ಕೃಷ್ಣನೂರಿನಲ್ಲಿ ಪ್ರಧಾನಿ ಮೋದಿ : ಕನಕನ ಕಿಂಡಿ ಸ್ವರ್ಣ ಕವಚ ಲೋಕಾರ್ಪಣೆ

0

ಪುತ್ತೂರು: ಉಡುಪಿ ಶ್ರೀ ಕೃಷ್ಣ ಮಠದ ಆವರಣದಲ್ಲಿ ನಡೆಯಲಿರುವ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಭಾಗವಹಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ (ನ.28) ಉಡುಪಿಗೆ ಆಗಮಿಸಿದ್ದರು. ಸೇನಾ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಪ್ರಧಾನಿ ಮೋದಿ, ಅಲ್ಲಿಂದ ವಿಶೇಷ ಹೆಲಿಕಾಪ್ಟರ್‌ನಲ್ಲಿ ಉಡುಪಿಗೆ ಆಗಮಿಸಿದರು.

ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನ ರಾಜ್ಯ ಸರ್ಕಾರದ ಪರವಾಗಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ರಾಜೇಶ್ ನಾಯಕ್, ಭಾಗೀರಥಿ ಮುರುಳ್ಯ, ಗ್ರೇಟರ್ ಬೆಂಗಳೂರು ಆಯುಕ್ತ ಮಹೇಶ್ವರ ರಾವ್, ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾಧಿಕಾರಿ ಎಚ್.ವಿ. ದರ್ಶನ್ ಮತ್ತಿತರರು ಉಪಸ್ಥಿತರಿದ್ದರು.

ಆದಿ ಉಡುಪಿ ಹೆಲಿಪ್ಯಾಡ್‌ಗೆ ಬಂದಿಳಿದ ಪ್ರಧಾನಿ ಮೋದಿ ಅವರು ಅಲ್ಲಿಂದ ಬನ್ನಂಜೆ ಮಾರ್ಗವಾಗಿ ಉಡುಪಿ ಶ್ರೀ ಕೃಷ್ಣ ಮಠಕ್ಕೆ ತೆರಳಿದ್ದು, ಬನ್ನಂಜೆಯಿಂದ ಕಲ್ಸಂಕದವರೆಗೆ ರೋಡ್‌ ಶೋ ನಡೆಯಿತು. ಬೆಳಗ್ಗಿನಿಂದಲೂ ಮೋದಿ ಅವರನ್ನ ಕಣ್ತುಂಬಿಕೊಳ್ಳಲು ಕಾದು ಕುಳಿತಿದ್ದ ಜನ ಪುಷ್ಪವೃಷ್ಟಿಗೈಯುವ ಮೂಲಕ ಸಂಭ್ರಮಿಸಿದರು. ರೋಡ್ ಶೋ ಮೂಲಕ ಕೃಷ್ಣ ಮಠಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಕೃಷ್ಣ ಮಠದ ಪ್ರಮುಖರು ಬರಮಾಡಿಕೊಂಡರು. ಕೃಷ್ಣ ಮಠದ ಎದುರಲ್ಲಿರುವ ಮಧ್ವ ಸರೋವರದಲ್ಲಿ ಪ್ರಧಾನಿ ಮೋದಿ ತೀರ್ಥ ಸಂಪ್ರೋಕ್ಷಣೆ ಮಾಡಿದರು. ಜನರತ್ತ ಕೈ ಬೀಸುತ್ತ ಶ್ರೀ ಕೃಷ್ಣ ಮಠ ಪ್ರವೇಶ ಮಾಡಿದರು.

ಸ್ವರ್ಣಲೇಪಿತ ಕನಕನ ಕಿಂಡಿ ಅನಾವರಣ ಮಾಡಿದ ಪ್ರಧಾನಿ
ಶ್ರೀಕೃಷ್ಣ ಮಠದ ಪವಿತ್ರ ಕನಕನ ಕಿಂಡಿಗೆ ಕನಕ ಕವಚ ನಿರ್ಮಿಸಲಾಗಿದೆ. ಪ್ರಧಾನಿ ಮೋದಿ ಇದನ್ನು ಅನಾವರಣ ಮಾಡಿದರು. ಕನಕ ಕವಚದ ಕನಕನ ಕಿಂಡಿಯಿಂದ ಉಡುಪಿ ಕೃಷ್ಣನನ್ನು ಕಣ್ತುಂಬಿಕೊಂಡರು. ಮುಖ್ಯಪ್ರಾಣ ದೇವರು ಮತ್ತು ಗರುಡ ದರ್ಶನ ಪಡೆದ ಪ್ರಧಾನಿ ನರೇಂದ್ರ ಮೋದಿ ಬಳಿಕ ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾದರು. ಲಕ್ಷಕಂಠ ಗೀತಗಾಯನ ಕಾರ್ಯಕ್ರಮದಲ್ಲಿ ಭಾಗಿಯಾದರು.

“ಎಲ್ಲರಿಗೂ ನಮಸ್ಕಾರ.. ಜೈ ಶ್ರೀಕೃಷ್ಣ”
ಉಡುಪಿ ಶ್ರೀ ಕೃಷ್ಣ ದರ್ಶನದಿಂದ ಆತ್ಮೀಯ ಆಧ್ಯಾತ್ಮಿಕ ಆನಂದ ಸಿಕ್ಕಿದೆ. ಒಂದು ಲಕ್ಷ ಜನರು ಒಂದೆಡೆ ಸೇರಿ ಭಗವದ್ಗೀತೆ ಪಠಿಸುವ ಮೂಲಕ ಭಗವಂತನ ದಿವ್ಯ ಅನುಭೂತಿ ಪಡೆದಂತಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು. ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. “ಎಲ್ಲರಿಗೂ ನಮಸ್ಕಾರ.. ಜೈ ಶ್ರೀಕೃಷ್ಣ” ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ಅವರು, ಆರಂಭದಲ್ಲೇ ಮಕ್ಕಳು ಮಾಡಿ ತಂದ ಚಿತ್ರಗಳು ಕೊಡಿ, ಎಸ್‌ ಪಿಜಿ ಮತ್ತು ಪೊಲೀಸರು ಸಹಾಯ ಮಾಡಿ. ಅದರ ಹಿಂದೆ ವಿಳಾಸ ಬರೆದರೆ ನಾನು ಧನ್ಯವಾದ ಕಳಿಹಿಸುತ್ತೇನೆ. ಮಕ್ಕಳು ಇಷ್ಟು ಕಷ್ಟಪಡುತ್ತಾರೆ, ಅವರಿಗೆ ಅನ್ಯಾಯವಾದರೆ ನನಗೆ ಬೇಸರವಾಗುತ್ತದೆ ಎಂದರು. ಇಷ್ಟು ಜನ ಸಂತರ ಉಪಸ್ಥಿತಿ ನನ್ನ ಸೌಭಾಗ್ಯ. ನನಗೆ ಇಷ್ಟು ಆಶೀರ್ವಾದ ಸಿಕ್ತುಇನ್ನಷ್ಟು ಕೆಲಸ ಮಾಡುವ, ನನ್ನ ಮೇಲಿರುವ ವಿಶ್ವಾಸ ಪೂರ್ಣಗೊಳಿಸುವ ಶಕ್ತಿ ಸಿಗಲಿದೆ ಎಂದರು. ಶ್ರೀಕೃಷ್ಣ ಆಶೀರ್ವಾದ, ಮಧ್ವಾಚಾರ್ಯರ ಈ ಭೂಮಿಗೆ ಬರುವುದೇ ನನಗೆ ಸಂತಸದ ಸಂದರ್ಭ. ಈ ಕಾರ್ಯಕ್ರಮದಲ್ಲಿ ಪುತ್ತಿಗೆ ಉಭಯ ಶ್ರೀಪಾದರು, ರಾಜ್ಯಪಾಲ, ಕೇಂದ್ರ ಸಚಿವರು, ಸಂಸದ, ಶಾಸಕರು, ಅಷ್ಟಮಠಗಳ ಪ್ರತಿನಿಧಿಗಳು, ಸಂತರು ಸೇರಿದ್ದಾರೆ. ಕರ್ನಾಟಕ ಭೂಮಿಯಲ್ಲಿ ಬರುವುದೇ ನನಗೆ ಹೊಸ ಅನುಭೂತಿ ನೀಡುತ್ತದೆ. ಉಡುಪಿಗೆ ಬರುವುದು ಯಾವಗಲೂ ಅದ್ಭುತ ಭಾವನೆ ಎಂದರು.

ನನ್ನ ಜನ್ಮ ಗುಜರಾತ್‌ ನಲ್ಲಿ ಆಯಿತು. ಗುಜರಾತ್‌ ಮತ್ತು ಉಡುಪಿ ನಡುವೆ ವಿಶೇಷ ಸಂಬಂಧವಿದೆ. ಇಲ್ಲಿ ಸ್ಥಾಪನೆ ಮಾಡಿರುವ ಕೃಷ್ಣನ ಮೂರ್ತಿಯ ಪೂಜೆ ಮೊದಲು ದ್ವಾರಕದಲ್ಲಿ ರುಕ್ಮಿಣಿ ಮಾಡುತ್ತಿದ್ದರು. ಮತ್ತೆ ಮಧ್ವಾಚಾರ್ಯರು ಇಲ್ಲಿ ಸ್ಥಾಪನೆ ಮಾಡಿದ್ದರು. ಈ ವಿಗ್ರಹದ ದರ್ಶನದಿಂದ ಆತ್ಮೀಯ ಆಧ್ಯಾತ್ಮಿಕ ಆನಂದ ನೀಡಿದೆ ಎಂದು ಪ್ರಧಾನಿ ಹೇಳಿದರು. ರಾಮಚರಿತ ಮಾನಸದ ಉಲ್ಲೇಖ ಮಾಡಿದ ಅವರು ಕಲಿಯುಗದಲ್ಲಿ ಗೀತೆಯ ಕೀರ್ತನೆಯಿಂದ ಸಾಧನೆ ಸಾಧ್ಯ. ಈ ಮಂತ್ರಪಠಣದಿಂದ ಮುಕ್ತಿ ಸಾಧ್ಯ ಎಂದರು. ಇಂದು ವಿಶೇಷವಾಗಿ ಪರಮಪೂಜ್ಯ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಲಕ್ಷ ಕಂಠ ಗೀತೆಯನ್ನು ದಿವ್ಯರೂಪದಿಂದ ಸಕಾರ ಮಾಡಿದ್ದಾರೆ. ಕೋಟಿ ಗೀತಾ ಲೇಖನ ಯಜ್ಞದಿಂದ ಜನರಿಗೆ ಗೀತೆ ಬರೆಯುವ ಅವಕಾಶ ನೀಡಿದ್ದಾರೆ. ಇದು ಸನಾತನ ಪರಂಪರೆಯ ಜನಾಂದೋಲನವಾಗಿದೆ. ಗೀತೆಯನ್ನು ಮುಂದಿನ ಪೀಳಿಗೆಗೆ ಮುಂದುವರಿಸಲು ಈ ಕಾರ್ಯಕ್ರಮ ಸಹಾಯಕವಾಗಿದೆ ಎಂದರು. ಅಯೋಧ್ಯೆಯ ರಾಮ ಮಂದಿರದಲ್ಲಿ ಧರ್ಮ ಧ್ವಜ ಸ್ಥಾಪನೆಯಾಗಿದೆ. ಅಯೋಧ್ಯೆಯಿಂದ ಉಡುಪಿ ತನಕ ರಾಮಭಕ್ತರಿದ್ದಾರೆ. ರಾಮ ಮಂದಿರ ಆಂದೋಲನದಲ್ಲಿ ಉಡುಪಿಯ ಕೊಡುಗೆ ಲೋಕಕ್ಕೆ ಗೊತ್ತು. ಶ್ರೀ ರಾಮ ಮಂದಿರ ನಿರ್ಮಾಣಕ್ಕಾಗಿ ಉಡುಪಿಯ ಶ್ರೀವಿಶ್ವೇಶತೀರ್ಥರು ಹೊಸ ದಿಕ್ಕನ್ನು ತೋರಿಸಿ ಕೊಟ್ಟಿದ್ದರು. ಮತ್ತೊಂದು ವಿಶೇಷ ಎಂದರೆ ಹೊಸ ರಾಮ ಮಂದಿರಲ್ಲಿ ಮಧ್ವಾಚಾರ್ಯರ ಹೆಸರಿನಲ್ಲಿ ವಿಶಾಲ ದ್ವಾರವು ಇದೆ ಎಂದರು.

ಉಡುಪಿಯಲ್ಲಿ ಕೃಷ್ಣ ಭಕ್ತಿಯಿದೆ. ಧ್ಯಾನವಿದೆ. ಸಾವಿರಾರು ಜನರ ಅನ್ನ ಸೇವೆಯ ಸಂಕಲ್ಪವಿದೆ. ಇದು ಧ್ಯಾನ-ಭಕ್ತಿ-ಸೇವೆಯ ಸಂಗಮ ಎಂದು ಪ್ರಧಾನಿ ಮೋದಿ ಹೇಳಿದರು. ಶ್ರೀ ಕೃಷ್ಣನು ಯುದ್ಧಭೂಮಿಯಲ್ಲಿ ಗೀತೆಯ ಧರ್ಮೋಪದೇಶಗಳನ್ನು ನೀಡಿದನು. ಶಾಂತಿ ಮತ್ತು ಸತ್ಯವನ್ನು ಪುನಃಸ್ಥಾಪಿಸಲು ಅತ್ಯಾಚಾರಿಗಳನ್ನು ಕೊನೆಗೊಳಿಸುವುದು ಮುಖ್ಯ ಎಂದು ಭಗವದ್ಗೀತೆ ನಮಗೆ ಕಲಿಸುತ್ತದೆ. ಇದು ರಾಷ್ಟ್ರೀಯ ಭದ್ರತಾ ನೀತಿಯ ಸಾರವೂ ಹೌದು. ಆಪರೇಷನ್ ಸಿಂದೂರ್‌ ಸಮಯದಲ್ಲಿ ದೇಶವು ನಮ್ಮ ಸಂಕಲ್ಪ ನೋಡಿದೆ. ಪಹಲ್ಗಾಮ್‌ ನಲ್ಲಿ ಕೆಲವು ಭಾರತೀಯ ಪ್ರಜೆಗಳು ಜೀವ ಬಿಟ್ಟರು. ಅದರಲ್ಲಿ ಕರ್ನಾಟಕದ ಸೋದರರೂ ಇದ್ದರು. ಮೊದಲೆಲ್ಲಾ ಸರ್ಕಾರಗಳು ಸುಮ್ಮನೆ ಕುಳಿತು ಕೊಳ್ಳುತ್ತಿತ್ತು. ಆದರೆ ಇದು ನವ ಭಾರತ. ‌ನಾವು ಯಾರ ಎದುರೂ ತಲೆ ಬಾಗಿಸಲಾರೆವು. ನಾಗರಿಕ ರಕ್ಷಣೆಯ ಕೆಲಸದಿಂದ ಹಿಂದೆ ಸರಿಯಲಾರೆವು. ನಮಗೆ ಶಾಂತಿಯನ್ನು ಹೇಗೆ ಸ್ಥಾಪಿಸುವುದು ಮತ್ತು ಅದನ್ನು ಹೇಗೆ ರಕ್ಷಿಸುವುದು ಎಂದು ನಮಗೆ ಗೊತ್ತು ಎಂದು ಮೋದಿ ಗುಡುಗಿದರು. ನಾವು ವಸುದೈವ ಕುಟುಂಬಕಂ ನಂಬುತ್ತೇವೆ. ಇದೇ ವೇಳೆ ಧರ್ಮೋ ರಕ್ಷತಿ ರಕ್ಷಿತಃ ಎನ್ನುವುದನ್ನೂ ಹೇಳಿಕೊಡುತ್ತದೆ. ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ನೀತಿಯ ಹಿಂದೆ ಶ್ರೀ ಕೃಷ್ಣ ಶ್ಲೋಕಗಳಿವೆ. ಆಯುಷ್ಮಾನ್‌ ಭಾರತ್‌ ನಂತಹ ಯೋಜನೆಗಳ ಹಿಂದೆ ಕೃಷ್ಣ ಪ್ರೇರಣೆಯಿದೆ ಎಂದರು.

LEAVE A REPLY

Please enter your comment!
Please enter your name here