ಉಪ್ಪಿನಂಗಡಿ: ಬೆಳಗ್ಗಿನ ಹೊತ್ತು ಉಪ್ಪಿನಂಗಡಿಯಿಂದ ಪುತ್ತೂರಿಗೆ ತೆರಳಲು ಬಸ್ಸಿನ ಕೊರತೆಯಿದ್ದು, ವಿದ್ಯಾರ್ಥಿಗಳು ಹೆಚ್ಚಿನ ಸಮಸ್ಯೆ ಅನುಭವಿಸುವಂತಾಗಿದೆ. ಆದ್ದರಿಂದ ಈ ಸಮಯಲ್ಲಿ ಪುತ್ತೂರಿಗೆ ಹೆಚ್ಚುವರಿ ಬಸ್ನ ವ್ಯವಸ್ಥೆಯನ್ನು ಮಾಡಬೇಕೆಂದು ಪುತ್ತೂರು ಸಂತ ಫಿಲೋಮಿನಾ ಕಾಲೇಜು ವಿದ್ಯಾರ್ಥಿಗಳು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ.
ಬೆಳಗ್ಗೆ 8 ಗಂಟೆಗೆ ವಿದ್ಯಾರ್ಥಿಗಳು ಹಾಗೂ ಉದ್ಯೋಗಕ್ಕೆ ತೆರಳುವವರು ಏಕಕಾಲಕ್ಕೆ ಪುತ್ತೂರಿಗೆ ತೆರಳುವುದರಿಂದ ಈ ಸಮಯದಲ್ಲಿ ಅವರೇ ತುಂಬಿ ತುಳುಕಿರುತ್ತಾರಲ್ಲದೆ, ಬಸ್ಸಿನಲ್ಲಿ ಪ್ರತಿ ಬಾರಿಯೂ ನೂಕು-ನುಗ್ಗಲು ಉಂಟಾಗುತ್ತದೆ. ಹಲವು ವಿದ್ಯಾರ್ಥಿಗಳು ಬಸ್ಸಿನೊಳಗೆ ತುಂಬಿರುವ ಜನಸಂದಣಿಯಿಂದ ಬಸ್ ಹತ್ತಲಾಗದೇ ಸರಿಯಾದ ಸಮಯಕ್ಕೆ ಶಾಲೆ-ಕಾಲೇಜುಗಳಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ಸಮಯದಲ್ಲಿ ಉಪ್ಪಿನಂಗಡಿಯಿಂದ ಪುತ್ತೂರಿಗೆ ತೆರಳಲು ಹೆಚ್ಚುವರಿ ಕೆಎಸ್ಸಾರ್ಟಿಸಿ ಬಸ್ನ ಸೌಲಭ್ಯ ಕಲ್ಪಿಸಬೇಕೆಂದು ವಿದ್ಯಾರ್ಥಿಗಳು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಮನವಿ ನೀಡಿದ ನಿಯೋಗದಲ್ಲಿ ವಿದ್ಯಾರ್ಥಿಗಳಾದ ಫಾರಿಶ್ ಬಸ್ತಿಕ್ಕಾರ್, ಮುನೀಶ್, ಫಿದಾ, ಅಕ್ಷಯ, ರಾಹುಲ್, ಜಾನ್, ಧನುಶ್ರೀ, ಸಮೀರ್, ವಿಸ್ಡನ್, ರಾಘವ್ ಇದ್ದರು.