ನಿಡ್ಪಳ್ಳಿ: ಬುಳೆನಡ್ಕ ವಿಷ್ಣು ಭಟ್ ರವರ ಶ್ರದ್ದಾಂಜಲಿ ಕಾರ್ಯಕ್ರಮ

0

ವಿಷ್ಣು ಭಟ್ ಅನಭಿಷಿಕ್ತ ಚಕ್ರವರ್ತಿ- ಮುರಳೀಕೃಷ್ಣ ಹಸಂತಡ್ಕ

ನಿಡ್ಪಳ್ಳಿ;  ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಗ್ರಾಮ ಪಂಚಾಯತ್ ನಿಡ್ಪಳ್ಳಿ ಹಾಗೂ ಶ್ರೀ ಶಾಂತದುರ್ಗಾ ದೇವಸ್ಥಾನ ಇವರ ವತಿಯಿಂದ ಇತ್ತೀಚೆಗೆ ನಿಧನರಾದ ಪ್ರಗತಿಪರ ಕೃಷಿಕ, ಓಂ ಘಟ ವಿಷ್ಣು ಭಟ್ ಬುಳೆನಡ್ಕ ಇವರಿಗೆ ಶ್ರದ್ದಾಂಜಲಿ ಕಾರ್ಯಕ್ರಮ ಅ.29 ರಂದು ಪಾಣಾಜೆ ಪ್ರಾಥಮಿಕ ಕೃಷಿ ಸಹಕಾರ ಸಂಘದ ನಿಡ್ಪಳ್ಳಿ ಶಾಖೆಯ ಸಭಾ ಭವನದಲ್ಲಿ ನಡೆಯಿತು.

  ಹಿಂದೂ ಸಂಘಟನೆಯ ಮುಖಂಡ ಮುರಳೀಕೃಷ್ಣ ಹಸಂತಡ್ಕ ನುಡಿ ನಮನ ಸಲ್ಲಿಸಿ ಮಾತನಾಡಿ ವಿಷ್ಣು ಭಟ್ ರವರಲ್ಲಿ ನಾನು ಮಾತೃ ವಾತ್ಸಲ್ಯವನ್ನು ಕಂಡವ.ಇಡೀ ಸಮಾಜವನ್ನು ನನ್ನ ಒಂದು ಕುಟುಂಬ ಎಂದು ಭಾವಿಸಿ ಎಲ್ಲರ ಕಷ್ಟಗಳಿಗೆ ಸ್ಪಂದಿಸಿದ ಉತ್ತಮ ವ್ಯಕ್ತಿತ್ವವನ್ನು ಹೊಂದಿದ ವ್ಯಕ್ತಿಯಾಗಿದ್ದರು. ಊರಿನ ಅಭಿವೃದ್ಧಿ, ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ತುಂಬಾ ಕೊಡುಗೆ ನೀಡಿದವರು.ಸಮಾಜದ ಎಲ್ಲಾ ಕ್ಷೇತ್ರದಲ್ಲಿ ಅನೇಕ ಜನರನ್ನು ಬೆಳೆಸಿದ ಒಬ್ಬ ಅನಭಿಷಿಕ್ತ ಚಕ್ರವರ್ತಿಯ ರೀತಿಯಲ್ಲಿ ಮೆರೆದವರು ಎಂದು ಹೇಳಿ ಅವರ ಅಗಲುವಿಕೆಯಿಂದ ಸಮಾಜ ಶೂನ್ಯವಾಗಿದೆ ಎಂದು ಹೇಳಿ ಮನೆಯವರಿಗೆ ಅವರ ಅಗಲುವಿಕೆಯನ್ನು ಸಹಿಸಿ ಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಹೇಳಿ ಶ್ರದ್ದಾಂಜಲಿ ಅರ್ಪಿಸಿದರು.

ನಮಗೆಲ್ಲಾ ಮಾರ್ಗದರ್ಶಕರಾಗಿದ್ದರು- ನಾಗೇಶ ಗೌಡ
ಶ್ರೀ ಶಾಂತದುರ್ಗಾ ದೇವಸ್ಥಾನದ ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ನಾಗೇಶ ಗೌಡ ಮಾತನಾಡಿ  ವಿಷ್ಣು ಭಟ್ ರವರು ಪಕ್ಷದ ಮತ್ತು ಧಾರ್ಮಿಕ ಕ್ಷೇತ್ರದ ಅಭಿವೃದ್ಧಿಯಲ್ಲಿ ನಮಗೆ ಮಾರ್ಗದರ್ಶಕರಾಗಿದ್ದರು.ಶ್ರೀ ಶಾಂತದುರ್ಗಾ ದೇವಸ್ಥಾನ, ಗ್ರಾಮದ ದೈವಸ್ಥಾನ ಹಾಗೂ ಎರಡು ಭಜನಾ ಮಂದಿರಗಳ ಜೀರ್ಣೋದ್ಧಾರ ಕೆಲಸ ಕಾರ್ಯದಲ್ಲಿ ಆರ್ಥಿಕ  ಕ್ರೋಢಿಕರಣಕ್ಕೆ ನಮ್ಮೊಂದಿಗೆ ಬಹಳ ಶ್ರಮ ವಹಿಸಿದವರು.ಅಂತಹ ಉತ್ತಮ ವ್ಯಕ್ತಿತ್ವದ ಅವರನ್ನು ನಾವು ಕಳಕೊಂಡಿರುವುದು ಗ್ರಾಮಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಮನೆಯವರಿಗೆ ಅವರ ಅಗಲುವಿಕೆಯ ದುಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು  ಭಗವಂತ ಕರುಣಿಸಲಿ ಎಂದು ನಾಗೇಶ ಗೌಡ ಶ್ರದ್ದಾಂಜಲಿ ಅರ್ಪಿಸಿದರು.

ಬಹಳ ದೊಡ್ಡ ಗುಣವುಳ್ಳವರಾಗಿದ್ದರು- ಪದ್ಮನಾಭ ಬೋರ್ಕರ್
ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪದ್ಮನಾಭ ಬೋರ್ಕರ್ ಮಾತನಾಡಿ ವಿಷ್ಣು ಭಟ್ ರವರು ಇಡೀ ಸಮಾಜ ಮೆಚ್ಚುವಂತಹ ಕೆಲಸ ಮಾಡಿದವರು.ಬಡವರಿಗೆ, ಕಷ್ಟದಲ್ಲಿದ್ದವರಿಗೆ ಸಹಾಯ ಹಸ್ತ ನೀಡುವ ದೊಡ್ಡ ಗುಣವುಳ್ಳವರಾಗಿದ್ದರು.ಸಹಕಾರಿ ಸಂಘದ ನಿರ್ದೇಶಕರಾಗಿ, ಅಧ್ಯಕ್ಷರಾಗಿ ಸಂಘದ ಅಭಿವೃದ್ಧಿಗೆ ಶ್ರಮಿಸಿದವರು ಎಂದು ಹೇಳಿದರು.

 ನಿಡ್ಪಳ್ಳಿಗೆ ಒಂದು ಶಕ್ತಿಯಾಗಿದ್ದರು- ಪಿ.ಜಿ ಶಂಕರನಾರಾಯಣ ಭಟ್
ವಿಷ್ಣು ಭಟ್ ರವರ ಆತ್ಮೀಯ ಮಿತ್ರ ಪಿ.ಜಿ.ಶಂಕರನಾರಾಯಣ ಭಟ್ ದೈತೋಟ ಪಾಣಾಜೆ ಮಾತನಾಡಿ ತಾನು  ಬೆಳೆಯದಿದ್ದರೂ ಎಲ್ಲರನ್ನೂ ಬೆಳೆಸಿದವರು.ನನ್ನ ಆತ್ಮೀಯ ಮಿತ್ರರಾಗಿದ್ದ ಅವರ ಒಳ್ಳೆಯ ಗುಣದಿಂದ ಅವರು ನಿಡ್ಪಳ್ಳಿಗೆ ಒಂದು ಶಕ್ತಿಯಾಗಿದ್ದರು ಎಂದು ಹೇಳಿದರು.

 ಚುರುಕಿನ ಪಾದರಸದಂತಹ ವ್ಯಕ್ತಿತ್ವವುಳ್ಳವರು- ಹರೀಶ್ ಬೋರ್ಕರ್
ಯಾವುದೇ ಕಾರ್ಯಕ್ರಮ ನಡೆಸುವಾಗಲೂ ಅದರ ಪೂರ್ತಿ ಜವಾಬ್ದಾರಿ ವಹಿಸಿ ಸಮರ್ಥವಾಗಿ ನಿಭಾಯಿಸುವವರು ವಿಷ್ಣು ಭಟ್. ಬಹಳ ಚುರುಕಿನ ಪಾದರಸದಂತಹ ವ್ಯಕ್ತಿತ್ವ ಗುಣ ಅವರಲ್ಲಿತ್ತು. ನುಳಿಯಾಲು ರಸ್ತೆ ನಿರ್ಮಾಣ ಮತ್ತು ವಿದ್ಯುತ್ ಸಂಪರ್ಕವನ್ನು ಕಲ್ಪಿಸಲು ಶ್ರಮ ವಹಿಸಿದವರು ಎಂದು ಹೇಳಿ ತಮ್ಮ ಆತ್ಮೀಯ ಒಡನಾಟದ ಬಗ್ಗೆ ಹರೀಶ್ ಬೋರ್ಕರ್ ವಿವರಿಸಿದರು.

 ಸಮಾಜದ ಅಭಿವೃದ್ಧಿಯ ತುಡಿತ ಅವರಲ್ಲಿತ್ತು- ರವೀಂದ್ರ ಭಂಡಾರಿ
ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ರವೀಂದ್ರ ಭಂಡಾರಿ ಪಾಣಾಜೆ ಮಾತನಾಡಿ ತನಗಾಗಿ ಏನನ್ನೂ ಮಾಡದೆ ಸಮಾಜಕ್ಕೆ ಸರ್ವಸ್ವವನ್ನೂ ತ್ಯಾಗ ಮಾಡಿದವರು.ಪಾಣಾಜೆ ಗ್ರಾಮದೊಂದಿಗೂ ಅವರು ನಿಕಟ ಸಂಪರ್ಕವನ್ನು ಹೊಂದಿದ್ದರು.ಸಂಘದ ಮೂಲಕ ಕೆಲಸ ಮಾಡಿ ಹಿಂದುತ್ವದ ಕಾರ್ಯಗಳಲ್ಲಿಯೂ ಕೆಲಸ ಮಾಡಿ ಸಮಾಜದ ಅಭಿವೃದ್ಧಿಯ ತುಡಿತ ಅವರಲ್ಲಿತ್ತು ಎಂದು ಹೇಳಿದರು.

 ಪರೋಪಕಾರಿ ವ್ಯಕ್ತಿ- ದಿವಾಕರ ರಾವ್ ಬ್ರಹ್ಮರಗುಂಡ ಮಾತನಾಡಿ ವಿಷ್ಣು ಭಟ್ ರವರು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಒಬ್ಬ ಪರೋಪಕಾರಿ ವ್ಯಕ್ತಿಯಾಗಿದ್ದರು. ಎಲ್ಲಾ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ಮಾರ್ಗದರ್ಶನ ನೀಡಿದ ಮಹಾನ್ ವ್ಯಕ್ತಿಯಾಗಿದ್ದರು ಎಂದು ಹೇಳಿದರು.

ಒಬ್ಬ ಅಜಾತ ಶತ್ರು ಎನಿಸಿದ್ದರು- ವೆಂಕಟ್ರಮಣ ಬೋರ್ಕರ್
ನಿಡ್ಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್ ಮಾತನಾಡಿ ವಿಷ್ಣು ಭಟ್ ರವರು ಒಂದು ರಾಜನಂತೆ ಸಮಾಜದಲ್ಲಿ ತನ್ನ ಕರ್ತವ್ಯ ನಿರ್ವಹಿಸಿದವರು.ಯಾರು ಸಹಾಯ ಯಾಚಿಸಿ ಬಂದರೂ ಅವರಿಗೆ ಸಹಾಯ ಮಾಡುವ ಉತ್ತಮ ಗುಣವುಳ್ಳವರಾಗಿದ್ದ ಅವರು ಅಜಾತ ಶತ್ರುವಿನಂತೆ ಬದುಕಿದ್ದಾರೆ. ಅಂತಹ ಒಬ್ಬ ಉತ್ತಮ ವ್ಯಕ್ತಿಯನ್ನು ನಿಡ್ಪಳ್ಳಿ ಕಳೆಕೊಂಡದ್ದು ದುಖ ತಂದಿದೆ ಎಂದು ತಮ್ಮ ಬಹು ಕಾಲದ ಒಡನಾಟದ ಬಗ್ಗೆ ವಿವರಿಸಿದರು.

ನಂತರ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ದಾಂಜಲಿ ಸಲ್ಲಿಸಲಾಯಿತು.ಸತ್ಯನಾರಾಯಣ ರೈ ನುಳಿಯಾಲು ಕಾರ್ಯಕ್ರಮ ನಿರೂಪಿಸಿದರು.

ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರೀಶ್ ಕುಮಾರ್ ಹಾಗೂ ಸಿಬ್ಬಂದಿಗಳು,ನಿರ್ದೇಶಕರು, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣ ರೈ ಮತ್ತು ಸದಸ್ಯರು,ಗ್ರಾಮ ಪಂಚಾಯತ್ ಸದಸ್ಯರು ಹಾಗೂ  ನಿಡ್ಪಳ್ಳಿ ಮತ್ತು ಪಾಣಾಜೆ ಗ್ರಾಮದ ಗ್ರಾಮಸ್ಥರು ಪಾಲ್ಗೊಂಡರು. 

LEAVE A REPLY

Please enter your comment!
Please enter your name here