ಹಿರೇಬಂಡಾಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮ

0

ಹಿರೇಬಂಡಾಡಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಸರ್ಕಾರಿ ಪ್ರೌಢಶಾಲೆ ಹಿರೇಬಂಡಾಡಿ ಇದರ ಸಂಯುಕ್ತ ಆಶ್ರಯದಲ್ಲಿ 2024-25ನೇ ಸಾಲಿನ ಸಮುದಾಯದತ್ತ ಶಾಲಾ ಕಾರ್ಯಕ್ರಮ ಅ.30ರಂದು ನಡೆಯಿತು.


ಶಾಲಾ ಎಸ್‌ಡಿಎಂಸಿ ನೂತನ ಅಧ್ಯಕ್ಷ ರವೀಂದ್ರ ಪಟಾರ್ತಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಗುರು ಶ್ರೀಧರ್ ಭಟ್‌ರವರು ಶೈಕ್ಷಣಿಕ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು. ಸನ್ಮಾನ ಸ್ವೀಕರಿಸಿದ ಸತೀಶ್ ಶೆಟ್ಟಿ ಹೆನ್ನಾಳರವರು ಮಾತನಾಡಿ, ತನ್ನ ಅಧಿಕಾರಾವಧಿಯಲ್ಲಿ ಹತ್ತೂರಲ್ಲೂ ಖ್ಯಾತಿ ಪಡೆದ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜಿಸಲಾಗಿದ್ದು ಇದಕ್ಕೆ ಸಹಕರಿಸಿದ ಊರ ಪರವೂರ ಜನರ ಸಹಕಾರಕ್ಕೆ ಅಭಾರಿಯಾಗಿದ್ದೇನೆ ಎಂದರು. ಹಿರೇಬಂಡಾಡಿ ಗ್ರಾ.ಪಂ.ಅಧ್ಯಕ್ಷರಾದ ಸದಾನಂದ ಶೆಟ್ಟಿ, ಉಪಾಧ್ಯಕ್ಷೆ ಶಾಂಭವಿ, ಎಸ್‌ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು.


ಸನ್ಮಾನ/ಬೀಳ್ಕೊಡುಗೆ:
ನಿಕಟಪೂರ್ವ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿ ಹೆನ್ನಾಳ ಅವರನ್ನು ಸನ್ಮಾನಿಸಲಾಯಿತು. ನಿವೃತ್ತಿಯಾದ ಅಕ್ಷರ ದಾಸೋಹದ ಕಾರ್ಯಕರ್ತೆ ಜಾನಕಿಯವರನ್ನು ಸನ್ಮಾನಿಸಿ, ಬೀಳ್ಕೊಡಲಾಯಿತು. ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕಿ ಲಲಿತಾ ಕೆ.ಅವರು ಸನ್ಮಾನಿತರನ್ನು ಪರಿಚಯಿಸಿದರು. ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಾದ ಯಕ್ಷಿತ, ಅನುಶ್ರೀ, ಯಜ್ಞಶ್ರೀ, ಮಹಮ್ಮದ್ ಶಾಕೀರ್‌ರವರನ್ನು ಅಭಿನಂದಿಸಲಾಯಿತು. ರಂಗೋತ್ಸವ ಚಿತ್ರಕಲಾ ಪರಿಷತ್ತಿನಿಂದ ನಡೆಸಲ್ಪಟ್ಟ ಚಿತ್ರಕಲಾ ಪರೀಕ್ಷೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಜಿಲ್ಲಾಮಟ್ಟದ ಮಕ್ಕಳ ಹಕ್ಕು ಸಂಸತ್ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಗುರುತಿಸಲಾಯಿತು. ವಿವಿಧ ಸ್ಪರ್ಧೆಗಳ ವಿಜೇತರ ಹೆಸರನ್ನು ಆಂಗ್ಲ ಭಾಷ ಶಿಕ್ಷಕ ವಸಂತಕುಮಾರ್ ಹಾಗೂ ಹಿಂದಿ ಭಾಷಾ ಶಿಕ್ಷಕಿ ಆರತಿ ಅವರು ವಾಚಿಸಿದರು.


ಗಣಿತ ಶಿಕ್ಷಕಿ ಉಷಾಕಿರಣ ಸ್ವಾಗತಿಸಿ, ವಿಜ್ಞಾನ ಶಿಕ್ಷಕ ಮನೋಹರ ಯಂ. ವಂದಿಸಿದರು. ಕನ್ನಡ ಶಿಕ್ಷಕಿ ಮಲ್ಲಿಕಾ ನಿರೂಪಿಸಿದರು. ಎಂಟನೇ ತರಗತಿಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ನಂತರ ಪ್ರತಿ ತರಗತಿಯ ಪೋಷಕರು ಮತ್ತು ಶಿಕ್ಷಕರು ವಿದ್ಯಾರ್ಥಿಗಳ ಕಲಿಕಾ ಪ್ರಗತಿಯ ಬಗ್ಗೆ ಸಂವಾದ ನಡೆಸಿದರು. ಇದರ ಪ್ರಾಯೋಜಕತ್ವವನ್ನು ಎಸ್.ಡಿ.ಎಂ.ಸಿ.ಯ ನಿಕಟ ಪೂರ್ವ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿ ಹೆನ್ನಾಳ ಅವರ ಪ್ರಾಯೋಜಕತ್ವದಲ್ಲಿ ಮಧ್ಯಾಹ್ನ ಎಲ್ಲರಿಗೂ ಸಿಹಿ ಭೋಜನ ನೀಡಲಾಯಿತು.

LEAVE A REPLY

Please enter your comment!
Please enter your name here