ಬಾಳೆ ಕೊಚ್ಚಿ ನೀರಿನ ಸ್ಥಾವರದ ವಾಟರ್ ಮ್ಯಾನ್ ಬದಲಾವಣೆ ಬಗ್ಗೆ ‌ಪರ ವಿರೋಧ ಚರ್ಚೆ -ಗೊಂದಲಕ್ಕೆ ತೆರೆ ಎಳೆದ ಪಿ.ಡಿ.ಓ

0

ಅರಿಯಡ್ಕ: ಅರಿಯಡ್ಕ ಗ್ರಾಮ ಪಂಚಾಯತ್ ವಿಶೇಷ ಸಭೆ ಅ.30 ರಂದು ಪಂಚಾಯತ್ ಸಭಾಂಗಣದಲ್ಲಿ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.


ಮಾಡ್ನೂರು ಗ್ರಾಮದ ಬಾಳೆ ಕೊಚ್ಚಿ ನೀರಿನ ಸ್ಥಾವರದ ವಾಟರ್ ಮ್ಯಾನ್ ಮಹಾಲಿಂಗ ನಾಯ್ಕ ರವರನ್ನು ಕಳೆದ ಸಾಮಾನ್ಯ ಸಭೆಯಲ್ಲಿ ಬದಲಾವಣೆ ಮಾಡಿದ್ದನ್ನು ವಿರೋಧಿಸಿ,ಅವರನ್ನೇ ಮುಂದುವರಿಸಬೇಕೆಂದು ಸದಸ್ಯ ವಿಜೀತ್ ಕೆರೆ ಮಾರು ಆಗ್ರಹಿಸಿದರು.ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಪಂಚಾಯತ್ ಸದಸ್ಯರಾದ ಮೋನಪ್ಪ ಪೂಜಾರಿ ಹಾಗೂ ಜಯಂತಿ ಪಟ್ಟು ಮೂಲೆ ಬಳಕೆದಾರರ ಸಭೆಯಲ್ಲಿ ಎಲ್ಲರ ಅಪೇಕ್ಷೆಯಂತೆ ನೀಲಪ್ಪ ನಾಯ್ಕ ರವರನ್ನು ವಾಟರ್ ಮ್ಯಾನ್ ಆಗಿ ನೇಮಿಸಲಾಗಿದೆ. ಪುನಃ ವಾಟರ್ ಮ್ಯಾನ್ ಬದಲಾವಣೆ ಮಾಡುವುದು ಸರಿಯಲ್ಲ ಅಲ್ಪ ಸ್ವಲ್ಪ ಗೊಂದಲವಿದ್ದರೆ, ಬಳಕೆದಾರರ ಸಭೆ ಕರೆದು ಗೊಂದಲ ನಿವಾರಿಸುವುದು ಒಳಿತು ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ ಈ ನೀರಿನ ಸ್ಥಾವರದ ವಿಚಾರವಾಗಿ ದಿನೇ ದಿನೇ ಪೋನ್ ಕಾಲ್ ಗಳು ಹೆಚ್ಚು ಹೆಚ್ಚು ಬರುತ್ತಿವೆ.ಇಲ್ಲಿಯ ಸಮಸ್ಯೆಯಿಂದ ನನಗೆ ಹಿಂಸೆ ಆಗುತ್ತಿದೆ.ಈ ಹಿಂದೆ ಮಹಾಲಿಂಗ ನಾಯ್ಕ ರವರು ಯಾವುದೇ ಫಲಾಪೇಕ್ಷೆ ಇಲ್ಲದೆ ಕಳೆದ ಒಂದೂವರೆ ವರ್ಷದಿಂದ ನೀರು ಸರಬರಾಜು ಮಾಡುತ್ತಿದ್ದರು, ಅವರಿಗೆ ಗೌರವ ಧನ ಕೂಡ ಕೊಟ್ಟಿಲ್ಲ,ಆದರೂ ಬಳಕೆದಾರರ ಕೇಳಿಕೆ ಮೇರೆಗೆ ಬದಲಾವಣೆ ಮಾಡಲಾಗಿದೆ ಎಂದರು.ಈ ವಿಚಾರವಾಗಿ ಮಾತನಾಡಿದ ಪಿ.ಡಿ.ಓ ಸುನಿಲ್ ರವರು ಕೆಲವೊಂದು ನೀರಿನ ಸ್ಥಾವರದಲ್ಲಿ ನೀರನ್ನು ಕೃಷಿಗೆ ಬಳಸುವುದು ನನ್ನ ಗಮನಕ್ಕೆ ಬಂದಿದೆ. ಕುಡಿಯುವ ನೀರನ್ನು ಕೃಷಿಗೆ ಬಳಸುವುದು ಸರಿಯಲ್ಲ., ಬಾಳೆ ಕೊಚ್ಚಿ ವಿಚಾರವಾಗಿ ಗೊಂದಲ ಬೇಡ.ಕಳೆದ ಬಾರಿಯ ನಿರ್ಣಯದಂತೆ ನೀಲಪ್ಪ ರವರೇ ಈ ನೀರಿನ ಸ್ಥಾವರಕ್ಕೆ ವಾಟರ್ ಮ್ಯಾನ್ ಎಂದು ಗೊಂದಲಕ್ಕೆ ತೆರೆ ಎಳೆದರು.


ಕ್ರೀಡಾ ಕೂಟದ ಆಮಂತ್ರಣ ನಮಗಿಲ್ಲ- ಭಾರತಿ ವಸಂತ್
ಇತ್ತೀಚೆಗೆ ಸರ್ಕಾರಿ ಪ್ರೌಢಶಾಲೆ ಪಾಪೆಮಜಲು ಇಲ್ಲಿ ವಲಯ ಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿತ್ತು.ಆದರೆ ನಮಗೆ ಆಮಂತ್ರಣ ಪತ್ರಿಕೆ ನೀಡಿಲ್ಲ.ನಮ್ಮ ಪಂಚಾಯತ್ ವ್ಯಾಪ್ತಿಯ ಏಕೈಕ ಸರ್ಕಾರಿ ಪ್ರೌಢಶಾಲೆ ಇದಾಗಿದ್ದು, ನಮ್ಮನ್ನು ಈ ವಿದ್ಯಾ ಸಂಸ್ಥೆ ಮರೆತಂತಿದೆ .ಇದು ಖಾಸಗಿ ಶಾಲೆಯೇ…..? ಅಥವಾ ನಮ್ಮ ಸರ್ಕಾರಿ ಶಾಲೆಯೇ….? ಎಂಬ ಸಂದೇಹ ಉಂಟಾಗಿದೆ ಎಂದರು. ಈ ವಿಚಾರವಾಗಿ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿಯವರು ಮಾತನಾಡಿ, ಕ್ರೀಡಾ ಕೂಟದ ಆಮಂತ್ರಣ ಹಾಗೂ ಸಮುದಾಯ ದತ್ತ ಶಾಲೆಯ ಆಮಂತ್ರಣ ನನ್ನ ಟೇಬಲ್ ಮೇಲೆ ಇಟ್ಟು ಹೋಗಿದ್ದಾರೆ.ಒಂದು ಪೋನ್ ಕರೆ ಮಾಡಿ ತಿಳಿಸುವ ವಾಡಿಕೆಯೂ ಸಂಸ್ಥೆಯಲ್ಲಿ ಇಲ್ಲ.ಮೊದಲೆಲ್ಲಾ ಈ ರೀತಿಯ ಅವ್ಯವಸ್ಥೆಗಳು ಇರಲಿಲ್ಲ.ನಮಗೆ ಅವಮಾನ ಮಾಡುವ ರೀತಿಯಲ್ಲಿ ನಡೆದು ಕೊಳ್ಳುವುದು ಸರಿ ಅಲ್ಲ ಎಂದರು.ಈ ವಿಚಾರವಾಗಿ ಪಂಚಾಯತ್ ಉಪಾಧ್ಯಕ್ಷೆ ಮೀನಾಕ್ಷಿ ಪಾಪೆ ಮಜಲು ಮಾತನಾಡಿ, ನನಗೆ ಕೆಲವೊಂದು ಸಲ ಇಂತಹ ಅನುಭವಗಳು ಆಗಿವೆ.ಅಲ್ಲಿ ಗೌರವ ಸಿಗುವುದು ವಿರಳ ಎಂದರು.


ನಮ್ಮ ಪಂಚಾಯತ್ ಗೆ ಈ ಸಾಲಿನಲ್ಲಿ ವಸತಿ ಯೋಜನೆಯಡಿ ಮನೆ ಮಂಜೂರು ಆಗಿರುವುದು ಕಡಿಮೆ.ಈ ಬಗ್ಗೆ ಪ.ಪಂಗಡ,ಪ.ಜಾತಿ ಹಾಗೂ ಇತರೆಗೆ ಹೆಚ್ಚುವರಿ ಮನೆ ನೀಡಬೇಕೆಂದು ಸದಸ್ಯರಾದ ರಾಜೇಶ್ ಮಣಿಯಾಣಿ ತ್ಯಾಗ ರಾಜೆ ಮತ್ತು ಮೋನಪ್ಪ ಪೂಜಾರಿ ಕೆರೆ ಮಾರು ಒತ್ತಾಯಿಸಿದರು.ಈ ಬಗ್ಗೆ ಸರ್ಕಾರಕ್ಕೆ ಬರೆಯಲು ನಿರ್ಣಯಿಸಲಾಯಿತು.
ಈ ಬಾರಿ ಪ್ರಕೃತಿ ವಿಕೋಪದಿಂದ ಕೆಲವೊಂದು ಮನೆಗಳಿಗೆ ಹಾನಿಯಾಗಿದೆ.ಆದುದರಿಂದ‌ಮನೆ ರಿಪೇರಿ ಮಾಡಲು ಪ.ಪಂಗಡ ಮತ್ತು ಪ.ಜಾತಿಯವರಿಗೆ ಸ್ವಂತ ನಿಧಿ ಯಿಂದ ಹಾನಿ ಆಗಿರುವ ಮನೆಗಳಿಗೆ 25% ರೈ ನಿಧಿಯಲ್ಲಿ ಅನುದಾನ ನೀಡಲು ನಿರ್ಣಯಿಸಲಾಯಿತು.


ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆಗಳ ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ ಗುತ್ತಿಗೆದಾರರು ಅಥವಾ ಇಂಜಿನಿಯರ್ ಸ್ಥಳೀಯ ಗ್ರಾಮ ಪಂಚಾಯತ್ ಗೆ ಮಾಹಿತಿ ನೀಡುವಂತೆ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿಯವರು ಪಿಡಬ್ಲ್ಯೂಡಿ ಇಲಾಖೆಗೆ ಪತ್ರ ಬರೆಯಲು ಸೂಚಿಸಿದರು.
ಅರಿಯಡ್ಕ ಗ್ರಾಮದ ಕೊಳ್ಳಾಜೆ -ಕೆರೆಮೂಲೆ ರಸ್ತೆಯನ್ನು ಅಭಿವೃದ್ಧಿ ಮಾಡಿ, ಪಂಚಾಯತ್ ರಸ್ತೆಯಾಗಿ ದಾಖಲು ಮಾಡ ಬೇಕೆಂದು ಸದಸ್ಯೆ ಉಷಾ ರೇಖಾ ರೈ ಅಮೈ ಒತ್ತಾಯಿಸಿದರು.ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.


ಅಭಿನಂದನೆ…….
ವಿಧಾನ ಪರಿಷತ್ ಉಪಚುನಾವಣೆಯಲ್ಲಿ ಗೆಲುವು ದಾಖಲಿಸಿದ ಕಿಶೋರ್ ಕುಮಾರ್ ಪುತ್ತೂರು ರವರಿಗೆ ಪಂಚಾಯತ್ ಪರವಾಗಿ ಸದಸ್ಯೆ ಸೌಮ್ಯ ಬಾಲಸುಬ್ರಹ್ಮಣ್ಯ ಅಭಿನಂದನೆ ಸಲ್ಲಿಸಿದರು.


ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷೆ ಮೀನಾಕ್ಷಿ ಪಾಪೆ ಮಜಲು,ಪಿ.ಡಿ.ಓ ಸುನಿಲ್ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಮೋನಪ್ಪ ಪೂಜಾರಿ ಕೆರೆ ಮಾರು,ಸಾವಿತ್ರಿ ಪೊನ್ನೆತ್ತಳ್ಕ, ಭಾರತಿ ವಸಂತ್ ಕೌಡಿಚ್ಚಾರು, ಪುಷ್ಪ ಲತಾ ಮರತ್ತಮೂಲೆ, ರೇಣುಕಾ ಸತೀಶ್ ಕರ್ಕೆರ, ರಾಜೇಶ್ ಮಣಿಯಾಣಿ ತ್ಯಾಗ ರಾಜೆ, ಹರೀಶ್ ರೈ ಜಾರತ್ತಾರು,ಉಷಾ ರೇಖಾ ರೈ ಅಮೈ, ಲೋಕೇಶ್ ಚಾಕೋಟೆ, ಅನಿತಾ ಆಚಾರಿ ಮೂಲೆ,ವಿಜೀತ್ ಕೆರೆ ಮಾರು , ಸೌಮ್ಯ ಬಾಲಸುಬ್ರಹ್ಮಣ್ಯ, ಜಯಂತಿ ಪಟ್ಟು ಮೂಲೆ, ಹೇಮಾವತಿ ಚಾಕೋಟೆ, ನಾರಾಯಣ ನಾಯ್ಕ ಚಾಕೋಟೆ, ವಿನುತ ಬಳ್ಳಿಕಾನ, ಉಪಸ್ಥಿತರಿದ್ದರು.ಕಾರ್ಯದರ್ಶಿ ಶಿವರಾಮ ಮೂಲ್ಯ ಸ್ವಾಗತಿಸಿ, ವರದಿ ವಾಚಿಸಿ, ಇಲಾಖಾ ಮಾಹಿತಿ ನೀಡಿ ವಂದಿಸಿದರು.

LEAVE A REPLY

Please enter your comment!
Please enter your name here