ಪುತ್ತೂರು: ಪ್ರತಿಷ್ಠಿತ ಕ್ಯಾಂಪ್ಕೊ ಸಂಸ್ಥೆಯ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿಯವರ ನೇತೃತ್ವದ ನಿಯೋಗ ವಿಶ್ವ ಆರೋಗ್ಯ ಸಂಸ್ಥೆ (WHO)ಯ ಮಾಜಿ ವಿಜ್ಞಾನಿ ಡಾ.ಸೌಮ್ಯ ಸ್ವಾಮಿನಾಥನ್ರವರನ್ನು ಚೆನ್ನೈಯಲ್ಲಿ ಭೇಟಿ ಮಾಡಿದರು.
ಭೇಟಿ ಸಂದರ್ಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಅಡಿಕೆಯ ಉಪಯೋಗ ಕ್ಯಾನ್ಸರ್ ಕಾರಕವೆಂದು ಪರಿಗಣಿಸಿರುವುದು, ಅಡಿಕೆಯನ್ನೇ ಜೀವನಾಧಾರವಾಗಿ ನಂಬಿರುವ ರೈತರ ಮೇಲೆ ಬೀರಿರುವ ಪರಿಣಾಮದ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಯಿತು. ನಿಯೋಗದಲ್ಲಿ ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕ ಡಾ.ಸತ್ಯನಾರಾಯಣ ಹಾಗೂ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಕಾರ್ಯನಿರ್ವಾಹಕ ಅಽಕಾರಿ ಡಾ.ಕೇಶವ ಭಟ್ ಭಾಗವಹಿಸಿದ್ದರು.
ಅಡಿಕೆಯ ಉಪಯೋಗವು ಕ್ಯಾನ್ಸರ್ ಕಾರಕವಲ್ಲ ಬದಲಾಗಿ ಶಮನಕಾರಕ ಗುಣಗಳನ್ನು ಹೊಂದಿರುವುದನ್ನು ಸಾಬೀತುಪಡಿಸುವ ಸುಮಾರು ೨೦ಕ್ಕೂ ಹೆಚ್ಚು ಸಂಶೋಧನಾ ವರದಿಗಳನ್ನು ಪ್ರಸ್ತುತಪಡಿಸಿ ವಿಶ್ವ ಆರೋಗ್ಯ ಸಂಸ್ಥೆಯ ಮಾಜಿ ವಿಜ್ಞಾನಿಯವರಿಗೆ ಮನವರಿಕೆ ಮಾಡಲಾಯಿತು. ರೈತರ ಸಮಸ್ಯೆಗಳ ಬಗ್ಗೆ ತಿಳುವಳಿಕೆ ಪಡೆದು, ಇಂತಹ ವಿಶ್ವಾಸಾರ್ಹ ದಾಖಲೆಗಳನ್ನು ಇಂಟರ್ನ್ಯಾಷನಲ್ ಏಜನ್ಸಿ ಫಾರ್ ಕ್ಯಾನ್ಸರ್ ರಿಸರ್ಚ್ (IARC)ಮತ್ತು ವರ್ಲ್ಡ್ ಹೆಲ್ತ್ ಆರ್ಗನೈಸೇಷನ್(WHO)ನಲ್ಲಿ ಮಂಡಿಸಿ ಅಡಿಕೆಯ ಬಗೆಗಿನ ತಪ್ಪು ತಿಳುವಳಿಕೆಯನ್ನು ಮರು ಪರಿಶೀಲಿಸಲು ಭಾರತ ಸರಕಾರದ ಮೂಲಕ ಒತ್ತಡ ಹೇರುವಂತೆ ಸಲಹೆ ನೀಡಿದ್ದಾರೆ. ರೈತರ ಸಮಸ್ಯೆ ನಿವಾರಣೆಗೆ ಕ್ಯಾಂಪ್ಕೋದ ಪ್ರಯತ್ನಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ, ಈ ಕುರಿತು ಕೇಂದ್ರ ಕೃಷಿ ಹಾಗೂ ಆರೋಗ್ಯ ಮತ್ತು ಕುಟುಂಬ ಇಲಾಖೆ ಸಚಿವಾಲಯಕ್ಕೆ ತಾನು ಅಭಿಪ್ರಾಯ ನೀಡುವುದಾಗಿ ಡಾ. ಸೌಮ್ಯ ಸ್ವಾಮಿನಾಥನ್ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.