ಕಣ್ಮುಚ್ಚಿ ಕುಳಿತ ಇಲಾಖೆ..!? ಸಾರ್ವಜನಿಕರ ಆಕ್ರೋಶ…
ಪುತ್ತೂರು: ಕುಂಬ್ರ-ಬೆಳ್ಳಾರೆ ರಾಜ್ಯ ಹೆದ್ದಾರಿಯಲ್ಲಿ ಕುಂಬ್ರದಿಂದ 2.5 ಕೀ.ಮೀ ದೂರದ ತ್ಯಾಗರಾಜನಗರದ ಅಮೈ ತಿರುವಿನಲ್ಲಿ ರಸ್ತೆ ಬದಿಯಲ್ಲೇ ಗುಂಡಿಯೊಂದು ನಿರ್ಮಾಣಗೊಂಡು ಅಪಘಾತಗಳಿಗೆ ಕಾರಣವಾಗುತ್ತಿದೆ. ಈಗಾಗಲೇ ಇಲ್ಲಿ ಹಲವು ಅಪಘಾತಗಳು ಸಂಭವಿಸಿದ್ದು ವಾಹನ ಸವಾರರು ಗಾಯಗೊಂಡಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಈ ಗುಂಡಿ ನಿರ್ಮಾಣಗೊಂಡಿದ್ದರೂ ಹೆದ್ದಾರಿ ಇಲಾಖಾ ಅಧಿಕಾರಿಗಳು ಮಾತ್ರ ಇದನ್ನು ಮುಚ್ಚಿಸುವ ಗೋಜಿಗೆ ಹೋಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಹೆದ್ದಾರಿಯ ಒಂದು ಬದಿಯಲ್ಲಿ ರಸ್ತೆಯು ಕುಸಿತಗೊಂಡು ಈ ಗುಂಡಿ ನಿರ್ಮಾಣಗೊಂಡಿದೆ. ಕುಂಬ್ರದಿಂದ ಬರುವಾಗ ರಸ್ತೆಯ ಎಡಬದಿಯಲ್ಲಿ ಈ ಗುಂಡಿ ಇದ್ದು ಅರ್ಧ ರಸ್ತೆಯನ್ನೇ ಗುಂಡಿ ಆಕ್ರಮಿಸಿಕೊಂಡಿದೆ. ಇಳಿಜಾರು ರಸ್ತೆ ಹಾಗೂ ತಿರುವಿನಿಂದ ಕೂಡಿರುವ ರಸ್ತೆ ಇದಾಗಿರುವುದರಿಂದ ಇಲ್ಲಿ ಗುಂಡಿ ಇರುವುದು ಪಕ್ಕನೆ ಗೊತ್ತಾಗುವುದಿಲ್ಲ ಇದರಿಂದಾಗಿ ಅಪಘಾತಗಳಿಗೆ ಕಾರಣವಾಗುತ್ತಿದೆ.
ವಾಹನ ಸವಾರರಿಗೆ ಅದರಲ್ಲೂ ದ್ವಿಚಕ್ರ ವಾಹನ ಸವಾರರಿಗೆ ಇದೊಂದು ಮರಣ ಗುಂಡಿಯಾಗಿದೆ. ಈಗಾಗಲೇ ಇಲ್ಲಿ ಹಲವು ದ್ವಿಚಕ್ರ ವಾಹನ ಸವಾರರು ಈ ಗುಂಡಿಯಿಂದಾಗಿ ಸ್ಕಿಡ್ ಆಗಿ ಬಿದ್ದು ಗಾಯಗೊಂಡಿದ್ದಾರೆ. ಕೆಲ ದಿನಗಳ ಹಿಂದೆ ಒಬ್ಬರು ದ್ವಿಚಕ್ರ ವಾಹನ ಸವಾರರು ಈ ಗುಂಡಿಗೆ ಬೈಕ್ ಬಿದ್ದು ನಿಯಂತ್ರಣ ತಪ್ಪಿ ಎದುರಿರುವ ದಾರಿ ಸೂಚನಾ ಫಲಕಕ್ಕೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಲ್ಲದೆ ಒಬ್ಬರು ಕೈ ಮುರಿದುಕೊಂಡಿದ್ದಾರೆ. ರಸ್ತೆಯ ಎಡಭಾಗದಲ್ಲಿ ಬರುವ ವಾಹನ ಸವಾರರಿಗೆ ಈ ಗುಂಡಿ ಕಾಣದೇ ಇರುವುದು ಮತ್ತು ಒಮ್ಮೆ ವಾಹನ ಗುಂಡಿಗೆ ಇಳಿದರೆ ಪಕ್ಕನೆ ಮುಂದಕ್ಕೆ ಚಲಿಸಲು ಕಷ್ಟವಾಗುವುದರಿಂದ ಅಪಘಾತಕ್ಕೆ ಕಾರಣಗುತ್ತಿದೆ.
ಇದೇ ರಸ್ತೆಯಲ್ಲಿ ಮುಂದಕ್ಕೆ ತ್ಯಾಗರಾಜನಗರ ಬಸ್ಸು ನಿಲ್ದಾಣದ ಸಮೀಪ ರಸ್ತೆ ಮಧ್ಯೆದಲ್ಲೇ ಒಂದು ಗುಂಡಿ ಇದೆ. ಇದು ಕೂಡ ದ್ವಿಚಕ್ರ ವಾಹನ ಸವಾರರಿಗೆ ಅಪಾಯಕಾರಿಯಾಗಿದೆ. ರಸ್ತೆ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ರಸ್ತೆ ಗುಂಡಿಗಳನ್ನು ಮುಚ್ಚಿಸುವ ಕೆಲಸ ಮಾಡಬೇಕಾಗಿದೆ. ಇನ್ನಷ್ಟು ಅಪಘಾತಗಳು ಸಂಭವಿಸಿ ಜೀವ ಹಾನಿಯಾಗುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.