ಸಮಕಾಲೀನ ಹಾಸ್ಯಗಾರರ ಸಾಲಿನಲ್ಲಿ ಬಂಟ್ವಾಳ ಜಯರಾಮ ಆಚಾರ್ಯ ದೊಡ್ಡ ಹೆಸರು. ಪಾತ್ರನಿರ್ವಹಣೆಯಾದ ತಕ್ಷಣ ವೇಷ ಕಳಚುವಂತೆ ಒಡನಾಡಿಗಳು ನೋಡುತ್ತಿದ್ದಂತೆಯೇ ಇಹದ ಪಾತ್ರವನ್ನು ಮುಗಿಸಿದ ಆಚಾರ್ಯರು ಇನ್ನು ರಂಗಸ್ಥಳದಲ್ಲಿ ಕಾಣಲಾರರು ಎಂಬುವುದನ್ನು ನೆನೆಯುವಾಗಲೇ ಕಂಬನಿ ಕಪೋಲವನ್ನು ನೆನೆಸುತ್ತದೆ.
ಸುಮಾರು ಐದು ದಶಕಗಳ ಕಾಲ ಯಕ್ಷಗಾನ ರಂಗ ರಸಿಕರನ್ನು ನಗಿಸಿ ತನ್ನ ನಿರ್ಗಮನದೊಂದಿಗೆ ಅವರನ್ನು ಅಳಿಸಿ ಭೌತಿಕಮರೆಯಾದ ಹಾಸ್ಯಗಾರರು ಕಲಾಭಿಮಾನಿಗಳ ಹೃದಯದಲ್ಲಿ ಅಳಿಸಲಾರದ ಮುದ್ರೆಯೊತ್ತಿದ್ದಾರೆ. ಅದೂ ತೀರಾ ಅನಿರೀಕ್ಷಿತವಾಗಿ. ಬದುಕೆಂದರೆ ಹಾಗೇ ಅಲ್ಲವೆ? ನೀರ ಮೇಲಣ ಗುಳ್ಳೆ… ಎಂಬ ದಾಸರ ಮಾತು ಸ್ಪಷ್ಟ ಅರ್ಥವಾಗುವುದು ಇಂತಹ ಸಂದರ್ಭಗಳಲ್ಲೆ. ಇರಲಿ. ಎಲ್ಲರೂ ಸ್ವೀಕರಿಸಲೇಬೇಕಾದ ದೇವರ ಕರೆಯನ್ನು ಅವರೂ ಸ್ವೀಕರಿಸಿದ್ದಾರೆ.
ಈ ಸಂದರ್ಭದಲ್ಲಿ ವ್ಯವಸಾಯಿ ಮೇಳದ ಮೂವರು ಹಾಸ್ಯಗಾರರನ್ನು ನೆನಪಿಸಲೇಬೇಕು. ವಿಟ್ಲ ಗೋಪಾಲಕೃಷ್ಣ ಜೋಷಿ, ಪೆರುವೊಡಿ ನಾರಾಯಣ ಭಟ್ ಮತ್ತು ಮಿಜಾರು ಅಣ್ಣಪ್ಪ. ಇವರಲ್ಲಿ ಜೋಷಿ ಅವರು ವಿನೂತನ ಹಾಸ್ಯವೇಷ ಪರಂಪರೆಯನ್ನು ಆರಂಭಿಸಿದವರಾದರೆ, ಪೆರುವೊಡಿಯವರು ಹೊಸತೊಂದು ಭಾಷಾಪರಂಪರೆಯ ಹಾಸ್ಯಪ್ರವರ್ತಕರು. ತೌಳವ ಸಂಸ್ಕೃತಿಯ ಪ್ರಾತಿನಿಧಿಕ ಹಾಸ್ಯ ಮಿಜಾರು ಅಣ್ಣಪ್ಪ ಅವರದು. ಈ ಮೂವರೂ ಸಹಜ ಹಾಸ್ಯಕ್ಕೆ ಹೆಸರಾದವರು. ಈ ಮೂವರ ಹಾಸ್ಯಗಳನ್ನು ನೋಡಿ ಬೆಳೆದ ಬಂಟ್ವಾಳರಲ್ಲಿ ಇವರುಗಳ ಪ್ರಭಾವ ಕಾಣಬಹುದಾದರೂ ವಿಟ್ಲ ಜೋಷಿಯವರ ಪ್ರಭಾವ ತೀವ್ರತರವಾಗಿತ್ತು ಎಂದು ಹೇಳಬಹುದು. ನಿಲುವು, ನೋಟ, ನಡೆ, ಕುಣಿತ, ಮಾತು ಎಲ್ಲವೂ ಹಾಸ್ಯ. ತುಳು-ಕನ್ನಡ ಯಕ್ಷಗಾನಗಳೆರಡರಲ್ಲೂ ಸಮಾನವಾಗಿ ತನ್ನ ಪ್ರತಿಭಾವಿಲಾಸದಿಂದ ರಂಗುರಂಗಿನ ರಂಗಸ್ಥಳದಲ್ಲಿ ನಗೆಯ ರಂಗಿನ ಬುಗ್ಗೆ ಚಿಮ್ಮಿಸುತ್ತಿದ್ದ ಜಯರಾಮರ ನಿರ್ಗಮನದಿಂದ ’ವಿಟ್ಲಜೋಷಿ’ ಪರಂಪರೆಯ ಹಾಸ್ಯದ ಕೊಂಡಿಯೊಂದು ಕಳಚಿದಂತಾಯಿತು. ಮೇಲೆ ಹೆಸರಿಸಿದ ಮೂವರು ಹಾಸ್ಯಗಾರರಲ್ಲಿಲ್ಲದ ವಿಶಿಷ್ಟ ಕುಣಿತ ಇವರಲ್ಲಿತ್ತು. ಒಂದು ಹಂತದಲ್ಲಿ ಆಯಾಸವೆಂದರೇನೆಂದೇ ತಿಳಿಯದ ಕುಣಿತಗಾರ. ಅಶ್ಲೀಲ, ಉಭಯಾರ್ಥ ಬಿಂಬಿಸುವ ಕೆಳಸ್ತರದ ಮಾತುಗಳು ಇವರ ಬಳಿ ಸೋಂಕದು. ಆ ಮಟ್ಟಿಗೆ ಭಾಷಾಮಡಿವಂತಿಕೆಯನ್ನು ಕಾಪಿಟ್ಟುಕೊಂಡ ಸ್ಥೈರ್ಯವನ್ನು ಯಾರಿಂದಲೂ ಕೆಡಿಸಲಾಗಲಿಲ್ಲ. ರಂಗಸ್ಥಳದ ಪಾವಿತ್ರ್ಯವನ್ನು ಕಾಪಾಡಿಕೊಂಡು ಹೊಸ ಪ್ರೇಕ್ಷಕರನ್ನು ನಗಿಸುವುದಕ್ಕೂ ಒಂದು ಪ್ರತಿಭಾಶಕ್ತಿ ಬೇಕು. ಅಂತಹ ಅಸಾಮಾನ್ಯ ಪ್ರತಿಭೆ ಬಂಟ್ವಾಳ ಜಯರಾಮ ಆಚಾರ್ಯರಲ್ಲಿತ್ತು. ಇದು ಅವರ ಅಪ್ಪನ ಆಸ್ತಿ.
ಮದ್ದಳೆಯನ್ನು ನುಡಿಸುವುದರಲ್ಲಿಯೂ ಆಚಾರ್ಯರು ಪ್ರವೀಣ. ಕಲಾವಿದರಿಗೆ ನಾದ ಸಾಕ್ಷಾತ್ಕಾರವಾಗಿ ಸ್ಪೂರ್ತಿ ಪುಟಿಯುವಂತೆ ಮದ್ದಳೆ ನುಡಿಸುವ ಕೈಚಳಕ ಅವರಿಗೆ ಸಿದ್ಧಿಸಿತ್ತು. ತುಳು ಚಲನಚಿತ್ರ ಮತ್ತು ನಾಟಕಗಳಲ್ಲೂ ಜನಮನಗೆದ್ದ ಇವರ ಸಹಜ ಅಭಿನಯ ಇವರೋರ್ವ ಅಭಿಜಾತ ಕಲಾವಿದನೆಂದು ಸ್ಥಾಪಿಸಿದೆ.
ಜಯರಾಮರು ವ್ಯಕ್ತಿಶಃ ತುಂಬಾ ಒಳ್ಳೆಯವರು. ತಾನಾಯಿತು. ತನ್ನ ಕೆಲಸವಾಯಿತು. ಹಾಗೆಂದು ಎಂದೂ ಸಾಂಘಿಕ ಜೀವನದಿಂದ ವಿಮುಖರಾಗದೆ ಎಲ್ಲರೊಡನೆ ಬೆರೆತು ಬಾಳಿದವರು ಎಲ್ಲರ ಪ್ರೀತಿಗೆ ಪಾತ್ರರಾದವರು. ದೇಹ ಸೌಷ್ಟವದಲ್ಲಿಯೂ, ಮನಸ್ಥಿತಿಯಲ್ಲೂ ಸದಾ ಸಮತೋಲನವನ್ನು ಕಾಪಾಡಿಕೊಂಡು ಬಂದವರು. ಬಾಳಿನ ಸುಖದುಃಖಗಳನ್ನು ಸಮಾನವಾಗಿ ಸ್ವೀಕರಿಸಿದವರು. ಎಂದೂ ಸುಮ್ಮನಿರದ ವ್ಯಕ್ತಿ. ಆದುದರಿಂದ ತಿರುಗಾಟದಿಂದ ನಿವೃತ್ತರಾಗದೆ ಹಿರಿಯಡಕ ಮೇಳ ಸೇರಿದರು. ಕಲಾವಿದನಿಗೆಂದೇನು ತನ್ನ ಕೆಲಸಕ್ಕೆ ಆಸಕ್ತಿಯಿಂದ ಸಮರ್ಪಿಸಿಕೊಂಡ ಕರ್ಮಯೋಗಿಗೆ ಕೆಲಸದಿಂದ ಮುಕ್ತಿ ಅಸಾಧ್ಯ. ಆದುದರಿಂದ ಒಂದು ಮೇಳ ಬಿಟ್ಟರೂ ಇನ್ನೊಂದು ಮೇಳ ಸೇರಿದರು. ಅವರ ಆಸೆ ಆಸೆಯಾಗಿಯೇ ಉಳಿದುದು ವಿಷಾದನೀಯ.
ಐವತ್ತಕ್ಕಿಂತ ಹೆಚ್ಚು ವರ್ಷಗಳ ಕಾಲ ಯಕ್ಷಪ್ರಿಯರನ್ನು ನಗಿಸಿದ ಈ ನಗೆಗಾರನ ಬಾಳು ನಗೆಯ ಬಾಳಲ್ಲ. ಬಡತನವನ್ನೇ ಹೊದ್ದ ಬದುಕಾದರೂ ಹಣದ ದುರಾಸೆ ಇವರನ್ನು ಪೀಡಿಸಲಿಲ್ಲ. ಹಣಕ್ಕಾಗಿ ಎಂದೂ ದೀನರಾಗಲಿಲ್ಲ. ಅನ್ಯರ ಮುಂದೆ ಕೈ ಚಾಚದ ಸ್ವಾಭಿಮಾನಿ. ಕಲೆಯನ್ನೇ ನೆಚ್ಚಿ ಕಲೋಪಜೀವಿಯಾದರೂ ಕಲೋಪಾಸಕನಾಗಿ ಯಕ್ಷಕಲಾಮಾತೆಯನ್ನು ಆರಾಧಿಸಿದ ಆಚಾರ್ಯರು ಕಲೆಯಲ್ಲೇ ಐಕ್ಯರಾಗಿದ್ದಾರೆ. ಅವರ ಭೌತಿಕ ಶರೀರ ಮರೆಯಾದರೂ ಅವರು ಅಭಿನಯಿಸಿದ ಅನೇಕ ಪಾತ್ರಗಳು ಅಡಕಚಿತ್ರದಲ್ಲಿ ಅಜರಾಮರವಾಗಿವೆ. ಕಲಾವಿದರಿಗೆ ಇನ್ನೇನು ಬೇಕು? ಆದರೆ ಅಭಿಮಾನಿಗಳಿಗೆ ಆ ಜೀವ ಇನ್ನೂ ಬೇಕು ಬೇಕು ಎಂಬ ಅಪೇಕ್ಷೆ ಇರುವುದು ಸಹಜವೆ. ಬೇಕು ಬೇಕು ಎಂಬುದನ್ನು ಕಳೆದುಕೊಳ್ಳುವುದೇ ಬದುಕಿನ ವಿಚಿತ್ರ.
ಬರಹ: ತಾರಾನಾಥ ವರ್ಕಾಡಿ
ಯಕ್ಷಗಾನ ಕಲಾವಿದರು