ಅ.30: ಡಾ.ನರೇಂದ್ರ ರೈ ದೇರ್ಲ ಅವರು ಸೇವಾ ನಿವೃತ್ತಿ

0

ಪುತ್ತೂರು: ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ, ಲೇಖಕ, ಅಂಕಣಕಾರ, ಕೃಷಿಕ ಡಾ. ನರೇಂದ್ರ ರೈ ದೇರ್ಲ ಅವರು ಅ.30ರಂದು ಸೇವಾ ನಿವೃತ್ತಿಯನ್ನು ಪಡೆಯುತ್ತಿದ್ದಾರೆ. ಕನ್ನಡದ ಜನಪ್ರಿಯ ಸಾಪ್ತಾಹಿಕ ‘ತರಂಗ” ವಾರಪತ್ರಿಕೆಯಲ್ಲಿ ಸುಮಾರು ಏಳು ವರ್ಷಗಳ ಕಾಲ ಸಹಸಂಪಾದಕರಾಗಿ, 1997ರಿಂದ ರಾಜ್ಯದ ಉನ್ನತ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಸೇವೆಗೆ ಸೇರಿದ ಇವರು ಸುಮಾರು 27 ವರ್ಷಗಳ ಕಾಲ ರಾಜ್ಯದ ವಿವಿಧ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಪ್ರಾಧ್ಯಾಪಕರಾಗಿ ವಿಭಾಗ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ. ಹಾಸನ ಜಿಲ್ಲೆಯ ಜಾವಗಲ್, ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ, ಬೆಳ್ಳಾರೆ, ಸುಳ್ಯ, ಪುತ್ತೂರು ಮುಂತಾದ ಮುಂತಾದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ.


ಈವರೆಗೆ ಸುಮಾರು 40ಕ್ಕಿಂತ ಹೆಚ್ಚು ಕೃತಿಗಳನ್ನು ಬರೆದಿರುವ ದೇರ್ಲ ಅವರ ಸುಮಾರು 16 ಪರಿಸರಪರ ಲೇಖನಗಳು ಕೇರಳ- ಕರ್ನಾಟಕದ ಪ್ರಾಥಮಿಕ ಹಂತದಿಂದ ಪದವಿ ಕಾಲೇಜಿನವರೆಗೆ ಪಠ್ಯಪುಸ್ತಕಗಳಲ್ಲಿ ಪಾಠಗಳಾಗಿವೆ. ಮಂಗಳೂರು, ದಾವಣಗೆರೆ, ಧಾರವಾಡ, ಬೆಂಗಳೂರು, ತುಮಕೂರು ಮುಂತಾದ ವಿಶ್ವವಿದ್ಯಾನಿಲಯಗಳ ಕನ್ನಡ ಪಠ್ಯಗಳಲ್ಲಿ  ಅವರ ಕೃಷಿ ಲೇಖನಗಳು ಪಾಠಗಳಾಗಿರುವುದು ಗಮನೀಯ ಮತ್ತು ತಾನು ಬರೆದಿರುವ ಪಾಠಗಳನ್ನು ತಾವೇ ಪಾಠ ಮಾಡುವ ಅವಕಾಶವೂ ಇವರದೆಂಬುವುದು ಅಭಿಮಾನದ ಸಂಗತಿ.

ಸುಮಾರು 20ಕ್ಕಿಂತ ಹೆಚ್ಚು ಪರಿಸರ ಸಂಬಂಧಿ, ಕೃತಿಗಳನ್ನು ಬರೆದ ದೇರ್ಲ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ,ಕರ್ನಾಟಕ ಸರಕಾರದ ಪರಿಸರ ಮಾಧ್ಯಮ ಪ್ರಶಸ್ತಿ, ಎರಡು ಬಾರಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಅತ್ಯುತ್ತಮ ಕೃಷಿ ಪುಸ್ತಕ ಪ್ರಶಸ್ತಿ, ಡಾ. ಹಾ.ಮಾ ನಾಯಕ ಅಂಕಣ ಸಾಹಿತ್ಯ ಪ್ರಶಸ್ತಿ, ಕುವೆಂಪು ಭಾಷಾ ಭಾರತಿ ಅನುವಾದ ಪ್ರಶಸ್ತಿ ,ಫ.ಗೋ ಹಾಗೂ ಅಕ್ಷರ ಪ್ರತಿಷ್ಠಾನದ ಪ್ರಶಸ್ತಿ ಲಭಿಸಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ’ ಕರಾವಳಿಯ ಕೃಷಿ ಪಲ್ಲಟ ಮತ್ತು ಪರಿಣಾಮ’ ಎನ್ನುವ ವಿಷಯದ ಅಧ್ಯಯನಕ್ಕಾಗಿ ಫೆಲೋಶಿಪ್ ನೀಡಿ ಗೌರವಿಸಿದೆ. ಹಂಪಿ ವಿಶ್ವವಿದ್ಯಾನಿಲಯದ ಪಿಎಚ್ ಡಿ ಮಾರ್ಗದರ್ಶಕರು ಆಗಿದ್ದ ದೇರ್ಲ  ಮಂಗಳೂರಿನ ಪ್ರತಿಷ್ಠಿತ ಸಂತ ಎಲೋಸಿಸ್ ಕಾಲೇಜು, ಮಂಗಳೂರು ವಿಶ್ವವಿದ್ಯಾನಿಲಯ ಮುಂತಾದ ಶೈಕ್ಷಣಿಕ ಸಂಸ್ಥೆಗಳ ಪಠ್ಯಪುಸ್ತಕ ಸಮಿತಿಯಲ್ಲೂ ಕೆಲಸ ಮಾಡಿದವರು.


ಇತ್ತೀಚಿಗೆ ದೇರ್ಲ ಅವರು ನಮ್ಮ ನಾಡಿನ ಪ್ರಯೋಗಶೀಲ ಅನಾಮಿಕ ಕೃಷಿಕರನ್ನು  ಹುಡುಕಿ ಸಂದರ್ಶಿಸಿ ಪ್ರಕಟಿಸುತ್ತಿರುವ ‘ಕರ್ನಾಟಕ ಕೃಷಿ ಕಥನ ಮಾಲಿಕೆ’ಯ ಆರು ಪುಸ್ತಕಗಳು ಈಗಾಗಲೇ ಕರ್ನಾಟಕ ಕೃಷಿ ಚರಿತ್ರೆಯನ್ನು ಮುಂದಿನ ತಲೆಮಾರಿಗೆ ದಾಟಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ನಾಡಿನ ಶ್ರೇಷ್ಠ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಒಡನಾಟವಿದ್ದ ರೈ ಅವರು ಸಂಪಾದಿಸಿ ಪ್ರಕಟಿಸಿದ್ದ ‘ತೇಜಸ್ವಿ ಪತ್ರಗಳು ‘ ಕುವೆಂಪು, ಶಿವರಾಮ ಕಾರಂತ, ಲಂಕೇಶ್, ಅನಂತಮೂರ್ತಿ, ಜಿ.ಎಸ್ ಶಿವರುದ್ರಪ್ಪ ದೇವನೂರು ಮುಂತಾದವರು ತೇಜಸ್ವಿರಿಗೆ ಬರೆದ ಪತ್ರಗಳ ಸಂಪುಟವಾಗಿದ್ದು ಸುಮಾರು ಏಳುನೂರು ಪತ್ರಗಳಿರುವ ಈ ಕೃತಿ ಕರ್ನಾಟಕದ ಬಹು ಮುಖ್ಯ ಸಾಹಿತಿಕ ಸಾಂಸ್ಕೃತಿಕ ದಾಖಲೆಯೂ ಆಗಿದೆ.


ತೇಜಸ್ವಿ ಪತ್ರಗಳು, ನೆಲದವರು, ಬೀಜ ಧ್ಯಾನ, ನೆಲಮುಖಿ, ಕಾಂಕ್ರೀಟ್ ಕಾಡಿನ ಪುಟ್ಟ ಕಿಟಕಿ, ಹಸಿರು ಉಸಿರು, ಹಳ್ಳಿಯ ಆತ್ಮಕಥೆ, ಬೇರು ಬದುಕು, ಕೊರೊನಾ ನಂತರದ ಗ್ರಾಮ ಭಾರತ, ಬೊಗಸೆ ತುಂಬ ಬೀಜ, ಸಾವಯವ ಕೃಷಿ, ಹಸಿರು ಕೃಷಿಯ ನಿಟ್ಟುಸಿರುಗಳು,  ನಂದನವನ, ಚೌಟರ ತೋಟ, ಸಸ್ಯಕಾಶಿ ಸೋನ್ಸ್ ಫಾರ್ಮ್, ಬಿ.ಕೆ ದೇವ ರಾವ್- ಅನ್ನ ದಾರಿಯ ಅನಂತ ಹೆಜ್ಜೆ, ಬದನಾಜೆ ಶಂಕರ್ ಭಟ್- ಅಡಿಕೆ ಮೌಲ್ಯವರ್ಧನೆಯ ನೆಲ ವಿಜ್ಞಾನಿ. ಇವರ ಕೃಷಿ ಕಥನ ಮಾಲಿಕೆಯ ಮುಖ್ಯ ಪುಸ್ತಕಗಳು. ಎಂಟು ಲೋಕ, ವಿಶುಕುಮಾರ್ ಬದುಕು ಬರಹ, ತೇಜಸ್ವಿಯೊಳಗೊಬ್ಬ ಕಲಾವಿದ, ಬೇಟೆಗಾರನ ಹುಲಿ ಹೆಜ್ಜೆ. ಮುಂತಾದ ಕೃತಿಗಳನ್ನೂ ಬರೆದಿರುವ ದೇರ್ಲ ಅವರು ‘ಕನಸು ಪ್ರಕಾಶನ’ ಎಂಬ ಪುಸ್ತಕ ಪ್ರಕಟನಾ ಸಂಸ್ಥೆಯನ್ನು ಹೊಂದಿದ್ದಾರೆ. ತೇಜಸ್ವಿಯವರ ಕರ್ವಾಲೋ ಕಾದಂಬರಿಯನ್ನುಇವರು ತುಳುವಿಗೆ ಅನುವಾದಿಸಿದ್ದಾರೆ. ಈ ಅನುವಾದಕ್ಕೆ ಕುವೆಂಪು ಭಾಷಾ ಭಾರತಿ ಅತ್ಯುತ್ತಮ ಅನುವಾದ ಪ್ರಶಸ್ತಿ ಲಭಿಸಿದೆ. ಇವರು ಸಂಪಾದಿಸಿದ ಕಾಲೇಜು ವಾರ್ಷಿಕ ಸಂಚಿಕೆಗಳು ವಿಶ್ವವಿದ್ಯಾನಿಲಯದ ಅತ್ಯುತ್ತಮ ವಾರ್ಷಿಕ ಸಂಚಿಕೆ ಪ್ರಶಸ್ತಿಯನ್ನು ಪಡೆದಿದೆ. ಪ್ರಜಾವಾಣಿಯಲ್ಲಿ  ‘ಅಜ್ಜನ ಜಗಲಿ’, ವಿಜಯವಾಣಿಯಲ್ಲಿ ‘ಹಸಿರು ಉಸಿರು’, ವಾರ್ತಾಭಾರತಿಯಲ್ಲಿ ‘ತನ್ಮಯ ‘ ವಾರೇಕೋರೆಯಲ್ಲಿ ‘ಮಣ್ಣು ಮಸಿ’ ಎನ್ನುವ ಪರಿಸರ ಸಂಬಂಧಿ ಅಂಕಣಗಳನ್ನು ಬರೆದಿರುವ ಇವರು ವಿದ್ಯಾರ್ಥಿ ಸ್ನೇಹಿ ಪ್ರಾಧ್ಯಾಪಕರು.

LEAVE A REPLY

Please enter your comment!
Please enter your name here