ಉಪ್ಪಿನಂಗಡಿ: ಜಾಗದ ಕೊರತೆಯಿಂದ ಉಪ್ಪಿನಂಗಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಸಿ ಕಸ ವಿಲೇವಾರಿಗೆ ಸಮಸ್ಯೆಯಾಗಿದ್ದು, ಆದ್ದರಿಂದ ಗ್ರಾಮದಲ್ಲಿ ತ್ಯಾಜ್ಯ ವಿಲೇವಾರಿಗೆ ಸೂಕ್ತ ಜಾಗವನ್ನು ಹುಡುಕಿಕೊಡುವಂತೆ ಉಪ್ಪಿನಂಗಡಿ ಗ್ರಾ.ಪಂ.ನ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿಯ ಅಧ್ಯಕ್ಷ ಅಬ್ದುಲ್ ರಹಿಮಾನ್ ಅವರು ಸಮಿತಿಯ ಸದಸ್ಯರಲ್ಲಿ ಭಿನ್ನವಿಸಿಕೊಂಡ ಘಟನೆ ಅ.28ರಂದು ನಡೆದ ಸಮಿತಿಯ ಸಭೆಯಲ್ಲಿ ನಡೆದಿದೆ.
ಗ್ರಾ.ಪಂ.ನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸಮಿತಿಯ ಸದಸ್ಯ ಸಿದ್ದೀಕ್ ಕೆಂಪಿ, ಉಪ್ಪಿನಂಗಡಿ ಬಸ್ ನಿಲ್ದಾಣದ ಬಳಿ ಗ್ರಾ.ಪಂ.ನ ತ್ಯಾಜ್ಯ ನಿರ್ವಹಣಾ ಘಟಕ ಇದೆ. ಆದರೆ ಇಲ್ಲಿಗೆ ಬರುವ ಕಸವನ್ನು ಅಲ್ಲೇ ಮಣ್ಣಿನಡಿ ಹಾಕಿ ಹೂಳಲಾಗುತ್ತದೆ. ಇದರ ಬದಿಯೇ ನೇತ್ರಾವತಿ ನದಿಯಿದ್ದು, ಇದು ಪರಿಸರ ಹಾಗೂ ನದಿ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಇಂತಹ ಮೌಲ್ಯಧಾರಿತ ಜಾಗದಲ್ಲಿ ಈ ರೀತಿ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಮಿತಿಯ ಅಧ್ಯಕ್ಷ ಅಬ್ದುರ್ರಹ್ಮಾನ್ ಕೆ., ತ್ಯಾಜ್ಯ ವಿಲೇವಾರಿಗೆ ಜಾಗವೊಂದನ್ನು ಗುರುತಿಸಿಕೊಡಲು ಕಂದಾಯ ಇಲಾಖೆಯವರೊಂದಿಗೆ ಹಲವು ಬಾರಿ ಕೇಳಿ ಕೊಂಡರೂ ಅದು ಸಾಧ್ಯವಾಗಿಲ್ಲ. ಪಂಚಾಯತ್‌ಗೆ ಸೇರಿದ ಜಾಗದಲ್ಲಿ ತ್ಯಾಜ್ಯ ವಿಲೇವಾರಿಗೆ ಮುಂದಾದರೆ ಅಲ್ಲಿ ಸ್ಥಳೀಯರ ಆಕ್ಷೇಪ ಬರುತ್ತದೆ. ಹಾಗಾಗಿ ಪಂಚಾಯತ್‌ಗೆ ತ್ಯಾಜ್ಯ ವಿಲೇವಾರಿಯೇ ಒಂದು ದೊಡ್ಡ ತಲೆನೋವಾಗಿ ಪರಿಣಮಿಸಿದೆ ಎಂದರು.
ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಾಗ, ಎಲ್ಲಾದರೂ ತ್ಯಾಜ್ಯ ವಿಲೇವಾರಿಗೆ ಸೂಕ್ತ ಜಾಗವಿದ್ದರೆ ಹುಡುಕಿಕೊಡಿ ಎಂದು ಅಧ್ಯಕ್ಷರು ಈ ಸಂದರ್ಭ ಸಭೆಯಲ್ಲಿ ಹೇಳಿ, ಈ ಬಗೆಗಿನ ಚರ್ಚೆಗೆ ತೆರೆ ಎಳೆದರು.
ಸಮಿತಿ ಸದಸ್ಯ ಮುಹಮ್ಮದ್ ಕೆಂಪಿ ಮಾತನಾಡಿ, ಜಲಜೀವನ್ ಯೋಜನೆಯನ್ನು ಗ್ರಾ.ಪಂ.ಗೆ ಹಸ್ತಾಂತರ ಮಾಡಲಾಗಿದೆಯೇ ಎಂದು ಪ್ರಶ್ನಿಸಿದಾಗ ಉತ್ತರಿಸಿದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್, ಈವರೆಗೆ ಹಸ್ತಾಂತರ ಪ್ರಕ್ರಿಯೆ ನಡೆದಿಲ್ಲ ಎಂದರು. ಆಗ ಮುಹಮ್ಮದ್ ಕೆಂಪಿ ಮಾತನಾಡಿ, ಜಲಜೀವನ್ ಯೋಜನೆಯ ಕಾಮಗಾರಿ ತೀರಾ ಕಳಪೆಯಾಗಿದೆ. ಇಲ್ಲಿನ ಪಶು ವೈದ್ಯಕೀಯ ಆಸ್ಪತ್ರೆಯ ಬಳಿ ನಿರ್ಮಿಸಿರುವ ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ ಸೋರಿಕೆ ಕಂಡು ಬರುತ್ತಿದೆ. ಇನ್ನು ಹಲವು ಕಡೆಗಳಲ್ಲಿ ಪೈಪ್‌ಲೈನ್‌ಗಳನ್ನು ಭೂಮಿಯಡಿ ಹಾಕದೇ, ಭೂಮಿಯ ಮೇಲೆಯೇ ಇದೆ. ನೀರು ಬಾರದಿದ್ದರೂ, ಪೈಪ್‌ನೊಳಗೆ ಬರುವ ಗಾಳಿಯ ರಭಸಕ್ಕೆ ನೀರಿನ ಮೀಟರ್ ತಿರುಗುತ್ತಿದೆ. ಜಲಜೀವನ್ ಯೋಜನೆ ಬಂದ ಬಳಿಕ ಕುಡಿಯುವ ನೀರಿನ ಗ್ರಾಹಕರು ಹಲವು ಸಮಸ್ಯೆಗೊಳಗಾಗುವಂತಾಗಿದೆ. ಆದ್ದರಿಂದ ಇದೆಲ್ಲಾ ಗುತ್ತಿಗೆದಾರರು ಸರಿ ಪಡಿಸಿದ ಬಳಿಕವೇ ಗ್ರಾ.ಪಂ. ಇದನ್ನು ತನ್ನ ವಶಕ್ಕೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಮಿತಿಯ ಸದಸ್ಯ ಮಜೀದ್ ಮಠ ಮಾತನಾಡಿ, ಗ್ರಾ.ಪಂ. ಸಿಬ್ಬಂದಿಯನ್ನು ಮನೆಮನೆಗೆ ಕಳುಹಿಸಿ ಬಾಕಿ ಇರುವ ನೀರಿನ ಕರವನ್ನು ಶೀಘ್ರವಾಗಿ ವಸೂಲಾತಿಯಾಗುವಂತೆ ಕ್ರಮ ಕೈಗೊಳ್ಳಿ. ಅದರಲ್ಲಿ ಬಂದ ಹಣವನ್ನು ವಿದ್ಯುತ್ ಬಿಲ್ ಕಟ್ಟಿ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಸಮಿತಿಯ ಸದಸ್ಯರಾದ ಎಂ.ಎನ್. ಸರ್ವೇಶ್ ಭಟ್, ವಿಜೇತ ಪ್ರಭು, ಭಾರತಿ, ಯಶೋಧಾ, ಚೈತ್ರ, ಚಂದ್ರಾವತಿ, ಜಯಂತ ಪೊರೋಳಿ, ಉಷಾ ನಾಯ್ಕ ಹಾಗೂ ಗ್ರಾ.ಪಂ. ಸಿಬ್ಬಂದಿ ಜ್ಯೋತಿ ಉಪಸ್ಥಿತರಿದ್ದರು. ಗ್ರಾ.ಪಂ. ಪಿಡಿಒ ವಿಲ್ಫೆಡ್ ಲಾರೆನ್ಸ್ ರೊಡ್ರಿಗಸ್ ಸ್ವಾಗತಿಸಿ, ಕಾರ್ಯದರ್ಶಿ ಗೀತಾ ಶೇಖರ ವಂದಿಸಿದರು.