ಉಪ್ಪಿನಂಗಡಿ: ಮನೆ ನಿರ್ಮಾಣಕ್ಕೆಂದು ನೆಲವನ್ನು ಸಮತಟ್ಟುಗೊಳಿಸುವ ಸಂದರ್ಭ ಜೆಸಿಬಿ ಮೂಲಕ ಅವೈಜ್ಞಾನಿಕವಾಗಿ ಮಣ್ಣನ್ನು ತೆಗೆದಿದ್ದರಿಂದ ಆ ನಿವೇಶನದ ಪಕ್ಕದಲ್ಲಿರುವ ಮನೆಯೊಂದು ಕುಸಿಯುವ ಸಂಭವವುಂಟಾಗಿದ್ದು, ಈ ಬಗ್ಗೆ ಮನೆಯ ಮಾಲಕ ಧರ್ನಪ್ಪ ಪೂಜಾರಿ ಉಪ್ಪಿನಂಗಡಿ ಗ್ರಾಮ ಆಡಳಿತಾಧಿಕಾರಿಯವರು ಹಾಗೂ ಪಿಡಿಒಗೆ ದೂರು ನೀಡಿದ್ದಾರೆ.
ಇಲ್ಲಿನ ನೆಡ್ಚಿಲ್ ಎಂಬಲ್ಲಿ ಕೆ. ಸುಬ್ಬಮ್ಮ ಅವರಿಗೆ ಸರ್ವೆ ನಂಬರ್ 143-10ನಲ್ಲಿ 07.05 ಸೆಂಟ್ಸ್ ವಿಸ್ತೀರ್ಣದ ನಿವೇಶನವಿದ್ದು, ಅದಕ್ಕೆ ತಾಗಿಕೊಂಡೇ ಮೇಲ್ಭಾಗದಲ್ಲಿ ಧರ್ಣಪ್ಪ ಪೂಜಾರಿಯವರಿಗೆ ಸೇರಿದ ಸರ್ವೆ ನಂಬರ್ 143-8ರ ಪೈಕಿ 04.25 ವಿಸ್ತೀರ್ಣದ ನಿವೇಶನವಿದ್ದು, ಅಲ್ಲಿ ಅವರು ಸುಮಾರು ಎರಡು ವರ್ಷಗಳ ಹಿಂದೆ ಹೊಸ ಮನೆಯನ್ನು ನಿರ್ಮಿಸಿದ್ದಾರೆ.
ಆದರೆ ಈಗ ಇದರ ಕೆಳಗಡೆ ನಿವೇಶನ ಹೊಂದಿರುವ ಕೆ. ಸುಬ್ಬಮ್ಮ ಅವರು ಅವರ ನಿವೇಶನವನ್ನು ಜೆಸಿಬಿ ಮೂಲಕ ಸಮತಟ್ಟುಗೊಳಿಸಿದ್ದು, ಅವೈಜ್ಞಾನಿಕವಾಗಿ ಜೆಸಿಬಿಯಿಂದ ಮಣ್ಣು ಅಗೆದಿದ್ದರಿಂದಾಗಿ ಧರ್ನಪ್ಪ ಪೂಜಾರಿಯವರ ಮನೆಗೆ ತಾಗಿಕೊಂಡು ಧರೆ ಸೃಷ್ಟಿಯಾಗಿದೆ. ಇದರಿಂದ ಧರ್ನಪ್ಪ ಪೂಜಾರಿಯವರ ಮನೆ ಹಾಗೂ ಎರಡು ತೆಂಗಿನ ಮರಗಳು ಕುಸಿದು ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಕಳೆದೆರಡು ದಿನಗಳ ಹಿಂದ ಸುರಿದ ತುಂತುರು ಮಳೆಗೆ ಧರ್ನಪ್ಪ ಪೂಜಾರಿಯವರ ಮನೆಯ ಒಂದು ಬದಿ ಕುಸಿದಿದ್ದು, ಅದಕ್ಕೆ ಟರ್ಫಾಲಿನ್ ಹಾಕಲಾಗಿದೆ. ಇನ್ನು ಮಳೆಗಾಲದಲ್ಲಿ ಇವರ ಸಂಪೂರ್ಣ ಮನೆಗೆ ಅಪಾಯವುಂಟಾಗುವ ಸಾಧ್ಯತೆ ಹೆಚ್ಚಾಗಿದೆ.
ನಾವು ಮನೆಯಲ್ಲಿ ಇಲ್ಲದ ಸಂದರ್ಭ ಇವರು ಜೆಸಿಬಿ ಮೂಲಕ ಕಾಮಗಾರಿ ನಡೆಸಿದ್ದು, ಧರೆಯನ್ನು ಸಂಪೂರ್ಣ ನನ್ನ ಮನೆಯ ಬದಿಯವರೆಗೆ ಅಗೆದು ಧರೆಯ ಬದಿ ಅಗೆದ ಮಣ್ಣಿನ ರಾಶಿಯನ್ನು ಹಾಕಲಾಗಿದೆ. ಆದ್ದರಿಂದ ಧರೆ ಕುಸಿಯದಂತೆ ಅಲ್ಲಿ ತಡೆಗೋಡೆ ನಿರ್ಮಿಸಿಕೊಡಲು ಕೆ. ಸುಬ್ಬಮ್ಮ ಅವರಿಗೆ ನಿರ್ದೇಶಿಸಬೇಕೆಂದು ಧರ್ನಪ್ಪ ಪೂಜಾರಿಯವರು ಗ್ರಾಮ ಆಡಳಿತಾಧಿಕಾರಿ ಮತ್ತು ಉಪ್ಪಿನಂಗಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗೆ ನೀಡಿದ ದೂರಿನಲ್ಲಿ ಮನವಿ ಮಾಡಿದ್ದಾರೆ.