗಿ ರಸ್ತೆ ಅಪೂರ್ಣವಾಗಿಯೇ ಉಳಿದಿರುವುದಲ್ಲದೆ, ಸಂಪೂರ್ಣ ಕಾಮಗಾರಿ ಕಳಪೆಯಾಗಿ ಹಳೆಗೇಟು- ಮರ್ಧಾಳ ತನಕದ ರಸ್ತೆಯಲ್ಲಿ ಸಾರ್ವಜನಿಕರು ಅಂದಿನಿಂದ ಇಂದಿನತನಕ ಸಂಕಷ್ಟವನ್ನೆದುರಿಸುತ್ತಲೇ ಬರಬೇಕಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಈ ರಸ್ತೆಯ ಇಂತಹ ಅವ್ಯವಸ್ಥೆಗೆ ಕಾರಣ ಯಾರು? 7.25 ಕೋಟಿ ರೂಪಾಯಿ ಅನುದಾನ ಮಂಜೂರಾದರೂ ಈ ರಸ್ತೆಯ ಉತ್ತಮ ಕಾಮಗಾರಿಗೆ ಯಾಕೆ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಆ ಸಂದರ್ಭ ಪ್ರಯತ್ನಿಸಿಲ್ಲ ಎಂಬುದು ಮಾತ್ರ ಇಂದಿಗೂ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.

LEAVE A REPLY

Please enter your comment!
Please enter your name here